ರು. 1.5 ಕೋಟಿ ಅಕ್ರಮ ಹಣ ವಶ
ದೇವನಹಳ್ಳಿ: ಇಲ್ಲಿನ ನಂದಿಬೆಟ್ಟ ಸರ್ಕಲ್ ಬಳಿ ಇರುವ ಚೆಕ್ಪೋಸ್ಟ್ ಬಳಿ ಗುರುವಾರ ಸಂಜೆ ಕಾರೊಂದರಲ್ಲಿ ಸರಿಯಾದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರು.1.5 ಕೋಟಿಯನ್ನು ತಹಸೀಲ್ದಾರ್ ಕೇಶವಮೂರ್ತಿ ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಹೋಂಡಾ ಖಾಸಗಿ ಕಾರೊಂದನ್ನು ಅಧಿಕಾರಿಗಳು ತಪಾಸಣೆ ನಡೆಸಿದ ಸಂಧರ್ಭದಲ್ಲಿ ಸೂಟ್ಕೇಸ್ ಒಂದರಲ್ಲಿ ನೋಟಿನ ಬಂಡಲ್ಗಳಿದ್ದು, ಈ ಸಂಬಂಧ ಕಾರಿನಲ್ಲಿದ್ದ ಮೂವರನ್ನು ವಿಚಾರಣೆ ಮಾಡಿದಾಗ ಧರ್ಮಾವರಂ
ಯೂನಿಯನ್ ಸೆಂಟ್ರಲ್ ಬ್ಯಾಂಕ್ನಿಂದ ಬೆಂಗಳೂರಿನ ಸುಲ್ತಾನ್ ಪೇಟೆಯ ಸೆಂಟ್ರಲ್ ಯೂನಿಯನ್ ಬ್ಯಾಂಕ್ಗೆ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರಲ್ಲದೆ, ಸೃಷ್ಟಿ ಮಾಡಲಾಗಿದ್ದ ದಾಖಲೆ ಪತ್ರ ನೀಡಿದ್ದಾರೆ.
ಅನುಮಾನಗೊಂಡ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಸಹಾಯಕ ಚುನಾವಣಾಧಿಕಾರಿಗಳ ಬಳಿಗೆ ಕರೆತಂದರು. ಉಪ ಚುನಾವಣಾಧಿಕಾರಿ ಶಿವಸ್ವಾಮಿ ವಿಚಾರಣೆ ನಡೆಸಿ, ಮೇಲ್ನೋಟಕ್ಕೆ ಮಾರ್ಗಸೂಚಿ ಅನುಸರಿಸದೇ ಇದ್ದ ಕಾರಣ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರಲ್ಲದೆ ತಾಲೂಕು ಕಚೇರಿ ಖಜಾನೆಯಲ್ಲಿ ಹಣ ಭದ್ರ ಪಡಿಸಿದರು.
ಆದಾಯ ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸಿ ಅಂತಿಮವಾಗಿ ಹಣ ಸಾಗಣೆ ಮತ್ತು ದಾಖಲೆಗಳ ಬಗ್ಗೆ ಪರಿಶೀಲಿಸಿ ಕಾರಿನಲ್ಲಿದ್ದ ಧರ್ಮಾವರಂನ ಬಾಲಮಣಿಕಂಠನ್, ಡಿ.ಡಿ.ಶ್ರೀನಿವಾಸ್, ವಿ.ರವಿನಾಯಕ್ ಹಾಗೂ ಅವರೊಂದಿಗಿದ್ದ ಸೆಕ್ಯೂರಿಟಿ ಎಸ್.ಕೃಷ್ಣ ಸಾರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.