ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಹಿರಂಗ ಹೋರಾಟಕ್ಕೆ ತೆರೆ

Srinivasa Murthy VN
Updated On : 16 Apr 2014, 2:02 am

-ಮತ್ತೀಕೆರೆ ಜಯರಾಮ್
ರಾಮನಗರ: ಲೋಕಸಭೆ ಮಹಾ ಸಮರದ ಬಹಿರಂಗ ಹೋರಾಟಕ್ಕೆ ತೆರೆ ಬಿದ್ದಾದ ಬೆನ್ನಲ್ಲೇ ಒಳಗೆಲಸದ ಕಸರತ್ತು ಶುರುವಾಗಿದೆ. ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತಬೇಟೆಯ ಭರಾಟೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಕಡೆಯ 24 ತಾಸಿನದ್ದೇ ಚುನಾವಣೆಯ ನಿಜವಾದ ಗೈರತ್ತು.
ಜಿದ್ದಾಜಿದ್ದಿನ ಅಖಾಡವಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿಜಯಲಕ್ಷ್ಮಿ ಒಲಿಸಿಕೊಳ್ಳಲು ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಒಬ್ಬರನ್ನೊಬ್ಬರು ಮೀರಿಸುವಂತೆ ಪೈಪೋಟಿಯನ್ನೇ ನಡೆಸಿವೆ.
ಮಾಮೂಲು ಚಟುವಟಿಕೆ: ಒಂದೆಡೆ ಚುನಾವಣಾ ಆಯೋಗವು ಮತದಾನದ ಅಂತ್ಯಕ್ಕೆ 48 ತಾಸು ಮುನ್ನ ಬಹಿರಂಗ ಪ್ರಚಾರ ಅಂತ್ಯಗೊಳಿಸಿ, ಒಣ ದಿನವನ್ನೂ ಘೋಷಿಸಿದೆ. ಮದ್ಯ ಮಾರಾಟ, ಸಾಗಣೆ, ಹಂಚಿಕೆ, ನಗದು ಸಹಿತ ಬಳುವಳಿಗಳ ಹಂಚಿಕೆ ಮೇಲೆ ತೀವ್ರ ನಿಗಾ ವಹಿಸಿದೆ. ಚುನಾವಣಾ ಆಯೋಗ ಚಾಪೆ ಕೆಳಗೆ ನುಗ್ಗಿದರೆ, ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ. ಆಯೋಗದ ಹದ್ದಿನ ಕಣ್ಣು ತಪ್ಪಿಸಿ ತಮ್ಮೆಲ್ಲಾ ಚುನಾವಣಾ ಮಾಮೂಲು ಚಟುವಟಿಕೆಗಳನ್ನು ನಿರಾಳವಾಗಿಯೇ ನಡೆಸುತ್ತಿದ್ದಾರೆ.
ಭರಾಟೆ ಬಲು ಜೋರು: ಹಿಂದೆಲ್ಲಾ ಲೋಕಸಭೆ ಚುನಾವಣೆಗಳಲ್ಲಿ ಕಾರ್ಯಕರ್ತರ ಖರ್ಚಿಗೆ ಒಂದಿಷ್ಟು ಹಣ,  ಪಾನಪ್ರಿಯ ಮತದಾರ ಪ್ರಭುಗಳನ್ನು ಸಂತುಷ್ಟಿಗೊಳಿಸಲು ಅಷ್ಟಿಷ್ಟು ಮದ್ಯದ ಸರಬರಾಜು ಆಗುತ್ತಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಭರಾಟೆ ಬಲು ಜೋರಾಗಿಯೇ ಸಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೇ ಭಾಗಶಃ ಮತದಾರರಿಗೆ ತಲಾವಾರು ರು.500 ಆಸುಪಾಸಿನ ಧಾರಣೆಯಿತ್ತು. ಲೋಕಸಭೆ ಉಪ ಚುನಾವಣೆಯಲ್ಲಿ ರು.200ವರೆಗೆ ಹಂಚಿಕೆಯೂ ನಡೆದಿತ್ತು. ಈಗ ಅದಕ್ಕಿಂತ ಕೊಂಚ ಹೆಚ್ಚೇ ಹೊರತು ಕಮ್ಮಿಯಿಲ್ಲದಂತೆ ಬಟಾವಡೆ ನಡೆಯುವ ಸಾಧ್ಯತೆ ಇದೆ.

