ರಾಮನಗರವೇ ನನ್ನ ಕರ್ಮಭೂಮಿ
ರಾಮನಗರ: ರಾಜಕೀಯವಾಗಿ ಜನ್ಮ ನೀಡಿರುವ ರಾಮನಗರವೇ ನನ್ನ ಕರ್ಮಭೂಮಿ. ಇಲ್ಲಿನ ಜನರ ಆಶೀರ್ವಾದ ಇರುವತನಕ ನೂರು ಮಂದಿ ಡಿ.ಕೆ.ಶಿವಕುಮಾರರ ಹುಟ್ಟಿ ಬಂದರೂ ನನ್ನನ್ನು ಈ ಕ್ಷೇತ್ರದಿಂದ ಆಚೆಗೆಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
ನಗರದ ವಿವಿಧೆಡೆ ಮಂಗಳವಾರ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ ಆರ್. ಪ್ರಭಾಕರರೆಡ್ಡಿ ಪರ ಮತಯಾಚಿಸಿ ಮಾತನಾಡಿದರು. ಈ ನನ್ನ ಕರ್ಮಭೂಮಿಯ ಜನತೆಯ ಋಣ ತೀರಿಸಲು ನನ್ನೊಟ್ಟಿಗೆ ಪತ್ನಿ ಅನಿತಾ, ಪುತ್ರ ನಿಖಿಲ್ಗೌಡ ಕೂಡ ಇದ್ದಾರೆ. ಮುಂದಿನ ದಿನಗಳಲ್ಲಿ ಅವರೂ ಇಲ್ಲಿನ ಜನರ ದೂರು, ದುಮ್ಮಾನಗಳಿಗೆ ಸ್ಪಂದಿಸಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಅನಿವಾರ್ಯ ಆಗಿತ್ತು: ಚಿಕ್ಕಬಳ್ಳಾಪುರದಿಂದ ನನ್ನ ಸ್ಪರ್ಧೆ ಅನಿವಾರ್ಯವಾಗಿತ್ತು. ಪಿತೃವಾಕ್ಯ ಪರಿಪಾಲಕನಾಗುವ ಜತೆಗೆ ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾನು ಅಲ್ಲಿಂದ ಸ್ಪರ್ಧೆಗೆ ಇಳಿದಿದ್ದೇನೆ. ರಾಮನಗರ ಕ್ಷೇತ್ರವನ್ನು ಎಂದಿಗೂ ಮರೆಯೊಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಪ್ರಸಕ್ತ ಲೋಕಸಭಾ ಚುನಾವಣೆಯು ಜೆಡಿಎಸ್ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಇಲ್ಲಿ ಗೆಲಮೊಂದೇ ಗುರಿಯಾಗಿದೆ. ಇದು ನಮ್ಮ ಪಕ್ಷಕ್ಕೆ ಅಳಿವು, ಉಳಿವಿನ ಪ್ರಶ್ನೆಯೂ ಆಗಿದೆ. ಮತದಾರರು ಪ್ರಭಾಕರರೆಡ್ಡಿ ಅವರನ್ನು ಗೆಲ್ಲಿಸಿ ದೇವೇಗೌಡರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಹಿತಕ್ಕಾಗಿ: ಈ ಕ್ಷೇತ್ರದ ಹೋರಾಟವು ಧರ್ಮ ಮತ್ತು ಅಧರ್ಮದ ನಡುವೆ ಯುದ್ಧವಾಗಿದೆ.
ಕೇಂದ್ರದಲ್ಲಿ ತೃತೀಯ ರಂಗದ ಸರ್ಕಾರ ರಚನೆ ಸಾಧ್ಯತೆ ಇದ್ದು, ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆ. ರಾಜ್ಯದ ಹಿತ ಕಾಯಲು ಮತದಾರರು ನಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಯಾವ ಕಾರಣಕ್ಕೂ ನೂರರ ಗಡಿ ದಾಟುವುದಿಲ್ಲ. ಮೋದಿ ಅಲೆ ಕೇವಲ ಮಾಧ್ಯಮಗಳ ಸೃಷ್ಟಿ ಮಾತ್ರ. ಆ ಪಕ್ಷಕ್ಕೆ ಬಹುಮತ ಸಿಗುವುದು ಅಸಂಭವ.
ರಾಜ್ಯದಲ್ಲಿ ಜೆಡಿಎಸ್ 12 ರಿಂದ 13 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.