ವಿಜಯಪುರಕ್ಕೆ ಕೆ.ಎಚ್.ರವಿ ಭೇಟಿ
ವಿಜಯಪುರ: ಜನಸಾಮಾನ್ಯರಿಗೆ ಇಂದಿಗೂ ಮಾನವ ಹಕ್ಕುಗಳ ಬಗ್ಗೆ ಅರಿವು ಇಲ್ಲದ ಕಾರಣ ಬಲಾಢ್ಯ ವ್ಯಕ್ತಿಗಳ ತುಳಿತಕ್ಕೆ ಒಳಾಗುತ್ತಿದ್ದು ಇದರ ವಿರುದ್ಧ ಧ್ವನಿ ಎತ್ತುವುದೇ ನಮ್ಮ ಮಾನವ ಹಕ್ಕುಗಳ ಜನಪರ ಸಂಘ ಎಂದು ಮಾನವ ಹಕ್ಕುಗಳ ಜನಪರ ಸಂಘದ ರಾಜ್ಯಾಧ್ಯಕ್ಷ ಕೆ.ಎಚ್.ರವಿ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜನರಿಗೆ ತಮ್ಮ ಹಕ್ಕು ಬಾಧ್ಯತೆ ಬಗ್ಗೆ ಅರಿವು ಮೂಡಿಸುವ ಮತ್ತಷ್ಟು ಕಾರ್ಯಕ್ರಮಗಳು ನಡೆಯಬೇಕು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನ ಖಾಲಿಯಿದ್ದು ಕೂಡಲೇ ಸರ್ಕಾರ ಇತ್ತ ಗಮನಹರಿಸದೇ ಇರುವುದು ವಿಪರ್ಯಾಸ. ಕೂಡಲೇ ಸ್ಥಾನವನ್ನು ಭರ್ತಿಗೊಳಿಸಬೇಕು ಎಂದರು. ಶಾದಿ ಭಾಗ್ಯ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಒಂದೇ ಜಾತಿಗೆ ಸಿಮೀತವಾಗಿರದೆ ಎಲ್ಲಾ ಜಾತಿಗೂ ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಮಾನವ ಹಕ್ಕುಗಳ ಜನಪರ ಸಂಘದ ಸಂಚಾಲಕ ಸೀತಾರಾಮಯ್ಯ ಮಾತನಾಡಿದರು.ಮಾನವ ಹಕ್ಕುಗಳ ಜನಪರ ಸಂಘದ ಖಜಾಂಜಿ ಗೌರವ್ ತಿಲಕ್, ಕಾರ್ಯದರ್ಶಿ ಸಿ.ಎನ್.ಆರ್.ಮುನಿರಾಜು, ತಾಲೂಕು ಅಧ್ಯಕ್ಷ ಪುರುಷೋತ್ತಮ್, ಟೌನ್ ಅಧ್ಯಕ್ಷ ರಾಜು, ಭಾರತ ಜನ ಜಾಗೃತಿ ಸೇನೆಯ ಅಧ್ಯಕ್ಷ ಸಿ.ಮುನಿಯಪ್ಪ, ಜಿಲ್ಲಾಧ್ಯಾಕ್ಷ ಅಶ್ವತ್ಥಪ್ಪ ಮತ್ತಿತರರು ಹಾಜರಿದ್ದರು.
ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸೂಲಿಬೆಲೆ ರಸ್ತೆಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ 2013-14 ನೇ ಸಾಲಿನ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣಾ ಸಮಾರಂ ಶನಿವಾರ ಆಯೋಜಿಸಲಾಗಿತ್ತು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ.ಕಿರಣ್ ಉದ್ಘಾಟನೆ ನೆರವೇರಿಸಿ ಸರ್ಕಾರ ನಿಮಗೆ ನೀಡುತ್ತಿರುವ ಬೈಸಿಕಲ್ ಅನ್ನು ಶಾಲೆಗೆ ಬಂದು ಹೋಗಲು ಮಾತ್ರ ಉಪಯೋಗಿಸಬೇಕು ಮತ್ತು ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು ಎಂದರು. ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದ ಬಿ.ಎನ್.ಕೃಷ್ಣಪ್ಪ ಮಾತನಾಡಿ ಸುಸಂಸ್ಕೃತ ಸಮಾಜಕ್ಕೆ ಶಿಕ್ಷಣವೇ ಮುಖ್ಯವಾಗಿರುತ್ತದೆ ಎಂದರು. ಇದೇ ಸಂಧರ್ಭದಲ್ಲಿ ನಳಂದ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಗೌಡ, ಪುರಸಭಾ ಸದಸ್ಯ ಕುಮಾರ್, ಮಾತನಾಡಿದರು. ಪುರಸಭಾ ಸದಸ್ಯ ನರಸಿಂಹಮೂರ್ತಿ ಉಪಸ್ಥಿತರಿದ್ದರು. ಶಿಕ್ಷಕ ಮುನಿರಾಜು ವಂದನೆ ಅರ್ಪಿಸಿದರು.
ಅರ್ಜಿ ಆಹ್ವಾನ
ಬೆಂಗಳೂರು: ಸ್ನಾತಕಪೂರ್ವ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 'ಯೂನಿವರ್ಸಿಟಿ ಕಾಲೇಜ್ ಡಬ್ಲಿನ್' (ಯುಸಿಡಿ) 2014ನೇ ಸಾಲಿನ ವಿದ್ಯಾರ್ಥಿವೇತನವನ್ನು ಇತ್ತೀಚಿಗೆ ಘೋಷಿಸಿದೆ. 250,000 ಪೌಂಡ್ ಮೊತ್ತದ ಈ ವಿದ್ಯಾರ್ಥಿವೇತನ ಯಾವುದೇ ಐರಿಷ್ ವಿದ್ಯಾರ್ಥಿನಿಲಯದ ಇದುವರೆಗಿನ ಅತಿ ಹೆಚ್ಚಿನ ವಿದ್ಯಾರ್ಥಿವೇತನವಾಗಿದೆ. ಇದು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ 4ನೇ ರಾಷ್ಟ್ರಪತಿ ವಿ.ವಿ. ಗಿರಿಯವರ ಜ್ಞಾಪಕಾರ್ಥವಾಗಿ ನಾಲ್ಕು ಪೂರ್ಣ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿವಿ.ವಿ.ಗಿರಿ ವಿದ್ಯಾರ್ಥಿವೇತನಗಳು, ಪದವಿ ವಿದ್ಯಾರ್ಥಿವೇತನ, ಸ್ನಾತಕಪೂರ್ವ ವಿದ್ಯಾರ್ಥಿವೇತನಗಳು ಎಂಬುದಾಗಿದ್ದು, ಅರ್ಹ ವಿದ್ಯಾರ್ಥಿಗಳು ಏ.30, 2014 ರೊಳಗೆ ಅರ್ಜಿ ಸಲ್ಲಿಸಬಹುದು.