ಮಕ್ಕಳ ಪ್ರತಿಭೆಗೆ ಸಹಕಾರ ಮುಖ್ಯ: ಸಂದೀಪ್ ಕೌರಿ
ಸೂಲಿಬೆಲೆ: ಕಲಿಕೆಯಲ್ಲಿ ತೊಡಗಿರುವ ಮಕ್ಕಳ ಕಲೆ, ಸಾಹಿತ್ಯ ಸೇರಿದಂತೆ ಹಲವು ವಿಷಯಗಳಲ್ಲಿ ಪ್ರತಿಭಾವಂತರಾಗಿ ಬೆಳೆಯಲು ಪೋಷಕರ ಸಹಕಾರ ಬಹುಮುಖ್ಯ ಎಂದು ಸೂಲಿಬೆಲೆ ಪೊಲೀಸ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ಸಂದೀಪ್ ಕೌರಿ ಹೇಳಿದ್ದಾರೆ. ಸೂಲಿಬೆಲೆ ಹೋಬಳಿ ಚಿಕ್ಕಅರಳಿಗೆರೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿ ಮಗು ಕಡ್ಡಾಯವಾಗಿ ಶಾಲೆಗೆ ಹೋಗಿ ಕಲಿಯುವಂತ ವಾತಾವರಣವನ್ನು ಪೋಷಕರು ಸೃಷ್ಟಿಸಬೇಕು. ಕಲಿಕೆ ಮಗುವಿನ ಸರ್ವತೋಮುಖ ಬೆಳೆವಣಿಗೆಗೆ ಕಾರಣವಾಗುವುದಲ್ಲದೇ ಸ್ಯಾಸ್ಥ್ಯ ಸಮಾಜ ನಿರ್ಮಾಣಕ್ಕೆ ಉತ್ತಮ ಅಡಿಪಾಯವಾಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಮಗುವಿನ ಕಲಿಕೆಯತ್ತ ಆಕರ್ಷಣೆ ಹೊಂದುವಂತೆ ಪ್ರೇರೇಪಿಸಬೇಕು. ಮಕ್ಕಳು ಹಕ್ಕುಗಳನ್ನು ಒದಗಿಸುವಲ್ಲಿ ಹೆಚ್ಚು ಕ್ರಿಯಾಶೀಲತೆಯನ್ನು ರೂಡಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು. ಮಕ್ಕಳ ದಿನಾಚರಣೆ ಅಂಗವಾಗಿ ಪೊಲೀಸ್ ಇಲಾಖೆ ವತಿಯಿಂದಲೇ ಎಲ್ಲ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಅಪರಾಧ ವಿಭಾಗ ಪಿಎಸ್ಐ ನವೀನ್ ಕುಮಾರ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.