ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೂವರ ಬಂಧನ

Srinivasa Murthy VN
Updated On : 15 Apr 2014, 1:44 am

ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಆಯುಧಗಳಿಂದ ಹೊಡೆದು ನಗದು ದೋಚುತ್ತಿದ್ದ ಮೂವರು ದರೋಡೆಕೋರರ ತಂಡವನ್ನು ದಾಬಸ್ ಪೇಟೆ ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತರನ್ನು ನೆಲಮಂಗಲ ಪಟ್ಟಣದ ವೀವರ್ಸ್ ಕಾಲೋನಿಯ ಭರತ್ (21), ಶಿವರಾಜ್ (22), ನೂತನ್ ಕುಮಾರ್(23) ಎಂದು ಗುರುತಿಸಲಾಗಿದೆ.
 ಅವರಿಂದ ದರೋಡೆಗೆ ಬಳಸುತ್ತಿದ್ದ 2 ಚಾಕು, 1 ಲಾಂಗ್, 1 ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ 4ರ ಕೆಂಗಲ್ ಕೆಂಪೋಹಳ್ಳಿ ಬಳಿ ರಾತ್ರಿ ವೇಳೆ ಲಾರಿ ಚಾಲಕನಿಗೆ  ಆರೋಪಿಗಳು ಕಬ್ಬಿಣದ ಸಲಾಕೆಯಿಂದ ಹೊಡೆದು 13 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಚಾಲಕ ದಾಬಸ್ ಪೇಟೆ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಉಚಿತ ಭಕ್ತಿ ಸಂಗೀತ ತರಬೇತಿ ಶಿಬಿರ
ಬೆಂಗಳೂರು: ಹರಿದಾಸಾಮೃತಧಾರೆ ಭಕ್ತಿ ಸಂಗೀತ ಉಚಿತ ತರಬೇತಿ ಶಿಬಿರವನ್ನು ಏಪ್ರಿಲ್ 18ರಿಂದ ಮೇ 4 ರವರೆಗೆ ಆಯೋಜಿಸಿದೆ. ಶಿಬಿರದಲ್ಲಿ ಪುರಂದರದಾಸರ, ಕನಕದಾಸರ ಮುಂತಾದ ದಾಸ ಸಾಹಿತ್ಯದ ಪ್ರಸಿದ್ಧ ಹಾಡುಗಳನ್ನು ಗಾಯಕ ಮತ್ತು ಸಂಗೀತ ನಿರ್ದೆಕರಾದ ಎಂ.ಆರ್. ಕೃಷ್ಣ  ಸ್ವತಃ ಗಾಯನ ಹಾಗೂ ರಾಗ ಸಂಯೋಜನೆ ಮಾಡಿರುವ ಹಾಡುಗಳಿಗೆ ಹಾಡುವ ತರಬೇತಿ ನೀಡಲಾಗುತ್ತದೆ. 10 ವರ್ಷ ಮೇಲ್ಪಟ್ಟವರು ತರಬೇತಿಯಲ್ಲಿ ಭಾಗವಹಿಸಬಹುದು. ಮಾಹಿತಿಗಾಗಿ: ಎಂ.ಆರ್. ಕೃಷ್ಣ, ನಂ. 625, 6ನೇ ಬಿ ಮುಖ್ಯರಸ್ತೆ, 3ನೇ ಫೇಸ್, ಜೆ.ಪಿ. ನಗರ. ಮೊ. 96202 68450.

ಮಕ್ಕಳ ಬೇಸಿಗೆ ಶಿಬಿರ 'ಚುಕ್ಕಿ ಚಂದ್ರಮ-2014'
ಬೆಂಗಳೂರು: ಶಾರದ ಸಾಂಸ್ಕೃತಿಕ ಕಲಾ ಸಂಘ ಸಂಸ್ಥೆ ವತಿಯಿಂದ 'ಚುಕ್ಕಿ ಚಂದ್ರಮ-2014' ಮಕ್ಕಳ ಬೇಸಿಗೆ ಶಿಬಿರ ಏಪ್ರಿಲ್ 18 ರಿಂದ ಮೇ 24ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ 6ರಿಂದ 14 ವರ್ಷದ ಮಕ್ಕಳಿಗಾಗಿ ಚಿತ್ರ, ಕಲೆ, ಮೇಕಪ್, ಕ್ಲೇ ಮಾಡ್ಲಿಲಿಂಗ್, ಹಾಡು, ಕುಣಿತ, ಕನ್ನಡ ಕಲಿಕೆ, ವ್ಯಕ್ತಿತ್ವ ವಿಕಸನ, ಯೋಗ, ನಾಟಕ, ಜಾನಪದ ಗೀತೆ ಮುಂತಾದವುಗಳನ್ನು ತಿಳಿಸಲಾಗುತ್ತದೆ.

