ಯಾಂತ್ರೀಕೃತ ಕಸಾಯಿಖಾನೆ ಸ್ಥಾಪಿಸಲು ಅವಕಾಶ ನೀಡುವುದಿಲ್ಲ
ಕನಕಪುರ: ಕನಕಪುರ ತಾಲೂಕು ಹಾರೋಹಳ್ಳಿಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಯಾಂತ್ರೀಕೃತ ಕಸಾಯಿಖಾನೆ ಸ್ಥಾಪಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗ್ರಾಪಂ ಸರ್ವಾನುಮತದಿಂದ ತೀರ್ಮಾನ ಕೈಗೊಂಡು ಹೈಕೋರ್ಟ್ ಹಸಿರುಪೀಠದ ಮುಂದೆ ಸಾರ್ವಜನಿಕ ಹಿತಾಸಕ್ತಿ ಹೋರಾಟ ನಡೆಸಿದೆ ಎಂದು ಕಸಾಯಿಖಾನೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಎಂ.ಮಲ್ಲಪ್ಪ ಹೇಳಿದ್ದಾರೆ.
ಅವರು ಇಲ್ಲಿನ ಶ್ರೀ ಅರುಣಾಚಲೇಶ್ವರ ದೇವಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಚುನಾವಣಾ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರು ಕಸಾಯಿಖಾನೆ ಸ್ಥಾಪನೆ ವಿರೋಧಿಸಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿರುವ ಕ್ರಮ ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕು, ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸುತ್ತಿದ್ದಾರೆ, ಎಂದಿಗೂ ಕಸಾಯಿಖಾನೆ ಪ್ರಾರಂಭವಾಗಲು ಬಿಡುವುದಿಲ್ಲ, ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಎಂ.ಮಲ್ಲಪ್ಪ ವಿನಂತಿಸಿದ್ದಾರೆ.
ಕಸಾಯಿಖಾನೆ ಸ್ಥಾಪನೆ ವಿರೋಧಿಸಿ ಹಾರೋಹಳ್ಳಿ ಗ್ರಾಪಂ ಪರವಾಗಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು, ಪ್ರತಿವಾದಿಗಳು ವಿಳಂಬದಿಂದಾಗಿ ಬಿಬಿಎಂಪಿ ಐದುಕೋಟಿ ಪರಿಹಾರ ಹಾಗೂ 8 ಎಕರೆ ಹೆಚ್ಚುವರಿ ಭೂಮಿ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಉದ್ಯಮಿಗೆ ಗ್ರಾಪಂ ಪರವಾನಗಿ ಇಲ್ಲದಿರುವುದು,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರಪೇಕ್ಷಣಾ ಪತ್ರ ಇಲ್ಲದಿರುವುದು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಪರಿಸರಕ್ಕೆ ಮಾರಕವಾಗಿರುವುದನ್ನು ಪರಿಗಣಿಸಿ ಹೈಕೋರ್ಟ್ ಮಖ್ಯನ್ಯಾಯಾಧೀಶರ ಪೀಠಕ್ಕೆ ವಿವಾದವನ್ನು ವರ್ಗಾಯಿಸಿತು. ಈ ವೇಳೆಯಲ್ಲಿ ದಾಖಲೆಗಳ ಅನುವಾದ ಹಾಗೂ ಸಲ್ಲಿಕೆಗಾಗಿ 90 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಸಮಯದ ದುರುಪಯೋಗ ಪಡೆದ ಕೆಲವು ಕಿಡಿಗೇಡಿಗಳು ತೀವ್ರ ಅಪಪ್ರಚಾರ ನಡೆಸಿ ಹೋರಾಟ ಸಮಿತಿಯ ಹೆಸರಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ, ಎಂದು ಮಲ್ಲಪ್ಪ ವಿಷಾದ ವ್ಯಕ್ತಪಡಿಸಿದರು.
ಇತ್ತೀಚೆಗೆ ತಾನೇ ಹುಟ್ಟಿಕೊಂಡಿರುವ ಸಂಘಟನೆಯ ಹೆಸರಿನಲ್ಲಿ ಕೆಲವರು ಕಸಾಯಿಖಾನೆ ವಿರುದ್ಧ ಹೋರಾಟಕ್ಕೆ ಚಂದಾ ವಸೂಲಿಗೆ ಮುಂದಾಗಿದ್ದಾರೆ. ಯಾರೂ ಇಂಥ ಖೊಟ್ಟಿ ಸಂಘಟನೆಗಳನ್ನು ಬೆಂಬಲಿಸಬಾರದು ಹಾಗೂ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿರುವ ತಮ್ಮ ಸಂಘಟನೆ ಯಾರಿಂದಲೂ ಇದುವರೆಗೆ ಚಿಕ್ಕಾಸೂ ವಸೂಲಿ ಮಾಡಿಲ್ಲ. ಸದಸ್ಯರೇ ಎಲ್ಲಾ ಖರ್ಚುವೆಚ್ಚಗಳನ್ನು ಭರಿಸುತ್ತಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ವೆಂಕಟರಾಜು,ತಾಪಂ ಸದಸ್ಯ ಪುರುಷೋತ್ತಮ್,ಮುರಳಿ, ಜಾಕೀರ್ ಪಾಷ,ಅಂಜನಪ್ಪ, ನರಸಿಂಹಯ್ಯ, ಸಿದ್ದಪ್ಪ, ಆನಂದ್, ರಾಮಯ್ಯ, ನಾಗರಾಜ್ ಪಾಲ್ಗೊಂಡಿದ್ದರು.