ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸ್ವಚ್ಛತೆಗೆ ಸರ್ಕಾರವನ್ನೇ ಕಾಯುವುದು ಸರಿಯಲ್ಲ

Srinivasa Murthy VN
Updated On : 26 Nov 2013, 1:20 am

ಕ.ಪ್ರ.ವಾರ್ತೆ,  ರಾಮನಗರ, ನ.25
ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಛತೆಗೆ ಸರ್ಕಾರವನ್ನೇ ಕಾದು ಕುಳಿತುಕೊಳ್ಳುವುದು ಸರಿಯಲ್ಲ. ಅದು ನಮ್ಮ ಕೆಲಸವೂ ಹೌದು ಎನ್ನುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಕರೆ ನೀಡಿದರು.
ಜಿ.ಪಂ., ಜಿಲ್ಲಾಡಳಿತದಿಂದ ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ವಿಶ್ವ ಶೌಚಾಲಯ ದಿನದ ಪ್ರಯುಕ್ತ ಜಿಲ್ಲಾ ಮಟ್ಟದ ಸ್ವಚ್ಛತಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.  
ಪ್ರತಿಯೊಂದು ಮನೆಯಲ್ಲೂ ದೇವರ ಮನೆಯಷ್ಟೇ ಪ್ರಾಮುಖ್ಯತೆಯನ್ನು ಶೌಚಾಲಯಕ್ಕೂ ನೀಡಬೇಕು. ಅದರಿಂದ ಬಯಲು ಬಹಿರ್ದೆಸೆಯಂತಹ ಪಿಡುಗು ನಿರ್ಮೂಲನೆಗೊಳಿಸಬಹುದು. ಅದರಿಂದ ಆರೋಗ್ಯವಂತ ಸಮಾಜದ ನಿರ್ಮಾಣವೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.  
ಶೌಚಾಲಯಕ್ಕೆ ಸಹಾಯಧನ: ಮನೆಗೊಂದು ಶೌಚಾಲಯ ನಿರ್ಮಾಣವಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ವೆಚ್ಚದ ಬಹುಪಾಲು ಹಣವನ್ನು ಸರ್ಕಾರವೇ ಸಹಾಯಧನವಾಗಿ ನೀಡುತ್ತಿದೆ. ಇದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜು ಹೇಳಿದರು.
ಮಾದರಿ ಶೌಚಾಲಯ ನಿರ್ಮಾಣಕ್ಕೆ ಗರಿಷ್ಠ ರು.10 ಸಾವಿರ ವೆಚ್ಚವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ನಿರ್ಮಲ ಗ್ರಾಮ ಯೋಜನೆಯಡಿ ರು.4500, ನರೇಗಾ ಮೂಲಕ ರು.4500 ಪಾವತಿಸಲಾಗುತ್ತಿದೆ. ಇನ್ನುಳಿದ ಅಲ್ಪ ಮೊತ್ತವನ್ನು ಫಲಾನುಭವಿ ಭರಿಸಿಕೊಳ್ಳಬೇಕು ಎಂದರು.
ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಶೌಚಾಲಯ ರಹಿತ ಮನೆಗಳನ್ನು ಗುರುತಿಸಿ, ಪೌರ ಸಂಸ್ಥೆಗಳೇ ವಿವಿಧ ಅನುದಾನಗಳಡಿ ಶೌಚಾಲಯ ನಿರ್ಮಿಸಿಕೊಡುವ ಕಾರ್ಯಕ್ರಮ ಜಾರಿಯಲ್ಲಿದೆ. ಇಷ್ಟಾಗಿಯೂ ನಮ್ಮಲ್ಲಿನ್ನೂ ಬಯಲು ಬಹಿರ್ದೆಸೆ ತಪ್ಪದಿರುವ ಬಗ್ಗೆ ಅವರು ವಿಷಾದಿಸಿದರು.
ಪ್ರತಿಷ್ಠೆ, ಅಭಿವೃದ್ಧಿಯ ಪ್ರತೀಕ: ಶೌಚಾಲಯವು ಪ್ರತಿಯೊಂದು ಕುಟುಂಬದ ಪ್ರತಿಷ್ಠೆ, ಅಭಿವೃದ್ಧಿಯ ಪ್ರತೀಕವಾಗಿದೆ. ಮಾನಸಿಕ ಮತ್ತು ಭೌತಿಕ ಭದ್ರತೆಗೆ ಮನೆಗೊಂದು ಶೌಚಾಲಯ ಅತ್ಯಗತ್ಯ ಎಂದು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ದೇಶದಲ್ಲಿ ಬಯಲು ಬಹಿರ್ದೆಸೆ ಮಾಡುವವರ ಪ್ರಮಾಣವೇ ಅಧಿಕವೆನ್ನುವುದು ಜಾಗತಿಕ ಮಟ್ಟದಲ್ಲಿ ಭಾರತದ ಪಾಲಿಗೆ ಅಪಮಾನಕರ ಸಂಗತಿಯಾಗಿದೆ. ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಸೂಕ್ತ ಅನುದಾನ ನೀಡುತ್ತಿದ್ದರೂ ಬಳಸಿಕೊಳ್ಳದೆ ಬಯಲನ್ನೇ ಅವಲಂಬಿಸಿರುವುದು ಸರಿಯಲ್ಲ ಎಂದರು.
ಬಯಲು ಬಹಿರ್ದೆಸೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಅದನ್ನೆಲ್ಲ ಅನುಭವಿಸಿದ್ದಾಗ್ಯೂ ನಮ್ಮ ಜನರು ಎಚ್ಚೆತ್ತುಕೊಂಡಿಲ್ಲ.
ಶೌಚಾಲಯ ನಿರ್ಮಾಣದ ವಿಷಯದಲ್ಲಿ ಶೇಕಡ 100ರಷ್ಟು ಸಾಧನೆ ಆಗಬೇಕಿದೆ ಎಂದು ತಿಳಿಸಿದರು.
ಅರಿವು ಕಾರ್ಯಕ್ರಮ ಅಗತ್ಯ: ಶೌಚಾಲಯದ ಅಗತ್ಯತೆ ಕುರಿತು ಮಕ್ಕಳಿಗೆ ಶಾಲಾ ಹಂತದಲ್ಲೇ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ತಮ್ಮ ಪೋಷಕರಿಗೆ ತಿಳಿ ಹೇಳಿ ಶೌಚಾಲಯ ಹೊಂದುವುದಕ್ಕೆ ಪ್ರೇರಣೆಯಾಗಬೇಕು ಎಂದು ವೆಂಕಟೇಶ್ ಸಲಹೆ ನೀಡಿದರು.
ಶೌಚಾಲಯ ರಹಿತ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಯಾತನೆ ಹೇಳ ತೀರದಾಗಿದೆ. ಪುಟ್ಟ ಮಕ್ಕಳು ಬಯಲು ಬಹಿರ್ದೆಸೆಯಿಂದ ರೋಗಪೀಡಿತರಾಗುತ್ತಿದ್ದಾರೆ. ಇದೆಲ್ಲವನ್ನೂ ಮನಗಂಡು ಪೋಷಕರು ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ದಂಡ ವಿಧಿಸಲು ಚಿಂತನೆ: ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಸ್ವಂತ ಶೌಚಾಲಯ ನಿರ್ಮಾಣಕ್ಕೆ ಕಾಳಜಿ ತೋರದೆ ಬಯಲು ಬಹಿರ್ದೆಸೆಯ ಪಿಡುಗು ಮುಂದುವರೆಸಿದವರ ವಿರುದ್ಧ ದಂಡ ವಿಧಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ವೆಂಕಟೇಶ್ ಹೇಳಿದರು.
ಜಿ.ಪಂ. ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಲ್.ಚಂದ್ರ, ಸಿಪಿಒ ಧನುಷ್, ಡಿಡಿಪಿಐ ಪ್ರಹ್ಲಾದಗೌಡ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಿ.ನವಜ್ಯೋತಿ, ಮೂರ್ತಿ ನಾಯಕ್, ಮರಿಸಿದ್ದಯ್ಯ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಿಂದ ಅಂಬೇಡ್ಕರ್ ಭವನದವರೆಗೆ ಶಾಲಾ ಮಕ್ಕಳೊಡಗೂಡಿ ಜಾಥಾ ನಡೆಯಿತು.

