ಗ್ರಾಮೀಣ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಮತಯಾಚನೆ
ರಾಮನಗರ: ಸ್ಥಿರ ಸರ್ಕಾರ ಮತ್ತು ಸದೃಢ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿಯಂತಹ ನಾಯಕರ ಪ್ರಧಾನಿ ಹುದ್ದೆಗೇರಬೇಕ್ಕೆನ್ನುವುದು ದೇಶದ ಬಹುಪಾಲು ಜನರ ಆಶಯ. ಈ ನಿಟ್ಟಿನಲ್ಲಿ ಎಲ್ಲೆಡೆ ಬಿಜೆಪಿ ಅಲೆ ಎದ್ದಿದೆ ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜುಗೌಡ ಹೇಳಿದರು.
ಮೋದಿ ಅವರಿಗೆ ಚುಕ್ಕಾಣಿ ಸಿಕ್ಕರೆ, ದೇಶದ ಚಿತ್ರಣವೇ ಬದಲಾಗಲಿದೆ. ಗುಜರಾತ್ಮಾದರಿಯ ಅಭಿವೃದ್ಧಿಯನ್ನು ದೇಶವ್ಯಾಪಿ ಕಾಣುವಂತಾಗುತ್ತದೆ ಎಂದು ರಾಮನಗರ ಕಸಬಾ ಹೋಬಳಿ ಸಹಿತ ಜಿಲ್ಲೆಯ ವಿವಿಧೆಡೆ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದರು.
ಇಲ್ಲೂ ಮೋದಿ ಅಲೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದ ಬೆಂಗಳೂರು ನಗರ, ರಾಮನಗರ ಮತ್ತು ತುಮಕೂರಿನ
ಕುಣಿಗಲ್ಗಳ ವ್ಯಾಪ್ತಿಯಲ್ಲೂ ಬಿಜೆಪಿ ಹಾಗೂ ನರೇಂದ್ರಮೋದಿ ಅಲೆ ಇದೆ. ಹೀಗಾಗಿ ಕ್ಷೇತ್ರದಲ್ಲಿ ನನ್ನ ಗೆಲವು ನಿಶ್ಚಿತ ಎಂದರು.
ರಕ್ಷಣೆ ಇಲ್ಲದಾಗಿದೆ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಅಧಿಕಾರದ ದುರಾಸೆಯಿದೆಯೇ ಹೊರತು, ದೇಶದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಬದ್ಧತೆ ಖಂಡಿತ ಇಲ್ಲ. ರಾಷ್ಟ್ರದಲ್ಲಿ ರಕ್ಷಣಾ ವ್ಯವಸ್ಥೆಗೆ ಸರ್ಕಾರ ಸೂಕ್ತ ಕಾಳಜಿವಹಿಸಿಲ್ಲ ಎಂದು ಮುನಿರಾಜುಗೌಡ ಟೀಕಿಸಿದರು.
ದೇಶದಲ್ಲಿ ಉಗ್ರರು, ನಕ್ಸಲರ ಉಪಟಳದಿಂದ ಅದೆಷ್ಟೋ ಸೈನಿಕರು ಪೊಲೀಸರಿಗೆ ಅತ್ಯಾಧುನಿಕ ಗನ್, ಗುಂಡು ನಿರೋಧಕ ಕವಚ ಸೇರಿದಂತೆ ಸೂಕ್ತ ಸೌಲಭ್ಯ ಒದಗಿಸಿ ಪ್ರಾಣ ಉಳಿಸಬೇಕು ಎಂದರು.
ಕೇಂದ್ರದಲ್ಲಿ ಎನ್ಡಿಎ ಸರ್ಕಾರ ರಚನೆ ಖಚಿತ. ಮತದಾರರು ಈ ಬಾರಿ ನನಗೊಂದು ಅವಕಾಶ ಕಲ್ಪಿಸಿದ್ದೇ ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇನೆ ಎಂದು ಭರವಸೆ ನೀಡಿದರು.