ಆನೇಕಲ್ಲಿನಲ್ಲಿ ಅದ್ಧೂರಿ ರಾಮೋತ್ಸವ
ಆನೇಕಲ್ಲು: ಆನೇಕಲ್ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಶ್ರೀ ರಾಮ ನವಮಿ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು. ಬೆಳಗ್ಗಿನಿಂದಲೇ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆಂಜನೇಯ ಸ್ವಾಮಿ ಮಂದಿರ, ಶ್ರೀರಾಮ ಮಂದಿರ ಹಾಗೂ ಊರ ಮುಂದಿನ ಅಶ್ವತ್ಥ ಕಟ್ಟೆಯ ಮುಂದೆ ಪಾನಕ, ಕೋಸಂಬರಿ, ಮಜ್ಜಿಗೆಯನ್ನು ಡ್ರಂಗಳಲ್ಲಿ ತುಂಬಿ ತಂದು ಭಕ್ತಾದಿಗಳಿಗೆ ವಿತರಿಸಿ ಸಂಭ್ರಮಿಸಿದರು. ಪಟ್ಟಣದ ಭಜನೆ ಮಂದಿರ, ಶ್ರೀ ರಾಮ ದೇಗುಲ, ಶ್ರೀ ರಾಮ ಲಿಂಗೇಶ್ವರ ದೇಗುಲ, ದಿಡ್ಡಿಬಾಗಿಲ ಆಂಜನೇಯ ದೇಗುಲ, ಶಿವಾಜಿ ವೃತ್ತ ದಲ್ಲಿ ಸಹಸ್ರಾರು ಭಕ್ತಾದಿಗಳಿಗೆ ಪಾನಕ ಕೋಸಂಬರಿ ವಿತರಿಸಿದರು.
ಭುವನೇಶ್ವರಿ ಕಾರು ಚಾಲಕರ ಸಂಘ: ಆನೇಕಲ್ಲಿನ ಶ್ರೀ ಭುವನೇಶ್ವರಿ ಕಾರು ಚಾಲಕರ ಸಂಘದ ಪದಾಧಿಕಾರಿಗಳು ಸತತ 9ನೆಯ ವರ್ಷದ ರಾಮ ನವಮಿ ಉತ್ಸವ ವನ್ನು ಶ್ರದ್ಧೆಯಿಂದ ಆಚರಿಸಿದರು.ಪುರಸಭಾ ಸದಸ್ಯರು ಹಾಗೂ ಗಣ್ಯರನ್ನು ಕರೆದು ಪಾನಕ ನೀಡಿ ಗೌರವಿಸಿದರು.
ಅಧ್ಯಕ್ಷ ಭದ್ರರೆಡ್ಡಿ ಮಾತನಾಡಿ ಆನೇಕಲ್ ಕಾರು ಚಾಲಕರ ಸಂಘ ರಾಜ್ಯವೇ ಮೆಚ್ಚುವಂತಹ ಅಂತಿಮ ಯಾತ್ರೆ ವಾಹನ ಸೇವೆಯನ್ನು ಜನತೆಗೆ ನೀಡುತ್ತಿದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಸೇವೆಯನ್ನೇ ಗುರಿಯಾಗಿರಿಸಿಕೊಂಡಿರುವ ಸಂಘದ ಪದಾಧಿಕಾರಿಗಳು ಅಭಿನಂದನಾರ್ಹರು. ರಾಜ್ಯದ ಜನತೆಗೆ ಮಾದರಿಯಾಗುವಂತೆ ಹಿಂದೂ ಮುಸ್ಲಿಂ ಬಾಂಧವರು ರಾಮ ನವಮಿ, ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಹಾಗೂ ದೇಶಾಭಿಮಾನ ಮರೆಯುತ್ತಿರುವುದು ಸ್ವಾಗತಾರ್ಹ ಎಂದರು.
ಭುವನೇಶ್ವರಿ ಕಾರು ಚಾಲಕರ ಸಂಘದ ಅಧ್ಯಕ್ಷ ಮೋಹನ್, ಅಮಾನುಲ್ಲ, ಚಂದ್ರಶೇಖರ್, ಸಾದಿಕ್, ನವಾಜ್, ಅಕ್ರಮ್, ಜಾವೀದ್, ಅಶ್ವತ್ಥ ರಾಜು,ರವಿ, ಮುರಳಿ ಪ್ರಸಾದ ವಿನಿಯೋಗ ಮಾಡಿದರು.