ದೇಶದ ಚುಕ್ಕಾಣಿ ಹಿಡಿಯಲಿದೆ ತೃತೀಯ ರಂಗ
ಚನ್ನಪಟ್ಟಣ: ದೇಶದ ಆಡಳಿತ ಚುಕ್ಕಾಣಿಯನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಯಾವುದೇ ಕಾರಣಕ್ಕೂ ಹಿಡಿಯುವುದಿಲ್ಲ, ಈ ದೇಶವನ್ನು ಆಳುವುದು ತೃತೀಯ ರಂಗ ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಭವಿಷ್ಯ ನುಡಿದರು.
ತಾಲೂಕಿನ ವಿರೂಪಾಕ್ಷಿಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಅಖಂಡ ಭಾರತದಲ್ಲಿ ಅಧಿಕಾರದಲ್ಲಿಲ್ಲ, ದೇಶದ ಸಾಕಷ್ಟು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿವೆ. ಎಲ್ಲಾ ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡುವುದು ಖಚಿತ ಎಂದರು.
ತೃತೀಯ ರಂಗದಲ್ಲಿ ದೇವೇಗೌಡರೇ ಹಿರಿಯ ನಾಯಕರಾಗಿದ್ದು ಎಲ್ಲಾ ಪಕ್ಷಗಳು ಅವರನ್ನು ಪ್ರಧಾನ ಮಂತ್ರಿ ಮಾಡಲು ಸಹಮತ ವ್ಯಕ್ತಪಡಿಸಲಿದ್ದಾರೆ ಎಂದರು.
ಕಳ್ಳ ಸುಳ್ಳರನ್ನು ನಂಬ ಬೇಡಿ: ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿ ಕಳ್ಳ ಎಂದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಮಂತ್ರಿಯಾಗಿದ್ದ ಸಿ.ಪಿ.ಯೋಗೇಶ್ವರ್ ಹೇಳಿದ್ದರು. ಡಿಕೆಎಸ್ ಸಹೋದರರನ್ನು ಜೈಲಿಗಾಕಿಸುತ್ತೇವೆ. ಇವರಿಬ್ಬರು ಕಲ್ಲು ಲೂಟಿ ಮಾಡಿರುವ ಕಳ್ಳರು ಎಂದು ಉದ್ದುದ್ದ ಬಾಷಣ ಮಾಡಿದ ಯೋಗೇಶ್ವರ್ ಇದೀಗ ಅವರನ್ನು ಹೊಗಳುವ ಮೂಲಕ ತಾನೊಬ್ಬ ಸುಳ್ಳ ಎಂಬುದನ್ನು ಸಾಬೀತು ಪಡಿಸಿದ್ದು ಅವರಿಬ್ಬರನ್ನು ಯಾವುದೇ ಕಾರಣಕ್ಕೂ ನಂಬ ಬೇಡಿ ಎಂದು ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ಎಚ್ಚರಿಸಿದರು.
ಮೋದಿಗೆ ದೇಶದ ರೈತರ ಬಗ್ಗೆ ಏನೂ ಗೊತ್ತಿಲ್ಲ, ಕೆಲ ಕಾರ್ಖಾನೆಗಳನ್ನು ಕರೆತಂದು ಅಭಿವೃದ್ಧಿ ಎಂದು ಬಡಬಡಿಸುತ್ತಿದ್ದಾರೆ. ಆದರೆ ಅಧಿಕಾರದಲ್ಲಿರಲಿ ಇಲ್ಲದಿರಲಿ ಸದಾಕಾಲ ರೈತರ ಹಿತಕ್ಕಾಗಿ ಹೋರಾಟ ನಡೆಸುವ, ಎಲ್ಲಾ ವರ್ಗದ ಜನತೆಯ ಹಿತ ಕಾಯುವ ದೇವೇಗೌಡರನ್ನು ಪ್ರಧಾನಿ ಮಾಡಲು ನಾವೆಲ್ಲ ಸಂಕಲ್ಪ ತೊಡ ಬೇಕಿದೆ ಎಂದರು.
ಪಕ್ಷಕ್ಕೆ ಸೇರ್ಪಡೆ: ತಾಲೂಕಿನ ಕರಲಹಳ್ಳಿ ಗ್ರಾಮದ ಸಮಾಜವಾದಿ ಪಕ್ಷದ ಮುಖಂಡ, ಗ್ರಾ.ಪಂ ಮಾಜಿ ಅಧ್ಯಕ್ಷ ಕರಿಯಪ್ಪ ಮಾತೃಪಕ್ಷ ಜೆಡಿಎಸ್ಗೆ ಹಿಂದಿರುಗಿದರು. ಪಕ್ಷಕ್ಕೆ ಸೇರ್ಪಡೆಗೊಂಡ ಅವರನ್ನು ವಿಧಾನ ಪರಿಷತ್ಸದಸ್ಯ ಪುಟ್ಟಣ್ಣ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಲಿಂಗೇಶ್ ಕುಮಾರ್, ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು, ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಕೃಷ್ಣೇಗೌಡ ಗರಕಹಳ್ಳಿ, ತಾ.ಪಂ ಪ್ರಭಾರ ಅಧ್ಯಕ್ಷ ಭಾನುಪ್ರಸಾದ್, ತಾ.ಪಂ ಸದಸ್ಯರಾದ ಕಾಂತರಾಜು, ವೆಂಕಟೇಶ್, ಮಾರೇಗೌಡ, ಜಯಲಕ್ಷ್ಮಿ ತಮ್ಮಯ್ಯ, ನೇರಲೂರು ಲಿಂಗೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.