ಮತದಾನ ಜಾಗೃತಿ  ಇಂದು
ರಾಮನಗರ: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ರೋಟರಿ ಸಂಸ್ಥೆಯ ಆಶ್ರಯದಲ್ಲಿ ಏ.15ರ ಮಧ್ಯಾಹ್ನ 12ಕ್ಕೆ ನಗರದ ಎಂ.ಎಚ್. ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ್ಲ ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಂ.ವಿ.ವೆಂಕಟೇಶ್, ರೋಟರಿ ಸಂಸ್ಥೆ ಜಿಲ್ಲಾಧ್ಯಕ್ಷ ಆರ್.ಜೆ.ಚಂದ್ರಶೇಖರ್, ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಚಂದ್ರಶೇಖರ್ ಭಾಗವಹಿಸುವರು.
ರೇಷ್ಮೆ  ಗೂಡಿನ ಮಾರುಕಟ್ಟೆಯಲ್ಲಿ: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ರೇಷ್ಮೆ ಇಲಾಖೆಯ ಆಶ್ರಯದಲ್ಲಿ ಏ.15 ಬೆಳಗ್ಗೆ 9.30ಕ್ಕೆ ನಗರದ ರೇಷ್ಮೆ  ಗೂಡಿನ ಮಾರುಕಟ್ಟೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ  ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಂ.ವಿ. ವೆಂಕಟೇಶ್, ರೇಷ್ಮೆ ಗೂಡು ಮಾರುಕಟ್ಟೆ ಉಪ ನಿರ್ದೇಶಕ ಲಕ್ಮಿಕಾಂತ ರೆಡ್ಡಿ ಭಾಗವಹಿಸುವರು.

ಜಮೀರ್ ಅಹ್ಮದ್ ರೋಡ್ ಶೋ ಇಂದು
ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮತಯಾಚನೆ ಮತ್ತು ಚುನಾವಣಾ ಪ್ರಚಾರಕ್ಕಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಏ.15ರ ಮಂಗಳವಾರ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ವಿವಿಧೆಡೆ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುವ ಅವರು ಪಕ್ಷದ ಅಭ್ಯರ್ಥಿಪರ ಮತಯಾಚಿಸಲಿದ್ದಾರೆ. ಪಕ್ಷದ ಜಿಲ್ಲಾ ಮತ್ತು ತಾಲೂಕು, ನಗರಸಭಾ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ.

ಅಂಬೇಡ್ಕರ್ ಜಯಂತಿ
ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಾಂಶುಪಾಲ ಎಚ್.ಎಸ್.ರಾಜಶೇಖರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಅಂಬೇಡ್ಕರ್ ಕೊಟ್ಟ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಇಂದಿನ ಜನ ತಮ್ಮ ಚಿಂತನೆಗಳನ್ನು ರೂಡಿಸಿಕೊಳ್ಳಬೇಕು. ಜನ ಕಡ್ಡಾಯ ಮತದಾನ ಕುರಿತು ಅರಿವು ಮೂಡಿಸುವುದು, 18 ವರ್ಷ ಮೇಲ್ಪಟ್ಟ ಯುವಜನತೆ ಮತದಾನದ ಹಕ್ಕನ್ನುಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. ಅರ್ಹ ಅಭ್ಯರ್ಥಿಗಳನ್ನು ಚುನಾಯಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು. ಉಪನ್ಯಾಸಕರಾದ ವೃಂದಮ್ಮ, ರಾಜಶ್ರೀ, ಮೂರ್ತಿ, ಬಸವರಾಜು, ರತ್ನಮ್ಮ ಮತ್ತಿತರರಿದ್ದರು.

ಕಾಂಗ್ರೆಸ್‌ಗೆ ಮತ ನೀಡಲು ಮನವಿ
ನೆಲಮಂಗಲ:  ಬಡವರ ದೀನದಲಿತರ ಆಶಾಕಿರಣವಾಗಿ ಯೋಜನೆ ರೂಪಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಪುರಸಭೆಯ ಮಾಜಿ ಸದಸ್ಯ ಸುಬ್ರಹ್ಮಣ್ಯ  ತಿಳಿಸಿದರು. ಅವರು ಪಟ್ಟಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಪರ ಮನೆ ಮನೆಗೆ ತೆರಳಿ ಮತ ಯಾಚಿಸಿ ಮಾತನಾಡುತ್ತಾ ಸಾಮಾಜಿಕ ನ್ಯಾಯ ನೀಡಲು ಕಾಂಗ್ರೆಸ್‌ನಿಂದ ಸಾಧ್ಯ ಯುವಕರಿಗೆ ಹೆಚ್ಚಿನ ಆದ್ಯತೆ ಒದಗಿಸುವಲ್ಲಿ ಕಾಂಗ್ರೆಸ್ ಬದ್ಧವಾಗಿದೆ. ಕಾಂಗ್ರೆಸ್ ಗೆಲವಿಗೆ ಯುವಕರು ಶ್ರಮಿಸಬೇಕು ಎಂದರು.  ಮುಖಂಡರಾದ ಸುರೇಶ್, ರಂಗಸ್ವಾಮಯ್ಯ, ಅಂದಾನಪ್ಪ, ರಾಜು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಇದ್ದರು.

ಮಲ್ಲಿಕಾರ್ಜುನ್ ಕಾಂಗ್ರೆಸ್ ಸೇರ್ಪಡೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎನ್.ಮಲ್ಲಿಕಾರ್ಜುನ್ (ಮಲ್ಲು) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇಲ್ಲಿನ ಪಕ್ಷದ ಕಚೇರಿಯಲ್ಲಿ ಅವರು ಸೋಮವಾರ ಯುವ ಮುಖಂಡ ಸುನೀಲ್ ಕುಮಾರ್ ಮತ್ತು ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಯುವ ಮುಖಂಡ ಸುನಿಲ್‌ಕುಮಾರ್, ಶಾಸಕ ಟಿ.ವೆಂಕಟರಮಣಯ್ಯ,ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments