ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮನೆ ಮಗನಾದ ನನ್ನ ಕೈ ಬಲಪಡಿಸಿ

Srinivasa Murthy VN
Updated On : 16 Apr 2014, 2:04 am

ರಾಮನಗರ: ಎಲ್ಲಿಂದಲೋ ಬಂದ ಎಚ್.ಡಿ.ದೇವೇಗೌಡರ ಕುಟುಂಬವನ್ನು ಬೆಂಬಲಿಸಿ ಸಾಕಷ್ಟು ಅಧಿಕಾರ ನೀಡಿದ್ದೀರಿ. ರಾಮನಗರ ಜಿಲ್ಲೆಯ ಮನೆ ಮಗನಾದ ನನ್ನ ಕೈ ಬಲಪಡಿಸುವುದಕ್ಕಾಗಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿಯಲ್ಲಿ ಬಹಿರಂಗ ಸಭೆ ಮತ್ತು ವಿವಿಧೆಡೆ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮತ್ತು ಸಹೋದರ, ಸಂಸದ ಡಿ.ಕೆ.ಸುರೇಶ್ ಗುರಿ ಎಂದು ತಿಳಿಸಿದರು.
ಸಾಕ್ಷಿಗುಡ್ಡೆಗಳು ಏನಿಲ್ಲ: ರಾಮನಗರದಿಂದಲೇ ಎರಡು ಬಾರಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಸಹಿತ ನಾನಾ ಅಧಿಕಾರ ಉಂಡ ದೇವೇಗೌಡರ ಕುಟುಂಬವು ಇಲ್ಲಿ ಬಿಟ್ಟು ಹೋಗಿರುವ ಅಭಿವೃದ್ಧಿಯ ಸಾಕ್ಷಿಗುಡ್ಡೆಗಳಾದರೂ ಏನು ಎನ್ನುವುದನ್ನು ಜನತೆ ಮನಗಾಣಬೇಕು ಎಂದು ಅವರು ಹೇಳಿದರು.
ಈ ಜಿಲ್ಲೆಯೂ ಸೇರಿದಂತೆ ಸಮಗ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಕಾಡುತ್ತಿರುವ ಕುಡಿಯುವ ನೀರಿನ ಬವಣೆ, ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಮ್ಮಿಂದಾಗುತ್ತಿದೆ ಎಂದು ಅವರು ತಿಳಿಸಿದರು.
ಪಲಾಯನ ವಾದಿಯಲ್ಲ: ಈ ಜನರ ಋಣ ತೀರಿಸುವ ಬದಲು ಅಧಿಕಾರ ಹುಡಿಕಿಕೊಂಡು ಹೊರಗೆಲ್ಲೋ ಹೋಗುವ ಪಲಾಯನ ವಾದಿಗಳು ನಾವಲ್ಲ. ನಮಗೆ ಇದೇ ಜನ್ಮಭೂಮಿ ಮತ್ತು ಪುಣ್ಯಭೂಮಿ. ಇಲ್ಲೇ ಇರುತ್ತೇವೆ, ಇಲ್ಲೇ ಮಣ್ಣಾಗುತ್ತೇವೆ ಎಂದು ಶಿವಕುಮಾರ್ ಪರೋಕ್ಷವಾಗಿ ಕುಮಾರಸ್ವಮಿ ವಿರುದ್ಧ ಹರಿಹಾಯ್ದರು.ಜಿ.ಪಂ.ಗೆ ನಿಂತು ಸೋತವ ಒಂದು ಪಕ್ಷದ ಅಭ್ಯರ್ಥಿಯಾದರೆ, ಬಿಬಿಎಂಪಿಗೆ ನಿಂತು ಸೋತವ ಮತ್ತೊಬ್ಬ ಹುರಿಯಾಳು. ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ತಮಗೆ ಮಾತನಾಡಲು ಸಿಗುವುದು ಎರಡೇ ನಿಮಿಷದ ಅವಕಾಶ ಎಂದು ಸ್ವತ- ಕುಮಾರಸ್ವಾಮಿಯೇ ಸಂಸದ ಹುದ್ದೆ ಬಿಟ್ಟು ಹೋಗಿದ್ದರು. ಈಗ ಅವರಿಗೆ ಮತ ಕೇಳುವ ನೈತಿಕ ಹಕ್ಕು ಎಲ್ಲಿದೆ ಎಂದು ಶಿವಕುಮಾರ್ ಪ್ರಶ್ನಿಸಿದರು. ಸಾಕಷ್ಟು ಹಣವಂತ ಎನ್ನುವ ಕಾರಣಕ್ಕಾಗಿಯೇ ಪ್ರಭಾಕರರೆಡ್ಡಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಇಲ್ಲಿನ ಮತದಾರರು ಆ ಪಕ್ಷದಿಂದ ಹಣ ಪಡೆದು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ರಸ್ತೆ ಅಭಿವೃದ್ಧಿಗೆ ಕ್ರಮ: ಕೇಂದ್ರದ ಯುಪಿಎ ಸರ್ಕಾರವು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ರು.39 ಸಾವಿರ ಕೋಟಿ ಮಂಜೂರು ಮಾಡಿದೆ. ನರೇಗಾ ಮತ್ತು ಆಹಾರ ಭದ್ರತಾ ಕಾಯ್ದೆ ಜಾರಿ ಮೂಲಕ ಬಡ ಜನರ ಬದುಕಿಗೆ ಆಸರೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement