ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರದರ್ಶನ
ನಾಗಮಂಗಲ: ಬೆಳ್ಳೂರಿನಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳಿಸುವ ನಿರ್ಧಾರ ಖಂಡಿಸಿ ನಾಗರಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪ್ರತಿಭಟನೆ ನಡೆಸಿದ ನಾಗರಿಕರು, 1961ರಿಂದ ಬೆಳ್ಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನೋಂದಣಾಧಿಕಾರಿ ಕಚೇರಿ ಕಟ್ಟಡವನ್ನು ಶಿಥಿಲಗೊಂಡಿದೆ ಎಂಬ ನೆಪಹೇಳಿ, ಖಾಸಗಿ ಕಟ್ಟಡವೊಂದಕ್ಕೆ ಸ್ಥಳಾಂತರಿಸಲು ನಿರ್ಧಾರ ಮಾಡಿರುವುದನ್ನು ವಿರೋಧಿಸಿದರು.
ಉಪನೋಂದಣಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ರು. 50 ಲಕ್ಷ ಹಣ ಬಿಡುಗಡೆ ಮಾಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳವನ್ನು ಗೊತ್ತುಪಡಿಸಿ, ಅನುಮೋದನೆಗಾಗಿ ತಹಸೀಲ್ದಾರ್ಗೆ ಪತ್ರ ವ್ಯವಹಾರ ನಡೆಸಿದೆ.
ಆದರೆ, ಬೆಳ್ಳೂರು ಉಪನೋಂದಣಾಧಿಕಾರಿ ಬಸವಯ್ಯ ಸತ್ಯಾಂಶವನ್ನು ಮರೆಮಾಚಿ, ಇಲಾಖೆಯ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಬೆಳ್ಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಟ್ಟಡವನ್ನು ಏಕಾ ಏಕಿ ಬೆಳ್ಳೂರು ಕ್ರಾಸ್ ಖಾಸಗಿ ಕಟ್ಟಡವೊಂದಕ್ಕೆ ಸ್ಥಳಾಂತರಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪನೋಂದಣಾಧಿಕಾರಿ ಕಚೇರಿಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳಿಸುವ ನಿರ್ಧಾರವನ್ನು ಅಧಿಕಾರಿಗಳು ತಕ್ಷಣ ಕೈಬಿಡಬೇಕು. ತಪ್ಪಿದಲ್ಲಿ ಏ. 15ರಂದು ಬೆಳ್ಳೂರು ಬಂದ್ ಕರೆನೀಡಲಾಗುವುದು. ತಪ್ಪಿದ್ದಲ್ಲಿ ಏ.17ರಂದು ನಡೆಯುವ ಲೋಕಸಭಾ ಚುನಾವಣೆಯನ್ನೇ ಬಹಿಷ್ಕರಿಸಲು ಬೆಳ್ಳೂರು ನಾಗರಿಕ ಸಮುದಾಯ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಉಪಾದ್ಯಕ್ಷ ಮಹಮ್ಮದ್ ಯಾಸಿನ್, ಅನೀಫ್, ಮಾಜಿ ಅಧ್ಯಕ್ಷ ಪಾಪಣ್ಣ, ರಾಜಣ್ಣ, ಸದಸ್ಯ ಸಯ್ಯದ್ ಅಲೀಮ್, ಮಾಜಿ ಪ್ರಧಾನ್ ಅಬ್ದುಲ್ ಅಲೀಮ್, ರಕ್ಷಣಾ ವೇದಿಕೆಯ ಅಧ್ಯಕ್ಷ ವಿಜಯಕುಮಾರ್, ಗೌರವಾಧ್ಯಕ್ಷ ಮೋಹನ್ ಇದ್ದರು.