ಮತಪ್ರಭುವಿಗೆ ರಾಜ ಮರ್ಯಾದೆ!
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಏ.11
ಟೋಕನ್ ಪಡೆದು ಸರದಿ ಬಂದಾಗ ಮತ ಚಲಾವಣೆ, ಕುಡಿಯಲು ನೀರು, ಕೂರಲು ನೆರಳಿನಡಿ ಆಸನ, ಶೌಚಾಲಯ, ಡಿಜಿಟಲ್ ಕ್ಯಾಮೆರಾದಿಂದ ಬೆರಳಿಗೆ ಶಾಹಿ ಹಚ್ಚಿಸಿಕೊಳ್ಳುವ ಫೋಟೋ ಇಮೇಲ್ಗೆ ರವಾನೆ, ಮತ ಚಲಾಯಿಸಿದ್ದಕ್ಕೆ ದೃಢೀಕೃತ ಚೀಟಿ,
ಸಿಸಿ ಟಿವಿ ಅಳವಡಿಕೆ... ಹೀಗೆ ಸಾಕಷ್ಟು ವ್ಯವಸ್ಥೆ ಒಳಗೊಂಡ 10 ಮಾದರಿ ಮತಗಟ್ಟೆಗಳನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ರಾಮನಗರ ಜಿಲ್ಲೆಯಲ್ಲಿ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ವಿನೂತನ ಪ್ರಯೋಗದ ಸಿದ್ಧತೆ ಬಗ್ಗೆ ಚುನಾವಣಾಧಿಕಾರಿ ಡಾ.ಡಿ.ಎಸ್.ವಿಶ್ವನಾತ್ ವಿಶೇಷ ಆಸಕ್ತಿ ವಹಿಸಿದ್ದಾರೆ.
ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 3, ಕನಕಪುರ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ತಲಾ 2 ಕಡೆ ಮೂಲ ಸೌಲಭ್ಯ ಒಳಗೊಂಡಿರುವ ಹೈಟೆಕ್ ಮತ್ತು ಮಾದರಿ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ನೀರು ಮತ್ತು ನೆರಳಿನ ವ್ಯವಸ್ಥೆ ಎಲ್ಲೆಡೆ ಇರುತ್ತದೆ.
ಟೋಕನ್ ವ್ಯವಸ್ಥೆ: ಪ್ರತಿ ಚುನಾವಣೆಯಲ್ಲೂ ಮತದಾರರು ಮತಗಟ್ಟೆ ಎದುರು ಉದ್ದನೆ ಸಾಲಿನಲ್ಲಿ ನಿಂತು ಮತ ಚಲಾಯಿಸುವುದು ನರಕಯಾತನೆಯೇ ಸರಿ. ಅದೆಷ್ಟೋ ಮಂದಿ ಸಾಲು ನೋಡಿಯೇ ವಾಪಸ್ಸಾಗುತ್ತಾರೆ. ಆದರೆ, ಮಾದರಿ ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಲ್ಲುವ ಗೊಡವೆಯೇ ಇಲ್ಲ.
ಮತದಾರರು ಮಾದರಿ ಮತಗಟ್ಟೆಗಳಿಗೆ ತೆರಳಿ ಅಧಿಕಾರಿಯಿಂದ ಟೋಕನ್ ಪಡೆದು, ಮತಗಟ್ಟೆ ಆವರಣದಲ್ಲೇ ವ್ಯವಸ್ಥೆಯಾದ ನೆರಳಿನಡಿ ಆಸೀನರಾಗಿ ವಿರಮಿಸಬಹುದು. ಸರದಿ ಬಂದಾಗ ಸಿಬ್ಬಂದಿಯೇ ಕರೆದು, ಮತದಾನಕ್ಕೆ ಅವಕಾಶ ಕಲ್ಪಿಸುತ್ತಾರೆ.
ಇಮೇಲ್ಗೆ ಫೋಟೋ: ಹೊಸ ಮತದಾರರಿಗೆ ಮೊಟ್ಟ ಮೊದಲ ಬಾರಿ ಮತ ಚಲಾಯಿಸುವುದು ಹೊಸ ಅನುಭವವಾಗಿರುತ್ತದೆ. ಮಾದರಿ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಹೋದಾಗ ಅವರು ಇಮೇಲ್ ಐಡಿ ಒದಗಿಸಿದರೆ,ೈಬೆರಳಿಗೆ ಶಾಹಿ ಹಚ್ಚಿಸಿಕೊಳ್ಳುವ ಫೋಟೋ ತೆಗೆದು ರವಾನಿಸುವ ವ್ಯವಸ್ಥೆಯನ್ನೂ ತರಲಾಗಿದೆ.
ಈ ಮತಗಟ್ಟೆಗಳಲ್ಲಿ ಮತದಾನದ ಎಲ್ಲ ಪ್ರಕ್ರಿಯೆ ಸೆರೆ ಹಿಡಿಯಲು ಸಿಸಿ ಕ್ಯಾಮೆರಾ ಇರುತ್ತವೆ. ಮತ ಚಲಾವಣೆ ಮಾಡಿದವರು ಬಯಸಿದರೆ ದೃಢೀಕೃತ ಪತ್ರ ನೀಡಲು ನಿರ್ಧರಿಸಲಾಗಿದೆ.
ಮಾದರಿ ಮತಗಟ್ಟೆಗಳಿವು...
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಗರಸಭೆ ಕಚೇರಿಯ ಕೊಠಡಿ ಸಂಖ್ಯೆ 1ರಲ್ಲಿರುವ ಮತಗಟ್ಟೆ ಸಂಖ್ಯೆ 64, ಶಾಂತಿನಿಕೇತನ ಶಾಲೆಯ ಜೀಗೇನಹಳ್ಳಿ ಭಾಗದ ಮತಗಟ್ಟೆ ಸಂಖ್ಯೆ 59, ಮರಳವಾಡಿಯ ಸರ್ಕಾರಿ ಮಾದರಿ ಪಾಠಶಾಲೆ ಮತಗಟ್ಟೆ ಸಂಖ್ಯೆ 241.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಗರಸಭೆ ಕಚೇರಿಯ ಹಳೆಯ ಕಟ್ಟಡದಲ್ಲಿರುವ ಮತಗಟ್ಟೆ ಸಂಖ್ಯೆ 98, ಮಂಗಳವಾರಪೇಟೆಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 69, ಹೊಂಗನೂರಿನ ಸರ್ಕಾರಿ ಮಾದರಿ ಶಾಲೆಯ ಮತಗಟ್ಟೆ ಸಂಖ್ಯೆ 176.
ಕನಕಪುರದಲ್ಲಿ ಡಿಟಿಡಿಸಿಯ ಕೊಠಡಿ ಸಂಖ್ಯೆ 1ರಲ್ಲಿರುವ ಮತಗಟ್ಟೆ ಸಂಖ್ಯೆ 78, ಟಿ.ಬೇಕುಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 112, ಮಾಗಡಿ ಕ್ಷೇತ್ರದಲ್ಲಿ ಬನ್ನಿಕುಪ್ಪೆಯ ಮತಗಟ್ಟೆ ಸಂಖ್ಯೆ 118, ಮಾಗಡಿಯ ಮುನ್ಸಿಪಲ್ ಕಚೇರಿಯ ಕೊಠಡಿ ಸಂಖ್ಯೆ 1ರಲ್ಲಿರುವ ಮತಗಟ್ಟೆ ಸಂಖ್ಯೆ 132.
ವಿನೂತನ ಪ್ರಯೋಗ
ರಾಮನಗರ ಜಿಲ್ಲೆಯಲ್ಲಿ 10 ಮಾದರಿ ಮತಗಟ್ಟೆ ತೆರೆದು, ಮತದಾರರನ್ನು ಆಕರ್ಷಿಸುವ ವಿನೂತನ ಪ್ರಯೋಗ ನಡೆದಿದೆ. ಇದಕ್ಕಾಗಿ ಸಿದ್ಧತೆ ಕೈಗೊಳ್ಳಲಾಗಿದೆ. ಈ ಮಾದರಿ ಮತಗಟ್ಟೆಗಳಲ್ಲಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು.
ಟಿ ಡಾ.ಡಿ.ಎಸ್.ವಿಶ್ವನಾಥ್