ನಿಮ್ಮೊಡನಿದ್ದು ನಿಮ್ಮಂತಾಗುವೆ
ರಾಮನಗರ: ನಮ್ಮ ಕುಟುಂಬದ ಪಾಲಿಗೆ ರಾಮನಗರ ಪುಣ್ಯ ಭೂಮಿ. ಇಲ್ಲಿನ ಜನತೆಯ ಆಶೀರ್ವಾದ, ಪ್ರೀತಿ-ವಿಶ್ವಾಸದೊಂದಿಗೆ ಈ ಕ್ಷೇತ್ರದಲ್ಲೇ ನನ್ನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಎಂದು ಜೆಡಿಎಸ್ ತಾರಾ ಪ್ರಚಾರಕ ಎಚ್.ಕೆ. ನಿಖಿಲ್‌ಗೌಡಹೇಳಿದರು.
ರಾಮನಗರ ವಿಧಾನಸಭಾ ವ್ಯಾಪ್ತಿಗೆ ಸೇರಿದ ಮರಳವಾಡಿ, ಕೀರಣಗೆರೆ, ಹಾರೋಹಳ್ಳಿ ಸಹಿತ ವಿವಿಧೆಡೆ ಬೆಂಗಳೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ ಪರ ಮತಯಾಚಿಸಿ ಅವರು ಮಾತನಾಡಿದರು.
ನನ್ನ ತಂದೆ ಇಂದು ರಾಜ್ಯ ಮಟ್ಟದ ನಾಯಕರಾಗಿ ಬೆಳೆದು, ಬೇರೊಂದು ಕ್ಷೇತ್ರಕ್ಕೆ ಹೋಗಿ ಸ್ಪರ್ಧಿಸುವಂತಹ ಶಕ್ತಿ ಬರಲು ರಾಮನಗರ ಜನತೆಯ ಪ್ರೀತ್ಯಾದರ, ಆಶೀರ್ವಾದವೇ ಕಾರಣ. ಪಕ್ಷದ ನಿರ್ಧಾರಕ್ಕೆ ಅವರು ತಲೆಬಾಗಿದ್ದಾರೆಯೇ ಹೊರತು, ಪಲಾಯನ ಮಾಡಿಲ್ಲ ಎಂದು ನಿಖಿಲ್‌ಗೌಡ ಸಮರ್ಥಿಸಿಕೊಂಡರು.
ತೊರೆಯುವ ಪ್ರಶ್ನೆಯೇ ಇಲ್ಲ: ರಾಮನಗರ ಕ್ಷೇತ್ರವನ್ನು ನಮ್ಮ ಕುಟುಂಬ ತೊರೆಯುವ ಪ್ರಶ್ನೆಯೇ ಇಲ್ಲ. ಎಷ್ಟು ಜನ್ಮ ಎತ್ತಿದರೂ ಈ ಜನರ ಋಣ ತೀರಿಸಲಾಗದು. ಕುಮಾರಸ್ವಾಮಿ ಅವರು ಯಾವ ಕಾರಣಕ್ಕೂ ರಾಮನಗರ ಕ್ಷೇತ್ರ ಬಿಡುವುದಿಲ್ಲ. ನಾನೂ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.
ಜನಸೇವಕನಾಗುವೆ: 26ರ ತಾರುಣ್ಯದ ನನಗೆ ರಾಜಕೀಯಕ್ಕೆ ಕಾಲಿಡುವ ಯೋಚನೆ ಖಂಡಿತ ಇರಲಿಲ್ಲ. ಆದರೆ, ನನ್ನ ತಂದೆ ಕುಮಾರಸ್ವಾಮಿ ಬಗ್ಗೆ ರಾಮನಗರದ ಜನತೆ ಹೊಂದಿರುವ ಅವಿನಾಭಾವ ಸಂಬಂಧ ಕಂಡು ಅನಿವಾರ್ಯವಾಗಿ ಕಾಲಿಟ್ಟಿದ್ದೇನೆ ಎಂದು ನಿಖಿಲ್‌ಗೌಡ ಹೇಳಿದರು.
ನಾನು ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನನ್ನ ತಂದೆಯ ಜನಪರ ಕಾಳಜಿ, ಸರಳತೆ, ತಾತ ದೇವೇಗೌಡರ ಹೋರಾಟದ ಗುಣ ಮೈಗೂಡಿಸಿಕೊಂಡು ನಿಮ್ಮ ನಡುವೆ ಜನನಾಯಕನಾಗುವ ಬದಲು ಜನ ಸೇವಕನಾಗಿರುತ್ತೇನೆ ಘಿಂದು ವಾಗ್ದಾನ ನೀಡಿದರು.
ನಾನೆಂದೂ ಮರೆಯೊಲ್ಲ: ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳಲ್ಲಿ ಕೈಗೊಂಡ ಎರಡು ದಿನದ ಪ್ರಚಾರದ ವೇಳೆ ಹಿರಿಯ ಜೀವಿಗಳು, ತಾಯಂದಿರು, ಬಂಧುಗಳು ಅತೀವ ಅಭಿಮಾನ, ಪ್ರೀತಿ ತೋರಿದ್ದಾರೆ. ಇದನ್ನೆಲ್ಲಾ ನಾನೆಂದಿಗೂ ಮರೆಯುವುದಿಲ್ಲ ಎಂದು ನಿಖಿಲ್‌ಗೌಡ ತಿಳಿಸಿದರು.
ನಾನು ಎಲ್ಲರಂತಲ್ಲ: ಕೆಲ ರಾಜಕಾರಣಿಗಳು ಚುನಾವಣೆ ಬಂದಾಗ ಪೊಳ್ಳು ಭರವಸೆ ನೀಡಿ ನಂತರ ಮರೆತೇ ಹೋಗುತ್ತಿದ್ದಾರೆ. ಆದರೆ, ನಾನು ಎಲ್ಲರಂತಲ್ಲ. ಶೋಷಣೆಗೆ ಅಂತ್ಯವಾಡುವುದು, ಸುಸ್ಥಿರ ಸಮಾಜ ನಿರ್ಮಾಣವೇ ನನ್ನ ಗುರಿ. ಯುವ ಸಮುದಾಯ ಆಸೆ-ಆಮಿಷಗಳಿಗೆ ಬಲಿಯಾಗದೆ ನನ್ನೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.