ಕೆ.ಜಿ.ಹೊಸಹಳ್ಳಿಯಲ್ಲಿ ಚಾಲನೆ
ನಿರ್ಮಲ ಭಾರತ ಅಭಿಯಾನದಡಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಸ್ವಚ್ಛತಾ ಉತ್ಸವ ಮತ್ತು ಜಾಥಾ ಕಾರ್ಯಕ್ರಮ ಪ್ರಯುಕ್ತ ಸರ್ಕಾರಿ ಸಹಾಯಧನದೊಂದಿಗೆ ಶೌಚಾಲಯ ನಿರ್ಮಾಣ ಕಾಮಗಾರಿಗೆ ರಾಮನಗರ ತಾಲೂಕಿನ ಕೆ.ಜಿ.ಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಮತ್ತು ಸಿಇಒ ಡಾ.ಎಂ.ವಿ.ವೆಂಕಟೇಶ್ ಚಾಲನೆ ನೀಡಿದರು.  ಕಾರ್ಯಕ್ರಮದ ಪ್ರಯುಕ್ತ ವಿವಿಧ ಜಾನಪದ ಕಲಾತಂಡಗಳು, ಶಾಲಾ ಮಕ್ಕಳೊಂದಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗ್ರಾಮದಲ್ಲಿ ಜಾಥಾ ನಡೆಸಿ ಶೌಚಾಲಯದ ಅಗತ್ಯತೆ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ಶೌಚಾಲಯವಿಲ್ಲದ ಮನೆಗೆ ಹೆಣ್ಣು ಕೊಡಬೇಡಿ, ಶೌಚಾಲಯ ಮನೆಯ ದೇವರ ಕೋಣೆಗಿಂತಲೂ ಮಿಗಿಲು, ಶೌಚಾಲಯವಿದ್ದವರೇ ನಾಗರಿಕರು ಹೀಗೆ ನಾನಾ ಘೋಷಣೆಗಳನ್ನು  ಕೂಗಲಾಯಿತು. ಗ್ರಾಮಸ್ಥರಿಗೆ ಕರಪತ್ರ ಹಂಚಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement