ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಮತ ನೀಡಿ: ಮೊಯ್ಲಿ
ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸೋಮವಾರ ಚುನಾವಣಾ ಪ್ರಚಾರ ರೋಡ್ ಶೋ ಮತ್ತು ಸಭೆಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಒದಗಿಸುವ ಕನಸು ಕೈಗೂಡವ ಹೊಸ್ತಿಲಲ್ಲಿದೆ. ಅದರ ಭಾಗವಾಗಿಯೇ ಎತ್ತಿನಹೊಳೆ ಯೋಜನೆ ಕಾರ್ಯಗತವಾಗುತ್ತಿದೆ. ಜನರ ನೀರಿನ ಬವಣೆ ನೀಗಿಸಲು ಶಪಥ ಮಾಡಿರುವ ಕಾಂಗ್ರೆಸ್ ಗೆಲ್ಲಿಸಿ.
ಸದಾ ಕಾಲ ಜನಹಿತವನ್ನೇ ಬಯಸುವ ಪಕ್ಷವನ್ನು ಜನ ಕೈಬಿಡಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೇವಲ ಮಾತಿನಲ್ಲಿ ಅಭಿವೃದ್ಧಿ ಶಿಖರ ಕಟ್ಟುವ ಕುಮಾರಸ್ವಾಮಿ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯೇ ಅಲ್ಲ. ಬಿಜೆಪಿಯ ಬಚ್ಚೇಗೌಡರದು ಸೀಮಿತ ವ್ಯಾಪ್ತಿ ಎಂದರು. ಪಕ್ಷದ ಸ್ಥಳೀಯ ಮುಖಂಡರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದರು.