ಮತ್ತೆ ಸಕ್ರಿಯ ಚುನಾವಣಾ ಅಖಾಡಕ್ಕೆ ಜಾಲಪ್ಪ ಕುಟುಂಬ
-ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಮತ್ತೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಕಾಂಗ್ರೆಸ್ನಲ್ಲಿದ್ದು, ಕಳೆದ ಚುನಾವಣೆ ವೇಳೆ ರಾಜಕೀಯ ಸನ್ಯಾಸ ಪಡೆದಿದ್ದ ಅವರು ಈಗ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಪರ ಪ್ರಚಾರಕ್ಕಿಳಿಯುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಅದೂ ಅಲ್ಲದೆ
ಸ್ವತಃ ಜಾಲಪ್ಪನವರೇ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದಾಗಿ ಸದ್ಯ ಬಿಜೆಪಿಯಲ್ಲಿರುವ ಮಾಜಿ ಶಾಸಕ ಮತ್ತು ಜಾಲಪ್ಪ ಅವರ ಪುತ್ರ ಜೆ.ನರಸಿಂಹಸ್ವಾಮಿ ತೀವ್ರ ಮುಜುಗರಕ್ಕೆ ಒಳಗಾಗುವಂತಾಗಿದೆ. ಅಲ್ಲದೆ ಪಕ್ಷ ಮತ್ತು ಕುಟುಂಬ ಪ್ರಶ್ನೆಗಳ ನಡುವೆ ದೊಡ್ಡ ಸಂದಿಗ್ಧತೆ ಎದುರಾಗಿದೆ.
ಕೈ ಹಿಡಿದ ಜಾಲಪ್ಪ ಪುತ್ರರು: ಇನ್ನು ಗಣನೀಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಜಾಲಪ್ಪ ಅವರ ಮತ್ತಿಬ್ಬರು ಪುತ್ರರಾದ ದೊಡ್ಡಬಳ್ಳಾಪುರ ನಗರಸಭೆ ಮಾಜಿ ಅಧ್ಯಕ್ಷ ಜೆ.ರಾಜೇಂದ್ರ ಮತ್ತು ಜಾಲಪ್ಪ ವಿದ್ಯಾ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದ ಜೆ.ನಾಗೇಂದ್ರಸ್ವಾಮಿ ಕೈಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದ ಅಭ್ಯರ್ಥಿ ವೀರಪ್ಪಮೊಯ್ಲಿ ಸ್ವತಃ ಈ ಇಬ್ಬರನ್ನೂ ಭೇಟಿ ಮಾಡಿ ಕೈಕುಲುಕಿದ್ದಾರೆ. ಜೊತೆಗೆ ಬಹಿರಂಗ ಪ್ರಚಾರ ಸಭೆಗಳಲ್ಲೂ ಈ ಇಬ್ಬರೂ ಮೊಯ್ಲಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಜೆ.ನರಸಿಂಹಸ್ವಾಮಿಯವರನ್ನು ಹಿಂಬಾಲಿಸಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ನಿಂದ ಬಿಜೆಪಿಗೆ ಜಿಗಿದಿದ್ದ ಜಾಲಪ್ಪನವರ ಹಲವು ಬೆಂಬಲಿಗರು ಮತ್ತೆ
ಮಾತೃಪಕ್ಷಕ್ಕೆ ಮರಳುವುದು ಈಗ ನಿಶ್ಚಿತವಾಗಿದೆ.
ಮೊಯ್ಲಿ ಮಾಸ್ಚರ್ ಪ್ಲಾನ್: ಕ್ಷೇತ್ರದ ಮೇಲೆ ಬಲವಾದ ಹಿಡಿತವನ್ನು ಇಂದಿಗೂ ಹೊಂದಿರುವ ಜಾಲಪ್ಪ ಅವರ ಬೆಂಬಲ ಗಳಿಸುವ ಮೂಲಕ ಮೊಯ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಜಾಲಪ್ಪ ಅವರು 3 ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದೂ ಅಲ್ಲದೆ ಒಮ್ಮೆ ಕೇಂದ್ರದಲ್ಲಿ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಸ್ವಕ್ಷೇತ್ರ ದೊಡ್ಡಬಳ್ಳಾಪುರ, ನೆರೆಹೊರೆಯ ಗೌರಿಬಿದನೂರು, ನೆಲಮಂಗಲ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮುಂತಾದೆಡೆ ಇಂದಿಗೂ ತಮ್ಮ ಬೆಂಬಲಿಗರನ್ನು ಹೊಂದಿದ್ದಾರೆ. ಇದು ಕಾಂಗ್ರೆಸ್ಗೆ ವರದಾನವಾದರೂ ಅಚ್ಚರಿಯಿಲ್ಲ.
ನರಸಿಂಹಸ್ವಾಮಿ ನಡೆ ಏನು: ಏನೇ ಆದರೂ ನಾನು ಸದ್ಯ ಬಿಜೆಪಿಯಲ್ಲೇ ಇದ್ದೇನೆ. ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದ್ದ ನರಸಿಂಹಸ್ವಾಮಿ ತಮ್ಮ ತಂದೆಯ ನಡೆ ಗಮನಿಸಿ ಕೊಂಚ ಗೊಂದಲಕ್ಕೆ ಸಿಲುಕಿದ್ದಾರೆ. ನರಸಿಂಹಸ್ವಾಮಿ ಅವರ ಹಿಂದಿರುವ ಹಲವು ನಾಯಕರು, ಜಾಲಪ್ಪನವರ ಮಾತನ್ನು ಅಲ್ಲಗೆಳೆಯುವುದಿಲ್ಲ ಎಂಬ ಸತ್ಯ ಸ್ವತಃ ನರಸಿಂಹಸ್ವಾಮಿ ಅವರಿಗೂ ಗೊತ್ತಿದೆ. ಆದಾಗ್ಯೂ ಈ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪಡೆಯುವ ಮತಗಳು ಜಾಲಪ್ಪಪುತ್ರ ಎಂಬ ಪ್ರಭಾವಳಿಯಿಂದ ಹೊರಗಿರುವ ನರಸಿಂಹಸ್ವಾಮಿ ಅವರ ಸ್ವಂತ ಇಮೇಜ್ಗೆ ಸಿಗುವ ಮಾನ್ಯತೆ ಎನ್ನಬಹುದು ಎಂಬ ವಿಶ್ಲೇಷಣೆ ಸಿಗುತ್ತಿದೆ. ಪ್ರಸ್ತುತ ರಾಜಕೀಯ ಬೆಳವಣಿಗೆಯಿಂದ ಏನಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಜಾಲಪ್ಪ ಅವರ ಕುಟುಂಬ ಬಹಿರಂಗವಾಗಿಯೇ ಎರಡು ಪಕ್ಷಗಳಲ್ಲಿ ಗುರುತಿಸಿಕೊಂಡಂತಾಗಿದೆ. ನರಸಿಂಹಸ್ವಾಮಿ ಕೂಡ ಈ ಹಿಂದೆ ಕಾಂಗ್ರೆಸ್ ಸೇರ್ಪಡೆಗೆ ಪ್ರಯತ್ನಿಸಿದ್ದರಾದರೂ ವ್ಯವಸ್ಥಿತ ರೀತಿಯಲ್ಲಿ ಸಂಧಾನವಾಗಿರಲಿಲ್ಲ. ಬದಲಿಗೆ ಕಳೆದ ಚುನಾವಣೆಯಲ್ಲಿ 4 ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು ಎಂಬುದನ್ನು ಮರೆಯುವಂತಿಲ್ಲ.