ಕುಮಾರಸ್ವಾಮಿ, ನಿಖಿಲ್‌ಗೌಡ ಬಿರುಸಿನ ಪ್ರಚಾರ
ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್. ಪ್ರಭಾಕರರೆಡ್ಡಿ ಪರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿವಿಧೆಡೆ ಪ್ರಚಾರ ಸಭೆ ನಡೆಸಿದರೆ, ಅವರ ಪುತ್ರ ನಿಖಿಲ್ ಗೌಡ ಬೈಕ್ ಯಾತ್ರೆಯಲ್ಲಿ ಪಾಲ್ಗೊಂಡು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಕುಮಾರಸ್ವಾಮಿ ಅವರು ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬಿಡದಿ, ಮಾಗಡಿ, ಕುದೂರು, ಕುಣಿಗಲ್ ಮತ್ತಿತರೆ ಕಡೆ ಪ್ರಚಾರ ಸಭೆಗಳನ್ನು ನಡೆಸಿ, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.
ಪ್ರಸಕ್ತ ಚುನಾವಣೆ ಜೆಡಿಎಸ್ ಪಾಲಿಗೆ ಅಗ್ನಿ ಪರೀಕ್ಷೆ ಎಂದ ಅವರು, ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿ ಪ್ರಭಾಕರರೆಡ್ಡಿ ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ರಚನೆಯಾಗಲಿರುವ ತೃತೀಯ ರಂಗದ ಸರ್ಕಾರದಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸುವುದಕ್ಕೆ ಅವಕಾಶ ಕಲ್ಪಿಸಿ ಎಂದರು. ಶಾಸಕ ಎಚ್.ಸಿ. ಬಾಲಕೃಷ್ಣ ಇದ್ದರು.
ಬೈಕ್ ಯಾತ್ರೆಯಲ್ಲಿ ನಿಖಿಲ್: ರಾಮನಗರದ ಅರ್ಚಕರಹಳ್ಳಿಯಿಂದ ಹೊರಟ ಜೆಡಿಎಸ್ ಕಾರ್ಯಕರ್ತರ ಬೈಕ್ ಯಾತ್ರೆಗೆ ಪಕ್ಷದ ತಾರಾ ಪ್ರಚಾರಕರೂ ಆಗಿರುವ ಯುವ ಮುಖಂಡ ನಿಖಿಲ್ ಗೌಡ ಚಾಲನೆ ನೀಡಿ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಜೆಡಿಎಸ್ ಗೆಲ್ಲಿಸುವಂತೆ ಮನವಿ ಮಾಡಿದರು. ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮಾಡಿರುವ ಜನಾನುರಾಗಿ ಕೆಲಸಗಳನ್ನು ಪ್ರಸಕ್ತ ಚುನಾವಣೆಯಲ್ಲಿ ಓರೆಗೆ ಹಚ್ಚಲಾಗುತ್ತಿದೆ. ಸದೃಢ ಕಾರ್ಯಕರ್ತರ ಪಡೆ ಹೊಂದಿರುವ ನಮ್ಮ ಪಕ್ಷಕ್ಕೆ ನೂರಕ್ಕೆ ನೂರರಷ್ಟು ಗೆಲವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಪಾಳಕ್ಕೆ ಹೊಡೆದಿಲ್ಲವೇ?
ಬಿಜೆಪಿಯ ಮಾಜಿ ಸಚಿವ ಉಮೇಶ್‌ಕತ್ತಿ ಕಬ್ಬು ಸರಬರಾಜುದಾರ ರೈತನಿಗೆ ಕಪಾಳಮೋಕ್ಷ ಮಾಡಿ ತಾನೊಬ್ಬ ರೌಡಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಜೆಡಿಎಸ್‌ನಿಂದ ಶಾಸಕರಾದ ಅವರು ನಮ್ಮ ಬೆನ್ನಿಗೆ ಚೂರಿ ಇರಿದು ಹೋಗಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು. ದೇವೇಗೌಡ, ತಮ್ಮನ್ನು ಬೆಂಗಳೂರಿನ ರೌಡಿಗಳೆಂದು ಕರೆಯುವ ಮೂಲಕ ಅವರ ವ್ಯಕ್ತಿತ್ವ ತೋರಿದ್ದಾರೆ.