ರುಡಾ- ಮುಡಾ ವಂಚನೆ: ಕೊನೆಗೂ ಸಿಬಿಐ ತನಿಖೆ
ಕೆ.ಎನ್.ರವಿ /ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ಮಂಡ್ಯ /ರಾಮನಗರ ನ.25
ರುಡಾ ಮತ್ತು ಮುಡಾ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸರ್ಕಾರ ಕಡೆಗೂ ಸಿಬಿಐ ತನಿಖೆಗೆ ಒಪ್ಪಿಸಿದೆ. ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣದಲ್ಲಾದರೂ ಆಗಮಿಸುವ ಸಾಧ್ಯತೆ ಇದ್ದು, ಅವರಿಗೆ ಹಸ್ತಾಂತರಿಸಲು ತನಿಖಾಧಿಕಾರಿಗಳು ಕಡತ ಸಿದ್ಧಪಡಿಸಿದ್ದಾರೆ.
ವಂಚಕರ ಜಾಲವು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ(ರುಡಾ)ಕ್ಕೆ ರು.16.90 ಕೋಟಿ ಮತ್ತು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ರು.5 ಕೋಟಿ ಪಂಗನಾಮ ಹಾಕಿದೆ. ಆರ್‌ಬಿಐ ನಿಯಮಾನುಸಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆನ್ನುವ ಪ್ರತಿಪಕ್ಷಗಳ ಕೂಗಿಗೆ ಸರ್ಕಾರ ಇದೀಗ ಮಣಿದಿದೆ. ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬಹುಕೋಟಿ ಹಗರಣವೊಂದು ಸಿಬಿಐ ತನಿಖೆಗೆ ವಹಿಸಲ್ಪಟ್ಟಿರುವುದು ಇದೇ ಮೊದಲು. ರಾಜಕೀಯ ಪ್ರಭಾವದೊಂದಿಗೆ ಪಾರಾಗಲು ಹುನ್ನಾರ ನಡೆಸಿದ್ದ ವಂಚಕರಿಗೆ ಕಾನೂನಿನ ಕುಣಿಕೆ ಇದೀಗ ಮತ್ತಷ್ಟು ಬಿಗಿಗೊಂಡಂತಾಗಿದೆ. ಇನ್ನೂ ಹಲವರಿಗೆ ಭೀತಿ ಮೂಡಿದೆ. ಸಿಬಿಐಗೆ ಕಡತವನ್ನು ಒಪ್ಪಿಸಲು ರಾಮನಗರದಲ್ಲಿ ಜಿಲ್ಲಾ ಪೊಲೀಸ್ ತನಿಖಾ ತಂಡ, ಮಂಡ್ಯದಲ್ಲಿ ಪೊಲೀಸರಿಂದ ತನಿಖೆ ವಹಿಸಿಕೊಂಡಿದ್ದ ಸಿಐಡಿ ಅಧಿಕಾರಿಗಳು ಕಡತಗಳನ್ನು ಸಿದ್ಧಪಡಿಸಿಕೊಂಡು ಸಿಬಿಐ ತಂಡದ ಅಗಮನದ ನಿರೀಕ್ಷೆಯಲ್ಲಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಕೆ: ರುಡಾ ಹಗರಣ ಸಂಬಂಧ ರಾಮನಗರ ಡಿವೈಎಸ್ಪಿ ರಾಮಲಿಂಗಪ್ಪ, ಮುಡಾ ಹಗರಣದ ಬಗ್ಗೆ ಮಂಡ್ಯ ಡಿವೈಎಸ್ಪಿ ಡಾ.ಶೋಭಾರಾಣಿ ಅವರು ಆಯಾ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದೋಷಾರೋಪಣಾ ಪಟ್ಟಿ ಸಲ್ಲಿಕೆ ನಂತರ ಮುಡಾ ತನಿಖೆ ಸಿಐಡಿಗೆ ಹೆಗಲಿಗೇರಿತ್ತು. ಇದೀಗ ಎರಡೂ ಪ್ರಕರಣಗಳನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಈ ಕುರಿತ ಆದೇಶ ಪ್ರತಿಯು ರಾಮನಗರ ಜಿಲ್ಲಾ ಪೊಲೀಸ್ ತನಿಖಾಧಿಕಾರಿ ಹಾಗೂ ಮಂಡ್ಯದಲ್ಲಿ ತನಿಖೆ ಮುಂದುವರೆಸಿರುವ ಸಿಐಡಿ ತನಿಖಾ ತಂಡಕ್ಕೆ ವಾರದ ಹಿಂದೆಯೇ ತಲುಪಿದೆ. ಈ ಬೆನ್ನಲ್ಲೇ ಉಭಯ ತನಿಖಾ ತಂಡಗಳು ಕಡತ ಸಿದ್ಧಪಡಿಸಿಟ್ಟಿವೆ.
ಮುಡಾ ಹಗರಣದಲ್ಲಿ ಭಾಗಿಯಾಗಿದ್ದ ವಂಚಕರ ಜಾಲ ಮತ್ತು ಶಾಮೀಲಾದವರ ಬಗ್ಗೆ ಮಂಡ್ಯ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಒಂದಿಷ್ಟು ಮಾಹಿತಿ ಬಹಿರಂಗಪಡಿಸಿದ್ದರು. ಆದರೆ, ರಾಮನಗರ ಪೊಲೀಸರು ತನಿಖೆಗೆ ಅಡ್ಡಿಯಾಗುವ ನೆಪವೊಡ್ಡಿ ಎಲ್ಲವೂ ಗುಪ್ತ್ ಗುಪ್ತ್ ಎಂದಿದ್ದರು.
ಹೆಸರು ಕೈಬಿಟ್ಟ ಆರೋಪ: ಮುಡಾ ಹಗರಣದಲ್ಲಿ ಸಚಿವ ಅಂಬರೀಷ್ ನಿಕಟವರ್ತಿ ಕಾಂಗ್ರೆಸ್ ಮುಖಂಡರಾದ ಅಮರಾವತಿ ನಾಗರಾಜು, ಜಿ.ಸಿ.ಆನಂದ್ ಹೆಸರನ್ನು ದೋಷಾರೋಪಣಾ ಪಟ್ಟಿಯಿಂದ ಕೈಬಿಡಲಾಗಿದ್ದು, ಪೊಲೀಸ್ ತನಿಖೆ ಹಳ್ಳ ಹಿಡಿದಿದೆ ಎಂದು ಶಾಸಕ ಎನ್. ಚಲುವರಾಯಸ್ವಾಮಿ ನೇರ ಆರೋಪ ಮಾಡಿದ್ದರು.
ಈ ವಿಷಯವಾಗಿ ಪ್ರತಿಕ್ರಿಯಿಸಿದ್ದ ಅಲ್ಲಿನ ಪೊಲೀಸ್ ಅಧಿಕಾರಿಗಳು ತಾವೀಗ ತರಾತುರಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದೇವೆ. ಸಾಕ್ಷ್ಯಾಧಾರ ಸಿಕ್ಕರೆ ಹಗರಣದಲ್ಲಿ ಭಾಗಿಯಾದ ಇತರರ ವಿರುದ್ಧವೂ ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಸಲಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು.
ಹಗರಣದಲ್ಲಿ ಬೆಂಬಲಿಗರಿದ್ದಾರೆ ಎನ್ನುವ ಕಾರಣಕ್ಕೆ ತಮ್ಮ ಹೆಸರನ್ನು ಪ್ರಸ್ತಾಪಿಸುವ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಅನುಭವಿಸಲಿ ಎಂದು ಅವರು ಖಾಸಗಿ ವಲಯದಲ್ಲಿ ಹೇಳಿಕೊಂಡಿದ್ದಾರೆ.
ಇಲ್ಲಿ ಸಿಕ್ಕಿಲ್ಲ ಜಾಮೀನು: ಮುಡಾ ಹಗರಣ ಸಂಬಂಧ ಆ ಸಂಸ್ಥೆಯ ಅಮಾನತುಗೊಂಡ ಆಯುಕ್ತ ಡಾ.ಶಿವರಾಮ್, ಆರೋಪಿಗಳಾದ ಕೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ, ಹೆಮ್ಮನಹಳ್ಳಿ ಚಂದ್ರಶೇಖರಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಆದರೆ, ರಾಮನಗರ ಹಗರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ.
ಅಮಾನತುಗೊಂಡ ರುಡಾ ಆಯುಕ್ತ ಚಿದಾನಂದ ಅವರು ಚಾರ್ಜ್ ಶೀಟ್ ಆಧಾರದ ಮೇಲೆ ಸಲ್ಲಿಸಿದ್ದ ಜಾಮೀನು ಅರ್ಜಿಯೂ ಸೆಷನ್ಸ್ ನ್ಯಾಯಾಲಯದಲ್ಲಿ ವಜಾಗೊಂಡಿದೆ. ವಂಚಕರ ಜಾಲದ ಮಾಸ್ಟರ್ ಮೈಂಡ್ ಕಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ, ಶೇಖರ ಅವರ ಜಾಮೀನು ಅರ್ಜಿಯೂ ತಿರಸ್ಕೃತವಾಗಿದೆ.
ಇನ್ನೂ ಹಸ್ತಾಂತರವಾಗಿಲ್ಲ
ರುಡಾದ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ಸರ್ಕಾರದ ಆದೇಶ ತಲುಪಿದೆ. ಸಿಬಿಐಗೆ ಕಡತಗಳ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ. ಸಿಬಿಐಗೆ ಹಸ್ತಾಂತರಿಸಲು ಕಡತಗಳನ್ನು ಸಿದ್ಧಪಡಿಸಿಡಲಾಗಿದೆ.
- ರಾಮಲಿಂಗಪ್ಪ, ಡಿವೈಎಸ್ಪಿ ಮತ್ತು ತನಿಖಾಧಿಕಾರಿ, ರಾಮನಗರ.
ಹಸ್ತಾಂತರ ಸಿಐಡಿ ಜವಾಬ್ದಾರಿ
ಮುಡಾ ಹಗರಣದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದಾದ ಬೆನ್ನಲ್ಲೇ ತನಿಖೆ ಹೊಣೆ ಸಿಐಡಿ ವಶಕ್ಕೆ ಹೋಗಿದೆ. ಸಿಐಡಿಯಿಂದಲೇ ಸಿಬಿಐಗೆ ಕಡತ ಹಸ್ತಾಂತರ ಆಗಬೇಕಿದೆ. ಇಲ್ಲಿ ನಮ್ಮ ಪಾತ್ರವೇನೂ ಇಲ್ಲ.
ಟಿ ಡಾ.ಶೋಭಾರಾಣಿ, ಡಿವೈಎಸ್ಪಿ, ಮಂಡ್ಯ.