ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

19 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರ

Srinivasa Murthy VN
Updated On : 17 Apr 2014, 1:50 am

-ಕೆ.ಆರ್.ರವಿಕಿರಣ್
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ಏ.16
ಗುರುವಾರ ನಡೆಯುತ್ತಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 19 ಮಂದಿ ಅಭ್ಯರ್ಥಿಗಳ ಹಣೆಬರೆಹ ನಿರ್ಧಾರವಾಗಲಿದೆ. ರಾಜ್ಯ-ರಾಷ್ಟ್ರದ ಗಮನ ಸೆಳೆದು ತೀವ್ರ ಕುತೂಹಲ ಕೆರಳಿಸಿರುವ  ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಪ್ರತಿಷ್ಠೆ ಪಣಕ್ಕಿದ್ದರೆ, ಕೆಲ ಅಭ್ಯರ್ಥಿಗಳು ಅಸ್ತಿತ್ವದ ಉಳಿವಿಗಾಗಿ ಸ್ಪರ್ಧೆಯಲ್ಲಿರುವುದು ನಿಚ್ಚಳವಾಗಿದೆ.
ಗೆಲವು ಎಲ್ಲರ ಗುರಿಯಾಗಿದ್ದರೂ ಗೆಲ್ಲುವ ಅಭ್ಯರ್ಥಿ ಹಣೆಬರೆಹ ನಿರ್ಧರಿಸುವುದು ಸೋಲುವ ಅಭ್ಯರ್ಥಿ ಎಂಬುದು ಈ ಬಾರಿಯ ವಿಶೇಷ. ಯಾರು ಎಷ್ಟು ಮತ ಪಡೆಯುತ್ತಾರೆ ಎಂಬುದು ಗೆಲ್ಲುವ ಕುದುರೆಯ ಓಟಕ್ಕೆ ಪುಷ್ಟಿಕೊಡುವ ಪ್ರಮುಖ ಅಂಶ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಬಾರಿಯ ಚುನಾವಣಾ ಅಖಾಡದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ಪ್ರಬಲ ಸ್ಪರ್ಧೆ ಇದೆ. ಜೊತೆಗೆ ಸಿಪಿಎಂ, ಬಿಎಸ್ಪಿ, ಆಮ್ ಆದ್ಮಿ ಪಾರ್ಟಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಕೂಡ ಸ್ಪರ್ಧೆ ಅಖಾಡದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ವೇದಿಕೆ ಸಜ್ಜಾಗಿದೆ.
ಭವಿಷ್ಯ ನಿರ್ಧಾರ: ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ಜೆಡಿಎಸ್‌ನಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಬಿಎಸ್ಪಿಯಿಂದ ಸ್ಪರ್ಧಿಸಿರುವ ಚಿತ್ರ ಪ್ರಸಾದ್, ಎಎಪಿ ಅಭ್ಯರ್ಥಿ ಕೆ.ಆರ್ಕೇಶ್, ಜೆಡಿಯು ಅಭ್ಯರ್ಥಿ ಜಿ.ಕೆ.ಸಿ.ರೆಡ್ಡಿ,  ಪಕ್ಷೇತರವಾಗಿ ಸ್ಪರ್ಧಿಸಿರುವ ಯಾಕೂಬ್ ಷರೀಫ್, ರಾಬಿನ್ ಮಾಥ್ಯೂಸ್ ನಾರೇಕಟ್ಟು, ಎಚ್.ಎನ್.ರಾಮಕೃಷ್ಣರೆಡ್ಡಿ, ಜಿ.ಸಿ.ವೆಂಕಟರಮಣಪ್ಪ, ಬಿ.ಎನ್. ಗೋಪಾಲಗೌಡ, ಜಯಪ್ರಕಾಶ್ ಯಾದವ್, ಡಿ.ಎನ್.ನರಸಿಂಹಮೂರ್ತಿ, ನಂಜಪ್ಪ, ಟಿ.ವಿ.ಮಂಜುನಾಥಗೌಡ, ಜಿ.ಎನ್.ರವಿ, ಡಿ.ಟಿ.ವೆಂಕಟೇಶ್, ಕೆ.ಎಸ್.ಸ್ವಾಮಿ  ಸೇರಿದಂತೆ 19 ಮಂದಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಪೈಪೋಟಿ: ವೀರಪ್ಪ ಮೊಯ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಬಿಜೆಪಿ ತೀವ್ರ ಪ್ರತಿಸ್ಪರ್ಧೆ ನೀಡಿತ್ತು. ಜೆಡಿಎಸ್ 3ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಮೋದಿ ಅಲೆ, ವೀರಪ್ಪ ಮೊಯ್ಲಿ ಬಗೆಗಿನ ಅಭಿವೃದ್ಧಿ ನಿರ್ಲಕ್ಷ್ಯ ಆರೋಪ, ವಲಸಿಗ ಅಭ್ಯರ್ಥಿಗಳು ಮತ್ತು ಸ್ಥಳೀಯ ಅಭ್ಯರ್ಥಿಗಳ ನಡುವೆ ಏರ್ಪಟ್ಟಿರುವ ಸ್ಪರ್ಧೆ, ಸ್ಥಳೀಯವಾಗಿ ನಡೆದಿರುವ ಪಕ್ಷಾಂತರ ಪರ್ವ ಇತ್ಯಾದಿ ಪ್ರಮುಖ ವಿಚಾರಗಳಿವೆ. ಹೀಗಾಗಿ ಅದೃಷ್ಟ ಪರೀಕ್ಷೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಅರಿಯಲು ಮೇ 16ರವೆರೆಗೆ ಕಾಯಬೇಕಷ್ಟೆ.
ಹಣದ ಹೊಳೆ ಕ್ಷೇತ್ರದಲ್ಲಿ ಈಗಾಗಲೇ ಮತದಾರರ ಓಲೈಕೆ ಬಹುತೇಕ ಕೊನೆಯ ಹಂತದಲ್ಲಿದ್ದು, ಪ್ರಮುಖ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಸ್ಪರ್ಧಿಗಳು ತಮ್ಮ ಕಾರ್ಯಕರ್ತರ ಮೂಲಕ ಮತದಾರರ ಮನೆಬಾಗಿಲಿಗೆ ಪ್ರತಿ ಮತಕ್ಕೆ 500, 400, 200 ರುಗಳಂತೆ ಹಣ ಹಂಚುತ್ತಿದ್ದಾರೆ. ಜೊತೆಗೆ ಹೆಂಡದ ಹಂಚಿಕೆ ಕೂಡ ಎಗ್ಗಿಲ್ಲದೆ ನಡೆಯುತ್ತಿದೆ.  ಕ್ಷೇತ್ರದಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಕೋಟಿಗಟ್ಟಲೆ ಹಣ ಹರಿಯುತ್ತಿರುವುದು ಹೇಗೆ ಎಂಬುದು ಪ್ರಜ್ಞಾವಂತ ಮತದಾರರ ಪ್ರಶ್ನೆಯಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಆಯೋಗ ಮಹತ್ವದ ಪಾತ್ರ ವಹಿಸಿದ್ದರೂ ಚುನಾವಣಾ ಹಿಂದಿನ ದಿನ ಈ ರೀತಿಯಾಗಿ ಹಣ ಹಂಚಿಕೆ ಮಾಡುವುದನ್ನು
ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಆಯೋಗ ಯೋಚಿಸಬೇಕು ಎಂದು ಅನೇಕ ಸಂಘಟನೆಗಳು ಮತ್ತು ಪ್ರಾಜ್ಞ ಮತದಾರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement