ಇವು ಹೊಸಕೋಟೆ ತಾಲೂಕಿನ ಮಾದರಿ ಮತಗಟ್ಟೆಗಳು...
ಸೂಲಿಬೆಲೆ: ಇದೇ ಪ್ರಥಮ ಬಾರಿಗೆ ಚುನಾವಣೆ ಆಯೋಗ ಎಲ್ಲ ಕ್ಷೇತ್ರಗಳಲ್ಲಿ ಮಾದರಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಿದ್ದು ,ಹೊಸಕೋಟೆ ತಾಲೂಕಿನ 5 ಕಡೆ ಮಾದರಿ ಮತಗಟ್ಟೆಯ ಸೌಲಭ್ಯಗಳನ್ನು ಮತದಾರರು ಪಡೆಯಲಿದ್ದಾರೆ.
ಎಲ್ಲೆಲ್ಲಿ: ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ನಂದಗುಡಿ ಹೋಬಳಿಯ ತರಬಹಳ್ಳಿ, ಸೂಲಿಬೆಲೆ ಹೋಬಳಿಯ ಗುಳ್ಳಹಳ್ಳಿ ಹಾಗೂ ಹೊಸಕೋಟೆ ಟೌನ್ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 152, 162, 169 ನೇ ಮತಗಟ್ಟೆಯಲ್ಲಿ ಮಾದರಿ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.
ಮತದಾನ ಮಾಡಲು ಬರುವ ಮತದಾರರಿಗೆ ಕುಳಿತು ಕೊಳ್ಳಲು ಶಾಮಿಯಾನ ವ್ಯವಸ್ಥೆ, ಕುರ್ಚಿ, ಟೋಕನ್ ವಿತರಣೆ ಮಾಡಲು ಸ್ವಯಂ ಸೇವಕರು, ಗುರುತಿನ ಚೀಟಿ ಇಲ್ಲದವರಿಗೆ ಕಂಪ್ಯೂಟರ್ ಮೂಲಕ ಹೆಸರನ್ನು ಹುಡುಕಿ ಮತದಾನ ಮಾಡಲು ಅವಕಾಶ ಕಲ್ಪಿಸುವುದು, ಮತದಾನ ಮಾಡುತ್ತಿರುವ ಪ್ರದೇಶವನ್ನು ಚಿತ್ರೀಕರಿಸಿ ಮತದಾರರ ಇ.ಮೇಲ್ ಪಡೆದು ಫೋಟೋಗಳನ್ನು ಕಳುಹಿಸುವುದು ಹಾಗೂ ಮತದಾನ ಮಾಡಿದ ನಂತರ ಮತದಾರರಿಗೆ ವಂದನೆ ಚೀಟಿ ನೀಡುವುದು ಮಾದರಿ ಕೇಂದ್ರದ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 5 ಹೋಬಳಿಗಳಿದ್ದು, 26 ಗ್ರಾಪಂ ಹಾಗೂ ಒಂದು ಪುರಸಭೆ ಕೇಂದ್ರವನ್ನು ಹೊಂದಿದೆ. ಒಟ್ಟು 1,95,159 ಮತದಾರರಿದ್ದಾರೆ. ಇದರಲ್ಲಿ 99,402 ಪುರುಷರು, 95,744 ಮಹಿಳಾ ಮತದಾರರಿದ್ದಾರೆ. ಇತರೇ 13 ಮಂದಿ ಇದ್ದಾರೆ.
ಮತಗಟ್ಟೆ ವಿವರ: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 265 ಮತಗಟ್ಟೆಗಳನ್ನು ಹೊಂದಿದ್ದು, ಇದರಲ್ಲಿ 117 ಅತಿ ಸೂಕ್ಷ್ಮ, 114 ಸೂಕ್ಷ್ಮ ಹಾಗೂ 34 ಸಾಮಾನ್ಯ ಮತಗಟ್ಟೆಗಳಾಗಿವೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ.ಹೆಚ್. ನಟರಾಜ್ ತಿಳಿಸಿದ್ದಾರೆ.