ಬಾಲಕರ ಅಪಹರಣ: ಸಾರ್ವಜನಿಕರಿಗೆ ಹೆದರಿ ಬಿಟ್ಟೋಡಿದ ದುಷ್ಕರ್ಮಿಗಳು
ರಾಮನಗರ: ಮನೆಪಾಠಕ್ಕೆ ತೆರಳುತ್ತಿದ್ದ ಬಾಲಕರನ್ನು ಅಪಹರಣ ಮಾಡಿ, ಸಾರ್ವಜನಿಕರಿಗೆ ಹೆದರಿ ಅರ್ಧದಾರಿಯಲ್ಲಿ ಬಿಟ್ಟು ಹೋದ ಘಟನೆ ಸೋಮವಾರ ಸಂಜೆ ಪಟ್ಟಣದ ಚಾಮುಂಡೇಶ್ವರಿ ಬಡಾವಣೆಯಲ್ಲಿ ನಡೆದಿದೆ. ಪಟ್ಟಣದ ತಿಲಕ್ ಮೆಮೋರಿಯಲ್ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ನಾಗರಾಜೇ ಅರಸ್ ಪುತ್ರ ರಾಘವೇಂದ್ರ ಮತ್ತು ಕೃಷ್ಣಮೂರ್ತಿ ಪುತ್ರ ಪ್ರಜ್ವಲ್ ಅಪಹರಣಕ್ಕೀಡಾದ ವಿದ್ಯಾರ್ಥಿಗಳಾಗಿದ್ದು, ಸೋಮವಾರ ಸಂಜೆ ಶಾಲೆ ಮುಗಿಸಿ ಮನೆಪಾಠಕ್ಕೆ ತೆರಳುತ್ತಿದ್ದಾಗ ಟಾಟಾ ಸುಮೋದಲ್ಲಿ ಆಗಮಿಸಿದ ಆಗಂತುಕರು ಮಕ್ಕಳನ್ನು ಅಪಹರಣ ಮಾಡಿದ್ದಾರೆ. ಟಾಟಾ ಸುಮೋ ಚನ್ನಪಟ್ಟಣ ಕೆಂಗಲ್ ಸಮೀಪ ಬರುತ್ತಿದ್ದಂತೆ ಗಾಬರಿಗೊಂಡ ಬಾಲಕರು ಕಿರುಚಿ ಕೊಂಡಿದ್ದಾರೆ. ವಾಹನದ ಸಮೀಪ ಆಗಮಿಸಿದ ದ್ವಿಚಕ್ರವಾಹನ ಸವಾರ ಸುಮೋವನ್ನು ಅಡ್ಡಗಟ್ಟಿ ಪೊಲೀಸರಿಗೆ ಕರೆಮಾಡಲು ಮುಂದಾದಾಗ ಆತಂಕಗೊಂಡ ಅಪಹರಣಕಾರರು ಮಕ್ಕಳನ್ನು ಕೆಳಗೆ ಇಳಿಸಿ ಪರಾರಿಯಾಗಿದ್ದಾರೆ. ಆಪೆ ಆಟೋದಿಂದ ರಾಮನಗರ ತಲುಪಿದ ಬಾಲಕರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದು, ಈ ಸಂಬಂಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅರಸನಹಳ್ಳಿಯಲ್ಲಿ ಹೊಡೆದಾಟ
ಸೂಲಿಬೆಲೆ: ಅರಸನಹಳ್ಳಿ ಗ್ರಾಮದಲ್ಲಿ ನಿವೇಶನ ವಿಚಾರವೊಂದರ ಬಗ್ಗೆ ಎರಡು ಗುಂಪುಗಳ ನಡುವೆ ಮಾತಿನ ಚಕಮುಖಿ ಹೊಡೆದಾಟಕ್ಕೆ ಪರಿವರ್ತನೆಯಾಗಿ ಕೆಲವೇ ಗಂಟೆಗಳಲ್ಲಿ 6 ಪ್ರಕರಣಗಳು ದಾಖಲಾಗಿವೆ. ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ. ಸದ್ಯ ಅರಸನಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಿದ್ದಾರೆ. ಗಾಯಗೊಂಡ ಆಸ್ಪತ್ರೆ ದಾಖಲಾಗಿರುವ ಗಾಯಾಳುಗಳನ್ನು ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಡಿಕ್ಕಿ: ಬೈಕ್ ಸವಾರ ಸಾವು
ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಕುಲವನಹಳ್ಳಿಯ ಭಾರತ್ ಪೆಟ್ರೋಲ್ ಬಂಕ್ ಬಳಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೃತ ಬೈಕ್ ಸವಾರನನ್ನು ಮಳೆಕತ್ತಿಗನೂರು ವಾಸಿ ತಿಮ್ಮಯ್ಯ (40) ಎಂದು ಗುರುತಿಸಲಾಗಿದೆ. ಈತ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೆದ್ದಾರಿಗೆ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಪ್ಗೆ ಬಿದ್ದು ಮಹಿಳೆ ಸಾವು
ದೊಡ್ಡಬಳ್ಳಾಪುರ: ಹೊಸದಾಗಿ ನಿರ್ಮಿಸಿದ್ದ ನೀರಿನ ಸಂಪ್ಗೆ ಪೂಜೆ ಮಾಡಲು ಹೋಗಿದ್ದ ವಿವಾಹಿತ ಮಹಿಳೆಯೊಬ್ಬರು ಅದೇ ಸಂಪ್ಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಾಘಟ್ಟ ಗ್ರಾಮದಲ್ಲಿ ನಡೆದಿದೆ. ಅರ್ಚನ(22) ಸಾವನ್ನಪ್ಪಿರುವ ದುರ್ದೈವಿ. ಘಟನೆ ನಡೆದಾಗ ಆಕೆಯ ಪತಿ ನರಸಿಂಹಮೂರ್ತಿ ದೊಡ್ಡಬಳ್ಳಾಪುರಕ್ಕೆ ತೆರಳಿದ್ದರು ಎನ್ನಲಾಗಿದ್ದು, ಸಂಪ್ 8 ಅಡಿ ಆಳವಿತ್ತು. ನೀರು ತುಂಬಿದ್ದರಿಂದ ಆಕೆ ಈಜಲು ಬಾರದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವೃತ್ತ ಆರಕ್ಷಕ ನಿರೀಕ್ಷಕ ಶಿವಾರೆಡ್ಡಿ, ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ ಭೇಟಿ ನೀಡಿದ್ದರು.
ಬಾಳೆಗೊನೆ ಕಳವು ಮಾಡಿ ಆಟೋದಲ್ಲಿ ಸಾಗಿಸುತ್ತಿದ್ದ ಕಳ್ಳರ ಬಂಧನ
ಮಾಗಡಿ: ಬಾಳೆಗೊನೆ ಕಳವು ಮಾಡಿ ಆಟೋದಲ್ಲಿ ಸಾಗಿಸುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ, ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ಗೆಜ್ಜಗಾರಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ಗೆಜ್ಜಗಾರಕುಪ್ಪೆ ಗ್ರಾಮದ ರೈತರ ತೋಟಗಳಲ್ಲಿ ನುಗ್ಗಿ ಬಾಳೆಗೊನೆ ಕಳ್ಳತನ ಮಾಡಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನ ವ್ಯಕ್ತವಾಗಿತ್ತು. ಸುಮಾರು 99ಕ್ಕೂ ಹೆಚ್ಚು ಬಾಳೆಗೊನೆ ಕಳ್ಳತನ ಮಾಡಿ ಸಾಗಿಸುತ್ತಿದ್ದಾಗ ಕೊಟ್ಟಗಾರಹಳ್ಳಿ, ಮತ್ತೀಕೆರೆ ಗ್ರಾಮಸ್ಥರಿಗೆ ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ನಂತರ ಗೆಜ್ಜಗಾರಕುಪ್ಪೆ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.
ಗ್ರಾಮಸ್ಥರು ಕಳ್ಳರನ್ನು ಹಿಡಿದು ಕಟ್ಟಿಹಾಕಿ, ಥಳಿಸಿ ನಂತರ ಮಾಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮಾಗಡಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಸ್ ಚಾಲಕ, ನಿರ್ವಾಹಕನ ಮೇಲೆ ಮಚ್ಚಿನಿಂದ ಹಲ್ಲೆ
ಚನ್ನಪಟ್ಟಣ ಸಾರಿಗೆ ಸಂಸ್ಥೆಯ ಬಸ್ ಅನ್ನು ಅಡ್ಡಗಟ್ಟಿದ ನಾಲ್ಕು ಮಂದಿ ಆಗಂತುಕರು ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಚೇತನ ಸಮುದಾಯದ ಮುಂಭಾಗ ನಡೆದಿದೆ. ಘಟನೆಯಲ್ಲಿ ಚಾಲಕ ವೆಂಕಟೇಶ್ ತೀವ್ರ ಗಾಯಗೊಂಡಿದ್ದು, ನಿರ್ವಾಹಕ ಹರೀಶ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡು ದ್ವಿಚಕ್ರವಾಹನದಲ್ಲಿ ಬಂದ ನಾಲ್ಕು ಮಂದಿ ಆಗಂತುಕರು ಬಸ್ ಅಡ್ಡಗಟ್ಟಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಆಗಮಿಸಿದ್ದರಿಂದ ಗಾಬರಿ ಗೊಂಡು ದ್ವಿಚಕ್ರವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಗಾಯಾಳುಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ವಿಷಸೇವಿಸಿ ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಲೇಕೇರಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಪಾರೇದೊಡ್ಡಿ ಗ್ರಾಮದ ಜಯಕುಮಾರ್ (32) ಮೃತ ದುರ್ದೈವಿಯಾಗಿದ್ದು, ಎಲೇಕೇರಿ ಗ್ರಾಮದ ಹೊರವಲಯದಲ್ಲಿ ಈತನ ಶವ ಪತ್ತೆಯಾಗಿದೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಅಪರಿಚಿತ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಪಟ್ಟಣದ ಕನಕನಗರ ಬಸ್ ನಿಲ್ದಾಣದಲ್ಲಿ ಭಾನುವಾರ ಸಂಭವಿಸಿದೆ. 65 ಪ್ರಾಯದ ಮೃತ ವ್ಯಕ್ತಿ ಬಸ್ ನಿಲ್ದಾಣದಲ್ಲಿ ಸಾವಿಗೀಡಾಗಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಪೂರ್ವ ಠಾಣೆ ಪೊಲೀಸರು ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶೈತ್ಯಾಗಾರದಲ್ಲಿರಿಸಿದ್ದು ಮೃತನ ವಾರಸುದಾರರಿಗಾಗಿ ಶೋಧ ನಡೆಸಿದ್ದಾರೆ.
ಮಹಿಳೆ ಸರ ಕಳವು
ಬಸ್ ಹತ್ತುವಾಗ ಮಹಿಳೆಯ ಕತ್ತಿನಲ್ಲಿದ್ದ 45 ಗ್ರಾಂ. ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಜಿ ಕಲ್ಯಾಣ ಮಂಟಪದ ಮುಂಭಾಗ ಭಾನುವಾರ ರಾತ್ರಿ ನಡೆದಿದೆ. ಆರ್. ಜ್ಯೋತಿ ಎಂಬುವರು ಸಂಬಂಧಿಕರ ಆರತಕ್ಷತೆ ಮುಗಿಸಿ ಕೊಂಡು ತನ್ನ ಊರಿಗೆ ಹಿಂದಿರುಗಲು ಬಸ್ಹ್ತ್ತುವಾಗ ಹಿಂದಿನಿಂದ ಬಂದ ಕಳ್ಳ ಕುತ್ತಿಗೆಯಲ್ಲಿದ್ದ 30 ಗ್ರಾಂ ಮಾಂಗಲ್ಯದ ಸರ, ಹಾಗೂ 15 ಗ್ರಾಂ ಒಂದು ಎಳೆ ಸರವನ್ನು ಕಲವು ಮಾಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.