ಗ್ರಾಮೀಣ ಭಾಗದಲ್ಲಿ ಗರ ಬಡಿದ ಸೇವೆ!
ರಾಮನಗರ: ದೇಶದಲ್ಲೇ ಉತ್ಕೃಷ್ಟ ಸಾರಿಗೆ ಸೌಲಭ್ಯ ಪ್ರಶಸ್ತಿಗೆ ಭಾಜನವಾಗಿರುವ ಕೆಎಸ್ಆರ್ಟಿಸಿ. ಗ್ರಾಮೀಣ ಭಾಗದಲ್ಲಿ ನೀಡುತ್ತಿರುವ ಸೇವೆ ಮಾತ್ರ ತೀರಾ ಕಳಪೆ. ರಾಜಧಾನಿ ಸನಿಹದಲ್ಲೇ ಇರುವ ರಾಮನಗರದಲ್ಲಂತೂ ನಿಗಮದ ಬಸ್ಗಳ ಸ್ಥಿತಿ ಅಯೋವುಯ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಿಡದಿ-ರಾಮನಗರ-ಚನ್ನಪಟ್ಟಣ-ಮದ್ದೂರುವರೆಗೆ ಸಮರ್ಪಕ ಷಟಲ್ ಬಸ್ಗಳೇ ಇಲ್ಲ. ಇನ್ನು ಸಾಕಷ್ಟು ಗ್ರಾಮೀಣ ಭಾಗಗಳಿಗೆ ಹಾಕಿರುವ ಬಸ್ಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ.
ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ರಾಮನಗರ ಜಿಲ್ಲೆಯಲ್ಲೇ ಅತ್ಯುತ್ತಮ ಆದಾಯ ಮೂಲವಾಗಿರುವ ಮಾಗಡಿ ಮತ್ತು ರಾಮನಗರ ಮಾರ್ಗದಲ್ಲಿ 32 ಕಿ.ಮೀ. ದೂರವನ್ನು ಕ್ರಮಿಸಲು ಬಸ್ಸೊಂದು 2 ತಾಸಿಗೂ ಹೆಚ್ಚು ಸಮಯ ತೆಗೆದುಕೊಂಡಿದೆ.
ಶುಕ್ರವಾರ ಬೆಳಗ್ಗೆ 9.20ಕ್ಕೆ ರಾಮನಗರ ಬಿಟ್ಟು ಹೊರಟ ಬಸ್ ಮೂವತ್ತೆರಡು ಕಿ.ಮೀ. ದೂರದಲ್ಲಿರುವ ಮಾಗಡಿ ತಲುಪಿದ್ದು 11.40ಕ್ಕೆ. ಈ ಮಾರ್ಗದ ಗರಿಷ್ಠ ಪ್ರಯಾಣ ಸಮಯ 40 ರಿಂದ 45 ನಿಮಿಷ. ತಡವಾದ್ದರಿಂದ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಪರದಾಡಿದರು.
ತಡವಾದ ಬಗ್ಗೆ ಬಸ್ನಲ್ಲಿದ್ದ ಪ್ರಯಾಣಿಕರು ಚಾಲಕ, ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಅಧಿಕಾರಿಗಳಿಗೆ ಫೋನಾಯಿಸಿ ಉಗಿದು, ಉಪ್ಪಿನಕಾಯಿ ಹಾಕಿದ್ದೂ ಉಂಟು. ಹೈಟೆಕ್ ಯುಗದಲ್ಲೂ ಓಬೆರಾಯನ ಕಾಲದ ಬಸ್ಗಳನ್ನೇ ಇಲ್ಲಿ ಓಡಿಸುತ್ತಿದ್ದಾರೆ.
