ಜೆಡಿಎಸ್ನಂತೆ ನಾವು ಜಾತಿ ಒಡೆದವರಲ್ಲ: ಮೊಯ್ಲಿ
ದೇವನಹಳ್ಳಿ: ಒಕ್ಕಲಿಗ ಜನಾಂಗವನ್ನು ಒಡೆಯಲು ಯತ್ನಿಸಿದವರು ದೇವೇಗೌಡರು. ಈಗ ತಮ್ಮ ಮಗನಿಗಾಗಿ ಒಕ್ಕಲಿಗರ ಮತ ಬೇಕಾಗಿದೆ ಎಂದು ಎಂ.ವೀರಪ್ಪ ್ಛ್ಚಯ್ಲಿ ತಿಳಿಸಿದರಲ್ಲದೆ ಯಾವುದೇ ಜನಾಂಗ ಒಗ್ಗಟ್ಟಾಗಿದ್ದರೆ ಮಾತ್ರ ಎಲ್ಲ ರಂಗಗಳಲ್ಲೂ ಬೆಳೆಯಲು ಸಾಧ್ಯ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪಮೊಯ್ಲಿ ಇಲ್ಲಿನ ಹೊಸಬಸಸ್ನಿಲ್ದಾಣದಲ್ಲಿ ಶನಿವಾರ ಸಂಜೆ ಚುನಾವಣಾ ಪ್ರಚಾರಸಭೆ ಉದ್ದೇಶಿಸಿ ಮಾತನಾಡಿ ಈ ತಾಲೂಕಿನ ಬಿಜೆಪಿ ಮುಖಂಡರಾಗಿದ್ದ ಪಾಪನಹಳ್ಳಿ ನಾರಾಯಣಗೌಡ ಹಾಗೂ ಅವರ ನೂರಾರು ಬೆಂಬಲಿಗರು ಕಾಂಗ್ರೆಸ್ಗೆ ಬಂದಿದ್ದು ಪಕ್ಷಕ್ಕೆ ಬಲ ಬಂದಿದೆ. ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಲಭಿಸಲಿವೆ. ಅದನ್ನು ಬಳಸಿಕೊಳ್ಳಲು ಸಿದ್ಧರಿರಬೇಕು ಎಂದು ತಿಳಿಸಿದರಲ್ಲದೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 90 ಮಂದಿ ಯುವಕರನ್ನು ರಾಜಕೀಯವಾಗಿ ಬೆಳೆಸಿದೆ. ಈಗ ಅನೇಕ ಮಂದಿ ಶಾಸಕರಾಗಿ ಸಚಿವರಾಗಿದ್ದಾರೆ ಎಂದರಲ್ಲದೆ ನಾವು ಇತರರನ್ನು ಬೆಳೆಸಿ ನಾವು ಬೆಳೆದಾಗಲೇ ನಮ್ಮ ಕೀರ್ತಿ ಹೆಚ್ಚಾಗುವುದು ಎಂದರು. ಇಲ್ಲಿನ ವಿಮಾನ ನಿಲ್ದಾಣವನ್ನು ಬಿಡದಿಯಲ್ಲಿ ನಿರ್ಮಿಸಲು ದೇವೇಗೌಡರು ಆಶಿಸಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದರಲ್ಲದೆ ದೇವನಹಳ್ಳಿ ತಾಲೂಕಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಎತ್ತಿನ ಹೊಳೆ ಯೋಜನೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು ಇನ್ನು ಎರಡು ವರ್ಷದೊಳಗಾಗಿ ಈ ಭಾಗದ ಎಲ್ಲ ಕೆರೆಗಳು ತುಂಬಲಿದೆ. ಬಹಳ ವರ್ಷಗಳ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪಾಪನಹಳ್ಳಿ ನಾರಾಯಣಗೌಡ ಮಾತನಾಡಿ ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದರೂ ನಮ್ಮನ್ನು ಕಾಲಿನ ಕಸದಂತೆ ಕಂಡರು. ನಮ್ಮನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡರು. ಉಸಿರು ಕಟ್ಟಿದ ವಾತಾವರಣ ಆದ್ದರಿಂದ ಕಳೆದ ಕೆಲವು ವರ್ಷಗಳಿಂದ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದೆ ತಟಸ್ಥನಾಗಿದ್ದೆ. ಅಂತಹದರಲ್ಲಿ ಮೊಯ್ಲಿರವರು ನಮ್ಮ ಮನೆಗೆ ಬಂದು ಆತ್ಮವಿಶ್ವಾಸ ತುಂಬಿದ್ದರಿಂದ ಕಾಂಗ್ರೆಸ್ಗೆ ಬಂದಿದ್ದೇನೆ. ಈ ಪಕ್ಷದಲ್ಲಿ ಬೆಳೆಯಲು ಅವಕಾಶಗಳು ಸಾಕಷ್ಟಿವೆ ಎಂದು ಮನವರಿಕೆಯಾಗಿದೆ ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ವೆಂಕಟಸ್ವಾಮಿ ಹಾಗೂ ಮುನಿನರಸಿಂಹಯ್ಯ ಮಾತನಾಡಿ ಮೊಯ್ಲಿಯವರು ಮುಖ್ಯಮಂತ್ರಿಗಳಾಗಿ ಕೇಂದ್ರ ಸಚಿವರಾಗಿ ಮಾಡಿದ ಸೇವೆಯನ್ನು ಅಭಿನಂದಿಸಿ ಅವರ ಸೇವೆ ನಮಗೆ ಇನ್ನೂ ಬೇಕಾಗಿರುವುದರಿಂದ ಅವರಿಗೆ ಮತ ನೀಡಬೇಕೆಂದು ಕೋರಿದರು.
ಹಿರಿಯರಾದ ಬಿ.ಚಂದ್ರಯ್ಯ, ಸಿ.ಜಗನ್ನಾಥ್, ವಿಜಯಪುರ ಬ್ಲಾಕ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಮುಖಂಡರಾದ ಎ.ಚಿನ್ನಪ್ಪ, ಎಂ.ಮಂಜುನಾಥ್, ಪುರಸಭಾಧ್ಯಕ್ಷೆ ಶಾರದಮ್ಮ, ಎನ್. ರಘು, ವಿ.ನಾರಾಯಣಸ್ವಾಮಿ, ಮಾಜಿ ಪುರಸಭಾಧ್ಯಕ್ಷ ಎಂ.ನಾರಾಯಣಸ್ವಾಮಿ, ಎಂ.ಮೂರ್ತಿ, ಭೂವನಹಳ್ಳಿ ಮುನಿರಾಜು ಉಪಸ್ಥಿತರಿದ್ದರು.