ಶ್ರೀರಾಮನ ತತ್ವ ಆದರ್ಶ ಮೈಗೂಡಿಸಿಕೊಳ್ಳಿ
ನೆಲಮಂಗಲ: ಮಹಾನ್ ಚೇತನ ಶ್ರೀರಾಮನ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕು ಎಂದು ಗ್ರಾ.ಪಂ.ಸದಸ್ಯ ಬೈರೇಗೌಡ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ಕುಣಿಗಲ್ ಸರ್ಕಲ್ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಕಾರ್ಯಕ್ರಮ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಉತ್ಸವದ ಮೆರವಣಿಗೆ ನೇತೃತ್ವ ವಹಿಸಿ ಮಾತನಾಡುತ್ತಾ ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಮನೋಭಾವನೆ
ಬೆಳೆಸಿಕೊಂಡಲ್ಲಿ ಪ್ರೀತಿ, ವಿಶ್ವಾಸ ಬೆಳೆದು ಎದುರಾಗುವಂತ ಸಮಸ್ಯೆಗಳಿಗೆ ಸುಲಭ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಇದರಿಂದಾಗಿ ಸದಾ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪಟ್ಟಣದ ಅಡೇಪೇಟೆಯ ಹಿಪ್ಪೆ ಆಂಜನೇಯ ಸ್ವಾಮಿ, ರಾಮಮಂದಿರ, ವಾಸವಿ ಕಲ್ಯಾಣ ಮಂಟಪ ರಸ್ತೆ, ಮಾರ್ಕೆಟ್ ಚೌಕದ ಬಳಿ ಪೇಟೆ ಆಂಜನೇಯ ಸ್ವಾಮಿ ದೇವಾಲಯ, ಬಸ್ ನಿಲ್ದಾಣ, ಕುಣಿಗಲ್ ಬೈಪಾಸ್, ತಿಮ್ಮಶಿಟ್ಟಪ್ಪ ಬಡಾವಣೆ ಆಂಜನೇಯ ದೇವಸ್ಥಾನ, ಸೊಂಡೆಕೊಪ್ಪ ಆಟೋ ನಿಲ್ದಾಣ ಹಾಗೂ ಪಟ್ಟಣದ ಅನೇಕ ಕಡೆ ಶ್ರೀ ರಾಮ ನವಮಿ ಆಚರಿಸಿ ಪಾನಕ, ಮಜ್ಜಿಗೆ, ಹೆಸರುಬೇಳೆ ವಿತರಿಸಿ ಸಂಭ್ರಮಿಸಿದರು.
ಪುಟ್ಟ ಮಕ್ಕಳ ಕೈಯಲ್ಲಿ ಪಕ್ಷದ ಬಾವುಟ ಹಿಡಿಸಿ ಪ್ರಚಾರ
ರಾಮನಗರ: ಇಲ್ಲೊಬ್ಬ ರಾಜಕೀಯ ಪಕ್ಷದ ಕಾರ್ಯಕರ್ತ ಮಹಾಶಯ ಪುಟ್ಟ ಮಕ್ಕಳ ಕೈಯಲ್ಲಿ ಪಕ್ಷದ ಬಾವುಟ ಹಿಡಿಸಿ, ಅವರಿಂದ ಪಕ್ಷ, ಅಭ್ಯರ್ಥಿ ಹಾಗೂ ತಮ್ಮ ಪರ ಘೋಷಣೆಗಳನ್ನು ಕೂಗಿಸಿಕೊಂಡು ಪ್ರಚಾರ ನಡೆಸಿದ್ದಾರೆ.
ರಾಮನಗರ ನಗರಸಭೆಯ 29ನೇ ವಾರ್ಡ್ನಲ್ಲಿ ಈ ದೃಶ್ಯ ಕಂಡು ಬಂದಿತು. ಸದರಿ ವಾರ್ಡ್ನ ನಗರಸಭೆ ಸದಸ್ಯೆಯ ಪತಿ, ಜೆಡಿಎಸ್ ಕಾರ್ಯಕರ್ತ ಮೆಹಬೂಬ್ ಖಾನ್ ಪುಟ್ಟ ಮಕ್ಕಳನ್ನು ಪ್ರಚಾರಕ್ಕೆ ಇಳಿಸಿದ ವ್ಯಕ್ತಿಯಾಗಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್, ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಮುಂದಾಳತ್ವ ವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ನಡೆಸುತ್ತಿರುವುದು ಎಲ್ಲೆಡೆ ಕಂಡು ಬಂದಿದೆ. ಬೇರೆ ವಾರ್ಡ್ಗಳಲ್ಲಿ ಸ್ವಪಕ್ಷ ಮತ್ತು ಅನ್ಯ ಪಕ್ಷದವರು ನಡೆಸುತ್ತಿರುವ ಪ್ರಚಾರದಿಂದ ಪ್ರೇರಿತರಾದ ಮೆಹಬೂಬ್ ಖಾನ್ ತಮ್ಮ ವಾರ್ಡ್ನಲ್ಲೂ ಪ್ರಚಾರಕ್ಕೆ ಇಳಿದರು. ತಮ್ಮೊಟ್ಟಿಗೆ ಜನರಿಲ್ಲದಿದ್ದಾಗ ಮಕ್ಕಳನ್ನೇ ಹಿಂಬಾಲಕರನ್ನಾಗಿ ಬಳಸಿಕೊಂಡಿದ್ದಾರೆ. ಮುಗ್ಧ ಮನಸ್ಸಿನ ಪುಟ್ಟ ಮಕ್ಕಳು ಮಹೆಬೂಬ್ ಖಾನ್ ಹೇಕೊಟ್ಟಂತೆಯೇ ಘೋಷಣೆ ಕೂಗಿಕೊಂಡು ಅವರ ಹಿಂದೆ ಸಾಗಿದರು. ಹೀಗೆ ಮಕ್ಕಳನ್ನು ಪ್ರಚಾರದಲ್ಲಿ ಬಳಸಿಕೊಂಡಿದ್ದನ್ನು ನೋಡಿದವರು ನಿಮಗೆ ಕಾರ್ಯಕರ್ತರೇ ಇಲ್ಲವೇ ಎಂದು ಹಿಯಾಳಿಸಿದ್ದೂ ಉಂಟು.
ಅಕ್ಷರ ಕಲಿತು, ದೇಶದ ಸತ್ಪ್ರಜೆಗಳಾಗಬೇಕಾದ ಮಕ್ಕಳನ್ನು ರಾಜಕೀಯದ ವಿಷವರ್ತುಲಕ್ಕೆ ದೂಡುವ ಪುಢಾರಿಗಳ ಈ ಪರಿಪಾಠಕ್ಕೆ ಕೊನೆ ಇಲ್ಲದಂತಾಗಿದೆ. ಅಧಿಕಾರಿಗಳೂ ಇತ್ತ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿ.