ಮಕ್ಕಳು, ಮೊಮ್ಮಕ್ಕಳಿಗೆ ಸ್ಥಾನ ನೀಡುವ ಜೆಡಿಎಸ್‌ನಲ್ಲಿ ನಿಷ್ಠಾವಂತರಿಗೆ ಸ್ಥಾನವಿಲ್ಲ
ಕನಕಪುರ: ಕುಟುಂಬ ರಾಜಕಾರಣ ನಡೆಸುತ್ತಾ ಮಕ್ಕಳು, ಮೊಮ್ಮಕ್ಕಳಿಗೆ ಸ್ಥಾನ ಮಾಡಿಕೊಡುತ್ತಿರುವ ಜೆಡಿಎಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಅವರು ಹಾರೋಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರ ಸಹೋದರ ಬಾಬುರಾವ್ ಸಿಂಧ್ಯಾ ನೇತೃತ್ವದಲ್ಲಿ ಮರಳವಾಡಿ, ಹಾರೋಹಳ್ಳಿ ಹೋಬಳಿಯ ನೂರಾರು ಜೆಡಿಎಸ್ ಕಾರ್ಯಕರ್ತರು ಸಚಿವ ಡಿ.ಕೆ.ಶಿವಕುಮಾರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಗೊಂಡರು.
ಸೇರ್ಪಡೆಗೊಂಡ ಪ್ರಮುಖ ಜೆಡಿಎಸ್ ಮುಖಂಡರುಗಳಲ್ಲಿ ಕೀರಣಗೆರೆ ಜಗದೀಶ್, ಗಬ್ಬಾಡಿ ರವಿ(ವಿಶಾಲಾಕ್ಷ),ಎಲ್‌ಐಸಿ ದೇವರಾಜ್, ವಿಜಯಕುಮಾರ್, ಗುತ್ತಿಗೆದಾರ ನಾಗೇಶ್, ಮಾಜಿ ಗ್ರಾಪಂ ಅಧ್ಯಕ್ಷ ಈಶ್ವರ್, ಸೋಮಸುಂದರ್, ವೆಂಕಟರಮಣಪ್ಪ, ರಮೇಶ್, ಮುನಿಯಪ್ಪ ಪ್ರಮುಖರು. ಇವರೆಲ್ಲರೂ ಸಿಂಧ್ಯಾರ ಬಲಗೈ ಬಂಟರಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಜೆಡಿಎಸ್ ಒಡೆದಾಳುವ ನೀತಿಯಿಂದಾಗಿ ಕನಕಪುರ ಕ್ಷೇತ್ರದ ಹಾರೋಹಳ್ಳಿ ಮರಳವಾಡಿ ಹೋಬಳಿಗಳು ರಾಮನಗರ ಕ್ಷೇತ್ರದ ಪಾಲಾಗಬೇಕಾಯಿತು. ಆ ಪಕ್ಷದ ಹಿರಿಯ ನಾಯಕರಾದ ಸಿಂಧ್ಯಾರೇ ಈಗ ಮೂಲೆಗುಂಪಾಗಿದ್ದಾರೆ, ಅವರ ಬೆಂಬಲಿಗರೆಲ್ಲರೂ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ದ್ವಿತೀಯ ಹಂತದ ನಾಯಕರನ್ನು ಬೆಳೆಸುವಲ್ಲಿ ಜೆಡಿಎಸ್ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಸಚಿವ ಡಿಕೆಶಿ, ರಾಮನಗರ ಜಿಲ್ಲೆಯಲ್ಲಿಯೇ ಜೆಡಿಎಸ್ ತಲೆ ಎತ್ತದಂತೆ ಮಾಡಲು ಕಾರ್ಯಕರ್ತರು ಪಣತೊಡಬೇಕುಎಂದು ಕರೆನೀಡಿದರು. ಕಾಂಗ್ರೆಸ್ ಮುಖಂಡರಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯದೇವ್, ಜಿಪಂ ಮಾಜಿ ಅಧ್ಯಕ್ಷ ಎಚ್.ಕೆ. ನಾಗರಾಜ್, ಜಿಪಂ ಸದಸ್ಯೆ ಗೀತಾ ಈಶ್ವರ್, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ, ವೆಂಕಟರಾಜು, ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ಬ್ಲಾಕ್ ಅಧ್ಯಕ್ಷ ಮೋಹನ ಹೊಳ್ಳ, ಸಬ್ದರ್ ಹುಸೇನ್, ಪಿಚ್ಚನಕೆರೆ ಜಗದೀಶ್, ಅಶೋಕ್ ಕುಮಾರ್ ಪಾಲ್ಗೊಂಡಿದ್ದರು.
ನಿಲ್ಲಿಸಲಾಗಿದ್ದ ಲಾರಿಯಲ್ಲಿ ಶವ ಪತ್ತೆ, ದೂರು
ದೇವನಹಳ್ಳಿ: ತಾಲೂಕು ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಕೊಯಿರ ಗ್ರಾಮದಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದರ ಮುಂಭಾಗದ ಕ್ಯಾಬಿನ್‌ನಲ್ಲಿ ಪುರಷನ ಶವ ಪತ್ತೆಯಾಗಿದ್ದು ಲಾರಿಯ ಮಾಲೀಕ ಬೆಟ್ಟಹಲಸೂರಿನ ಮಹೇಶ್ ಎಂಬುವರು ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಯಿರ ಗ್ರಾಮದ ಲಾರಿಯ ಚಾಲಕ ಶ್ರೀನಿವಾಸ ಏ.8 ರವರೆಗೂ ಕೆಲಸ ಮಾಡಿ ನಂತರ ಲಾರಿ ಕೆಲಸವಿಲ್ಲವಾದ್ದರಿಂದ ಮನೆಯಿಂದ ಸ್ವಲ್ಪ ದೂರದಲ್ಲಿ ನಾಲ್ಕು ದಿನಗಳ ಕಾಲ ನಿಲ್ಲಿಸಿದ್ದ. ಎಂದಿನಂತೆ ಏ.12 ರಂದು ಲಾರಿಯ ಬಳಿಗೆ ಹೋದಾಗ ಕೆಟ್ಟವಾಸನೆ ಬರುತ್ತಿದ್ದು ಲಾರಿಯ ಬಾಗಿಲು ತೆಗೆದಾಗ ಶವ ಇರುವುದು ಪತ್ತೆಯಾಗಿದ್ದು ಕೂಡಲೇ ಲಾರಿ ಮಾಲೀಕರಿಗೆ ವಿಷಯ ಮುಟ್ಟಿಸಿದನು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಸಾವಿಗೀಡಾಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ, ಎಸೈ ರಾಘವೇಂದ್ರ ಇಂಬ್ರಾಪುರ್ ಮುಂದಿನ ತನಿಖೆ ಕೈಗೊಂಡಿದ್ದಾರೆ.