ಸಿಕ್ಕಿದ್ದು ಕವಡೆ ಕಾಸು
ಬೆಂಗಳೂರು ನಗರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಚಾಚಿಕೊಂಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿದಷ್ಟು ಮೊತ್ತ ಮೀರದಂತೆ ಚುನಾವಣೆ ಮುಗಿಸಿ, ಪೈಪೋಟಿ ಒಡ್ಡುವ ಮಾತು ಅಸಾಧ್ಯವೇ ಸರಿ.
ಅಷ್ಟರ ಮಟ್ಟಿಗೆ ಈ ಕ್ಷೇತ್ರದ ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ದುಡ್ಡೇ ದೊಡ್ಡಪ್ಪ. ಅದಿಲ್ಲದಿದ್ದರೆ ಓಟು ಇಲ್ಲಪ್ಪ ಎಂದು ರಾಜಾರೋಷವಾಗಿಯೇ ಹೇಳುವ ಮಂದಿಯೇ ಇಲ್ಲಿ ಹೆಚ್ಚಿದ್ದಾರೆ. ಅಂತಹವರನ್ನು ಸಂತೃಪ್ತಿಗೊಳಿಸುವುದೇ ಅಭ್ಯರ್ಥಿಗಳಿಗೆ ದೊಡ್ಡ ಸವಾಲಿನ ಪ್ರಶ್ನೆ. ಕೋಟಿಗಟ್ಟಲೆ ಹಣದ ಹೊಳೆಯೇ ಹರಿದಿದ್ದರೂ ಇಲ್ಲಿವರೆಗೆ ಇಡೀ ಕ್ಷೇತ್ರಾದ್ಯಂತ ದಾಖಲೆ ರಹಿತ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿರುವ ಮೊತ್ತ ರು.1 ಕೋಟಿಯನ್ನೂ ದಾಟಿಲ್ಲ. ಮತದಾನಕ್ಕೆ 2 ದಿನ ಮುಂಚೆಯಿಂದ ಕಟ್ಟೆಚ್ಚರ ವಹಿಸಿರುವುದು, ಕೊಳ್ಳೆ ಹೋದ್ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗುತ್ತಿದೆ.

ನಿಶಾಬಾಜಿಯಲ್ಲಿ ಪ್ರಭುಗಳು
ದೇಶಕ್ಕಾಗಿ ಚಿಂತಿಸುವ, ಪಕ್ಷ ಇಲ್ಲವೇ ಅಭ್ಯರ್ಥಿಯ ಕಟ್ಟಾ ಅಭಿಮಾನಿಗಳು, ಕೊಡುವ ಕಾಸು ನೋಡಿ ಮತ ಹಾಕುವವರು, ಸಿಕ್ಕಿದ್ದೇ ಛಾನ್ಸ್ ಎಂದು ಕಂಠಪೂರ್ತಿ ಕುಡಿದು ನಿಶಾಬಾಜಿಯಲ್ಲಿ ತೇಲುವವರು ಹೀಗೆ ತರಾವರಿ ಮತದಾರರ ವರ್ಗ ಎಲ್ಲ ಕ್ಷೇತ್ರಗಳಲ್ಲೂ ಇದ್ದೇ ಇದೆ. ಪ್ರಮುಖ ಅಭ್ಯರ್ಥಿಗಳು ತಾವು ಒಡ್ಡುವ ಆಮಿಷಕ್ಕೆ ಶೇಕಡ 80ರಷ್ಟು ಮತದಾರರನ್ನು ಟಾರ್ಗೆಟ್ ಮಾಡಿಕೊಂಡಿರುತ್ತಾರೆ. ಬಾಡೂಟದ ಗಮ್ಮತ್ತು, ಮದ್ಯ ಸರಬರಾಜು ಮೂಲಕ ಮತಬೇಟೆಯ ಕಸರತ್ತು ಸಾಗಿದೆ. ಮದ್ಯ ಸೇವಿಸಿ ಕೆಲವರು ನಿಶಾಬಾಜಿಯಲ್ಲಿ ತೇಲುತ್ತಿರುತ್ತಾರೆ.  
