ದೊಡ್ಡಬಳ್ಳಾಪುರದಲ್ಲಿ ಸಿಪಿಎಂ ರೋಡ್ ಶೋ
ದೊಡ್ಡಬಳ್ಳಾಪುರ: ಇಂದು ರಾಜಕೀಯ ಪಕ್ಕಾ ವ್ಯಾಪಾರ ಆಗಿದೆ. ಬಂಡವಾಳ ಹೂಡಿಕೆ ಮತ್ತು ಲಾಭಕೋರತನ ಬಹುತೇಕ ರಾಜಕಾರಣಿಗಳಲ್ಲಿ ಕಾಣುತ್ತಿದ್ದೇವೆ. ನೀರು, ಸೀರೆ, ದುಡ್ಡು ಹಂಚಿ ಓಟು ಪಡೆಯೋ ಭೂ ಮಾಫಿಯಾ, ಗಣಿ ಮಾಫಿಯಾ, ಮದ್ಯ ಮಾಫಿಯಾದ ದೊರೆಗಳನ್ನು ದೂರ ಇಡಿ ಎಂದು ಸಿಪಿಐ(ಎಂ) ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಕರೆ ನೀಡಿದರು.
ಇಲ್ಲಿನ ಅನೇಕ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದ ಅವರು ಪ್ರಮುಖ ವೃತ್ತಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.
ದೇಶದಲ್ಲ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದ ಆರ್ಥಿಕತೆ ಸಂಕಷ್ಟದಲ್ಲಿದೆ. ಶೇ.70ರಷ್ಟು ಜನರ ಬದುಕು ಬೀದಿಗೆ ಬಿದ್ದಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿವೆ. ಇದರ ವ್ಯವಸ್ಥಿತ ಪಿತೂರಿ ಹಿಂದೆ ಬಿಜೆಪಿ-ಕಾಂಗ್ರೆಸ್ ಸಮಾನ ಪಾತ್ರಧಾರಿಗಳು. ನವವಸಾಹತುಶಾಹಿ ಕಾಂಗ್ರೆಸ್ ಆರ್ಥಿಕ ನೀತಿಗಳ ಬಗ್ಗೆ ಬಿಜೆಪಿಯ ಮೋದಿ ಮಾತಾಡಲ್ಲ. ಏಕಂದ್ರೆ ಮೋದಿ ಧೋರಣೆಯೂ ಅದೆ. 4.2 ಡಾಲರ್ ಇದ್ದ ಬ್ಯಾರಲ್ ಪೆಟ್ರೋಲ್ ಬೆಲೆಯನ್ನು 8.5ಕ್ಕೇರಿಸಿದ್ದು ಕಾಂಗ್ರೆಸ್. ಇದರಿಂದ ಲಾಭ ಮಾಡಿಕೊಂಡಿದ್ದು ತೈಲ ಕಂಪನಿಗಳು. ಇದರಲ್ಲಿ ಕೇಂದ್ರ ಸಚಿವ ಮೊಯ್ಲಿ ಪಾತ್ರ ಪ್ರಮುಖ. ಕುಮಾರಸ್ವಾಮಿ ಪರಮಶಿವಯ್ಯ ವರದಿ ಜಾರಿ ಅಸಾಧ್ಯ. ಇದೊಂದು ಅವೈಜ್ಞಾನಿಕ ವರದಿ ಎಂದು ಹೇಳಿದ್ದರು. ಆದರೆ ಇಂದು ಮತಬ್ಯಾಂಕಿಗಾಗಿ ಶಾಶ್ವತ ನೀರಾವರಿ ಮಂತ್ರ ಜಪಿಸುವ ನಾಟಕ ಆಡುತ್ತಿದ್ದಾರೆ. ಇಂಥಹವರನ್ನು ಜನ ಯಾವ ರೀತಿ ಒಪ್ಪಿಕೊಳ್ತಾರೆ ಎಂಬ ಕನಿಷ್ಠ ಪ್ರಜ್ಞೆ ಇರಬೇಕು ಎಂದರು.
ಜಿಲ್ಲಾ ಸಿಪಿಐ(ಎಂ) ಕಾರ್ಯದರ್ಶಿ ಆರ್. ಚಂದ್ರತೇಜಸ್ವಿ, ತಾಲೂಕು ಕಾರ್ಯದರ್ಶಿ ಬಿ.ಜಿ. ಹೇಮಂತರಾಜು, ಮುಖಂಡರಾದ ಪಿ.ಎ. ವೆಂಕಟೇಶ್, ಎಸ್. ಪ್ರಭಾ, ರುದ್ರಾರಾಧ್ಯ, ಚೌಡಯ್ಯ ಇತರರು ಹಾಜರಿದ್ದರು.
ಅಧಿಕ ಮತದಿಂದ ಪ್ರಭಾಕರ್ ರೆಡ್ಡಿ ಗೆಲ್ಲಿಸಿ
ಮಾಗಡಿ: ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಅವರನ್ನು ಕನಿಷ್ಠ 20 ಸಾವಿರ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಮಾಗಡಿ ತಾಲೂಕಿನ ಕುದೂರು ಹೋಬಳಿ ಮಾದಿಗೊಂಡನಹಳ್ಳಿ, ಮರೂರು ಬಳಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಯಕರ್ತರು ನಾಳೆ ಎನ್ನದೆ ಇಂದಿನಿಂದಲೇ ಮತಭೇಟೆಗೆ ಸನ್ನದ್ಧರಾಬೇಕು ಎಂದರಲ್ಲದೆ ಈ ಬಾರಿ ಲೋಕಸಭಾ ಚುನಾವಣೆ ನಂತರ ಸಿಎಂ. ಸಿದ್ದರಾಮಯ್ಯ ಅವರ ಸ್ಥಾನ ಡೋಲಾಯಮಾನವಾಗಲಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ ಮಾತನಾಡಿ ಕಾರ್ಯಕರ್ತರ ಒಗ್ಗಟ್ಟು ಪಕ್ಷದ ಅಭ್ಯರ್ಥಿ ಗೆಲವಿಗೆ ನಾಂದಿಯಾಗಲಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಮುಂದಿರುವ ಗುರಿ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ತಿಳಿಸಿದರು.
ನಾರಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್, ಗಂಗಣ್ಣ ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಹಂಸಕುಮಾರಿ, ತಾ.ಪಂ. ಮಾಜಿ ಉಪಾಧ್ಯಕ್ಷ ಉದ್ದೇಶ್, ಟಿ. ಹನುಮಂತರಾಯಪ್ಪ, ಗಂಗರಾಜು, ನಾಗೇಶ್,ಅನುಸೂಯಮ್ಮ ಮರಿಗೌಡ, ಸೋಮಶೇಖರ್, ವೇಣುಗೋಪಾಲ್ ಇತರರು ಇದ್ದರು.