ರಾಮನಗರ ವಿಭಾಗಕ್ಕೆ ಸೇರಿದ ಘಟಕಗಳಲ್ಲಿ ಸುಸ್ಥಿತಿಯಲ್ಲಿರುವುದಕ್ಕಿಂತ ದುರಸ್ತಿಗೆ ನಿಂತ ಬಸ್ಗಳೇ ಅಧಿಕ ಸಂಖ್ಯೆಯಲ್ಲಿವೆ. ಮೆಕಾನಿಕ್ಗಳು ಸರಿಯಾಗಿ ದುರಸ್ತಿ ಮಾಡುತ್ತಿಲ್ಲ. ಅಧಿಕಾರಿಗಳು ಯಾವುದನ್ನೂ ಗಮನಿಸುತ್ತಿಲ್ಲ ಎನ್ನುವುದು ಸಿಬ್ಬಂದಿ ಆರೋಪ.
ಎಂಜಿನ್ ದುರಸ್ತಿಗೆ ಬಂದಿದೆ ಎಂದು ಚಾಲಕ, ನಿರ್ವಾಹಕರು ಪ್ರತಿನಿತ್ಯ ಲಾಗ್ ಶೀಟ್ನಲ್ಲಿ ಬರೆದು ಕೊಡುತ್ತಲೇ ಇದ್ದಾರೆ. ಆದರೆ, ಅಧಿಕಾರಿಗಳು ಅದೇ ವಾಹನ ಮಾರ್ಗಕ್ಕೆ ಹಾಕುತ್ತಾರೆ. ಅಲ್ಲಿ ಪ್ರಯಾಣಿಕರಿಂದ ಉಗಿಸಿಕೊಳ್ಳುವುದು ಸಿಬ್ಬಂದಿಗೆ ತಪ್ಪಲಿಲ್ಲ.
ಬದಲಿ ವಾಹನ ನೀಡಬೇಕೆಂದು ಮನವಿ ಮಾಡಿದರೆ ಅಧಿಕಾರಿಗಳು ಚಾಲಕ, ನಿರ್ವಾಹಕರಿಗೆ ನೊಟೀಸ್ ನೀಡುತ್ತಿದ್ದಾರೆ. ಅಧಿಕಾರಿಗಳು ಇನ್ನಾದರೂ ಬಸ್ಗಳ ಸ್ಥಿತಿ ಗತಿ, ಪ್ರಯಾಣಿಕರಿಗೆ ಒದಗಿಸುತ್ತಿರುವ ಸೇವೆಗಳ ಬಗ್ಗೆ ಗಮನ ಹರಿಸಬೇಕೆನ್ನುವುದು ಪ್ರಯಾಣಿಕರ ಆಗ್ರಹ.
ದಾಖಲೆ ಇಲ್ಲದ ಹಣ ವಶ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ದೇವನಗುಂದಿ ಸಂತೆ ಮೈದಾನ ಳಿ ಸೂಕ್ತ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಾಣೆ ಮಾಡುತ್ತಿದ್ದ ನಾಲ್ಕು ಲಕ್ಷ ಹಣವನ್ನು ಚುನಾವಣಾ ಸ್ಕ್ವಾಡ್ ತಂಡ ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.ಬೆಂಗಳೂರು ಕಡೆಯಿಂದ ಮಾಲೂರು ಮಾರ್ಗವಾಗಿ ಸಂಚರಿಸುತ್ತಿದ್ದ ಮಾರುತಿ ಶಿಫ್ಟ್ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಅಧಿಕಾರಿ ನರಸಿಂಗರಾವ್ ನೇತೃತ್ವದ ತಂಡ ಅನುಮಾನದ ಮೇಲೆ ಕಾರನ್ನು ತಪಾಸಣೆ ಮಾಡಿದಾಗ ಹಣ ಪತ್ತೆಯಾಗಿದೆ. ಹಣದ ಬಗ್ಗೆ ಅಗತ್ಯ ದಾಖಲೆ ತೋರಿಸದ ಕಾರಣ ಅನುಗೊಂಡಹಳ್ಳಿ ಪೊಲೀಸರಿಗೆ ಪ್ರಕರಣ ಒಪ್ಪಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.