ಬಳುವಳಿ ಇಲ್ಲ, ನಗದೇ ಎಲ್ಲ
ಪ್ರಸಕ್ತ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸರಿ ಸುಮಾರು 22 ಲಕ್ಷದಷ್ಟು ಮತದಾರರಿದ್ದಾರೆ. ಇಂತಹ ಕಡೆ ವಿಧಾನಸಭೆ ಚುನಾವಣೆಯಂತೆ ವಸ್ತ್ರ, ಅಕ್ಕಿ, ಸಾಮಗ್ರಿ, ಕೋಳಿ ಇಲ್ಲವೇ ಮಾಂಸ ಹಂಚಿಕೆ ಕಷ್ಟಸಾಧ್ಯ. ಹೀಗಾಗಿ ಬಳುವಳಿಗಳ ಬದಲು ನಗದು ಹಂಚಿಕೆ ನಡೆಯುತ್ತಿದೆ. ಪ್ರಮುಖ ಅಭ್ಯರ್ಥಿಗಳು ತಲಾವಾರು ಲೆಕ್ಕ ಹಾಕಿ ವಿಧಾನಸಭಾ ಕ್ಷೇತ್ರ ಮಟ್ಟಕ್ಕೆ ಈಗಾಗಲೇ ಸಂಪನ್ಮೂಲ ಮುಟ್ಟಿಸಿದ್ದೂ ಆಗಿದೆ. ಅದೀಗ ಬೂತ್ ಮಟ್ಟದ ಕಾರ್ಯಕರ್ತರಿಗೆ ರವಾನಿಸಲ್ಪಟ್ಟು, ಮತದಾನಕ್ಕೆ ಮುನ್ನಾ ರಾತ್ರಿಯೇ ಮನೆ ಮನೆಗೆ ಗರಿ ಗರಿ ನೋಟುಗಳು ತಲುಪಲಿವೆ.
ಹೆಚ್ಚಿದೆ ಒಳೇಟಿನ ಚಿಂತೆ
ಮ್ಯಾಚ್ ಫಿಕ್ಸಿಂಗ್ ಕ್ರಿಕೆಟ್ ಪಂದ್ಯಕ್ಕೆ ಮಾತ್ರ ಸೀಮಿತವಲ್ಲ. ರಾಜಕಾರಣದಲ್ಲೂ ಅದು ಬಹಳ ಆಳವಾಗಿ ಬೇರು ಬಿಟ್ಟಿದೆ. ಮ್ಯಾಚ್ ಫಿಕ್ಸಿಂಗ್ ರಾಜಕಾರಣಿಗಳಿಂದ ಒಳೇಟಿನ ದೊಡ್ಡ ಚಿಂತೆ ಎಲ್ಲ ಪಕ್ಷ ಮತ್ತು ಅಭ್ಯರ್ಥಿಗಳನ್ನೂ ಸರ್ವೇ ಸಾಮಾನ್ಯವಾಗಿ ಕಾಡುತ್ತಿರುತ್ತದೆ.  ತಾವಿರುವ ಪಕ್ಷದಲ್ಲಿ ಸಣ್ಣಪುಟ್ಟ ಕಾರಣಕ್ಕೆ ಮೂಲೆ ಸೇರಿದವರು, ಅಸಮಾಧಾನಿತರು, ಹಣದಾಸೆಗೆ ಬಿದ್ದು ಅಡ್ಡಮತದಾನ ಮಾಡಿಸುವವರ ಆಟ ಇನ್ನಷ್ಟೇ ಚುರುಕಾಗಲಿದೆ. ಇಂತಹವರಿಗೆ ಅನ್ಯಗಳಿಂದ ಡಿಮ್ಯಾಂಡ್ ಹೆಚ್ಚಾಗಿದೆ. ಈ ಹಂತದಲ್ಲೂ ಜಿಗಿದಾಟಕ್ಕೆ ಕೊನೆ ಇಲ್ಲದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement