ಯುವ ಮತದಾರರ ಜಾಗೃತಿ ಅಭಿಯಾನ
ಕನಕಪುರ: ಅಖಿಲಭಾತರ ವಿದ್ಯಾರ್ಥಿ ಪರಿಷತ್ತು ಕನಕಪುರ ಶಾಖೆ ವತಿಯಿಂದ ಯುವ ಮತದಾರರ ಜಾಗೃತಿ ಅಭಿಯಾನ ಜಿಲ್ಲಾಸಂಚಾಲಕ ರಘುರಾಂ ನೇತೃತ್ವದಲ್ಲಿ ನಡೆಯಿತು.
ಪಟ್ಟಣದ ರೂರಲ್ ಕಾಲೇಜು, ಸರ್ಕಾರಿ ಕಾಲೇಜು, ನಿರ್ವಾಣಸ್ವಾಮಿ ಕಾಲೇಜು, ನರ್ಸಿಂಗ್ ಕಾಲೇಜು ಮೊದಲಾದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಟ್ಟಣದ ಬೀದಿಗಳಲ್ಲಿ ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಕಾಪಾಡಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಅಲಂಕೃತ ಹತ್ತಾರು ಜೋಡೆತ್ತಿನ ಬಂಡಿಗಳು ಪಾಲ್ಗೊಂಡು ವಿಶೇವಾಗಿ ಗಮನ ಸೆಳೆದವು. ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ರವರ 2020 ಮುನ್ನೋಟ ಸಾಕಾರಗೊಳ್ಳಬೇಕಾದರೆ ಅನುಭವಿ ಸಮರ್ಥ ಪ್ರಧಾನಿಯನ್ನು ಆರಿಸಬೇಕಾದ ಮಹತ್ತರ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ. ಭಾರತ ದೇಶಕ್ಕೇ ಕುಟ್ಟೆ ಹಿಡಿಸಿರುವ ಭ್ರಷ್ಟಾಚಾರವನ್ನು ಕಿತ್ತೊಗೆಯಲು ದಾರ್ಶನಿಕ ವ್ಯಕ್ತಿತ್ವದ ನಾಯಕರು ಅಗತ್ಯವಾಗಿದ್ದಾರೆ, ನೆರೆರಾಷ್ಟ್ರಗಳ ದರ್ಪ, ಆಕ್ರಮಣಗಳನ್ನು ತಡೆಗಟ್ಟಲು,ಉತ್ತಮ ವ್ಯಕ್ತಿಗಳನ್ನು ವಿವೇಚನೆಯಿಂದ ಜನರು ಆರಿಸಬೇಕು ಎಂದು ರಘುರಾಂ ಕರೆ ನೀಡಿದರು.
ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಇಂದು
ಮಾಗಡಿ: ಇತಿಹಾಸ ಪ್ರಸಿದ್ಧ ಮಾಂಡವ್ಯ ಮಹರ್ಷಿಗಳ ತಪೋಭೂಮಿಯಲ್ಲಿ ತಿರುಮಲೆ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಏ.13 ರಂದು ಭಾನುವಾರ ಬೆಳಿಗ್ಗೆ 11.30 ರಿಂದ 11.55 ರೊಳಗೆ ಅದ್ಧೂರಿಯಾಗಿ ಜರುಗಲಿದೆ. ಈ ವೇಳೆ ರಾಜ್ಯ ಮೂಲೆ ಮೂಲೆಗಳಿಂದ ರಂಗನ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥ ಎಳೆಯಲಿದ್ದಾರೆ.
ಸಾಮಾನ್ಯವಾಗಿ ಎಲ್ಲಡೆ ದೇವರ ಪ್ರತಿಮೆಗಳೆಲ್ಲ ಪೂರ್ವಾಭಿಮುಖವಾಗಿರುತ್ತದೆ. ಬಹುತೇಕ ಕಡೆ ಶ್ರೀರಂಗನಾಥಸ್ವಾಮಿ ಆದಿಶೇಷನ ಮೇಲೆ ವಿರಾಜಮಾನನಾಗಿ ಮಲಗಿರುವ ಭಂಗಿ ಕಾಣುತ್ತೇವೆ. ಆದರೆ ಸುಮಾರು 4.5 ಅಡಿ ಎತ್ತರದ ವಿಜಯನಗರ ಶೈಲಿಯ ಸುಂದರವಾದ ಶ್ರೀರಂಗನಾಥಸ್ವಾಮಿ ದೇವರ ಪ್ರತಿಮೆ ಮಾತ್ರ ಪಶ್ಚಿಮಾಭಿಮುಖವಾಗಿ ನಿಂತಿರುವುದು ವಿಶೇಷ. ಈ ದೇವರನ್ನು ಮಾಂಡವ್ಯರು ಆರಾದಿಸುತ್ತಿದ್ದರೆನ್ನಲಾದ ಸ್ವಯಂ ಭೂ ರೂಪದ ಸಾಲಿಗ್ರಾಮವಿದೆ. ಇದಕ್ಕೆ ಎಷ್ಟು ಕೊಡ ನೀರು ಅಭಿಷೇಕ ಮಾಡಿದರೂ ಅದು ಎಲ್ಲಿ ಸೇರುತ್ತದೆ ಎಂಬುದು ಮಾತ್ರ ನಿಗೂಢ. ಶ್ರೀ ಸ್ವಾಮಿಯನ್ನು ಬೆಳೆಯೋರಂಗ, ಮಕ್ಕಳ ರಂಗ, ಮೂಲರಂಗ ಎಂದು ಕರೆಯುವುದುಂಟು. ಪ್ರತಿ ವರ್ಷ ಚೈತ್ರ ಮಾಸದ ಉತ್ತರಾ ನಕ್ಷತ್ರದಲ್ಲಿ ರಂಗನ ಬ್ರಹ್ಮ ರಥೋತ್ಸವ ನಡೆಯುತ್ತದೆ. ದೇವರಿಗೆ ಕೋಟಿ ರು. ವೆಚ್ಚದ ವಜ್ರಖಚಿತ ಕಿರೀಟಧಾರಣೆ, ಉತ್ಸವಮೂರ್ತಿಗೂ ಬಂಗಾರದ ಕಿರೀಟ, ಮೂಲದೇವರಿಗೆ ಬೆಳ್ಳಿ ಕಿರೀಟ ವಜ್ರಾಂಗಿ ಸಮರ್ಪಣೆ ನಡೆದಿದೆ. ಪ್ರತಿ ಶನಿವಾರ, ಭಾನುವಾರ ರಂಗನಾಥಸ್ವಾಮಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಉಚಿತ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಸಹ ನಡೆಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ.