ಸರ್ಕಾರಕ್ಕೆ ಹೆಣ್ಣು ಮಗು ಒಪ್ಪಿಸಲು ಮುಂದಾದ ತಾಯಿ
ರಾಮನಗರ: ಕಿತ್ತು ತಿನ್ನುತ್ತಿರುವ ಬಡತನದ ನಡುವೆಯೂ 5ನೇ ಮಗು ಹಡೆದ ತಾಯಿಯು ಇದೀಗ ಆ ಹೆಣ್ಣು ಹಸುಗೂಸನ್ನು ಸಾಕಲಾರೆ ಎಂದು ಮಕ್ಕಳ ರಕ್ಷಣಾ ಘಟಕದ ವಶಕ್ಕೊಪ್ಪಿಸಲು ಮುಂದಾಗಿದ್ದಾಳೆ. ಹೀಗೆ ಇಪ್ಪತ್ತು ದಿನದ ಹಿಂದಷ್ಟೇ ಜನಿಸಿದ ಮಗಳನ್ನು ಹಸ್ತಾಂತರಿಸುವುದಕ್ಕೆ ಮುಂದಾಗಿರುವವರು ರಾಮನಗರದ ಗೀತಾಮಂದಿರ ಬಡಾವಣೆಯ ಕೂಲಿಕಾರರಾದ ಸುಶೀಲಮ್ಮ ಮತ್ತು ರವಿ ದಂಪತಿ. ಅವರು ಸೋಮವಾರ ಮಕ್ಕಳ ರಕ್ಷಣಾ ಘಟಕದ ಎದುರು ಮಗು ಸಮೇತ ಹಾಜರಾಗಿ ಹಸ್ತಾಂತರಕ್ಕೆ ಸಮ್ಮತಿಸಿದ್ದಾರೆ. ಅವರಿಗಾಗಲೇ ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ಈಚೆಗಷ್ಟೇ ಐದನೇ ಮಗು ಜನಿಸಿದೆ. ಆ ಮಗು ಮನೆಯಲ್ಲಿಲ್ಲ ಎನ್ನುವ ಬಗ್ಗೆ ನೆರೆಹೊರೆಯವರು ಮಕ್ಕಳ ರಕ್ಷಣಾ ಘಟಕ್ಕೆ ಮಾಹಿತಿ ನೀಡಿದ್ದರು. ಆ ಮೇರೆಗೆ ಶನಿವಾರ ಮನೆಗೆ ತೆರಳಿ ಪರಿಶೀಲಿಸಿದ್ದ ಅಧಿಕಾರಿಗಳ ತಂಡ ಮಗು ಸಮೇತ ಖುದ್ದು ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿತ್ತು.
ಅಧಿಕಾರಿಗಳೆದುರು ಹಾಜರು: ಈ ಹಿನ್ನೆಲೆಯಲ್ಲಿ ಹಸುಗೂಸು ಸಹಿತ ಎಲ್ಲ 5 ಮಕ್ಕಳೊಂದಿಗೆ ಸುಶೀಲಮ್ಮ ಮತ್ತು ರವಿ ದಂಪತಿ ಅಧಿಕಾರಿಗಳೆದುರು ಸೋಮವಾರ ಸಂಜೆ ಹಾಜರಾದರು. ನಿಮ್ಮ ಸಂಶಯದಂತೆ ನಾವೇನೂ ಮಗುವನ್ನು ಮಾರಾಟ ಮಾಡಿಲ್ಲ. ಪೋಷಣೆಗಾಗಿ ನನ್ನ ತವರು ಮನೆಯಲ್ಲಿ ಬಿಟ್ಟಿದ್ದೆವೆಂದು ಸುಶೀಲಮ್ಮ ವಿವರಣೆ ನೀಡಿದ್ದಳು. ಪ್ರಕರಣದ ವಿಷಯವಾಗಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ಬುಧವಾರ ಸಭೆ ಸೇರಲಿದ್ದು, ಹೆಣ್ಣು ಮಗುವನ್ನು ದತ್ತಿಗೆ ಒಳಪಡಬಹುದು.