ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾರು ಡಿಕ್ಕಿ: ಕೆಲವರಿಗೆ ಸಣ್ಣಪುಟ್ಟ ಗಾಯ

Srinivasa Murthy VN
Updated On : 17 Apr 2014, 1:50 am

ಮಾಗಡಿ: ಇನೋವ ಮತ್ತು ಇಂಡಿಕಾ ಕಾರು ನಡುವೆ  ಡಿಕ್ಕಿ ಹೊಡೆದ ಪರಿಣಾಮ ಎರಡು ಕಾರಿನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿರುವ ಘಟನೆ ತಾಲೂಕಿನ ಕರಲಮಂಗಲದ ಸೇತುವೆ ತಿರುವಿನಲ್ಲಿ ನಡೆದಿದೆ.
ರಾಮನಗರದಿಂದ ಮಾಗಡಿ ಮಾರ್ಗವಾಗಿ ಬರುತ್ತಿದ್ದ ಇಂಡಿಕಾ ಕಾರು, ಮಾಗಡಿಯಿಂದ ಕರಲಮಂಗಲ ಮಾರ್ಗವಾಗಿ ತೆರಳುತ್ತಿದ್ದ ಇನೋವ ಕಾರು  ಡಿಕ್ಕಿಯಾಗಿದ್ದು, ಇನೋವ ಕಾರಿನಲ್ಲಿದ್ದ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಅವರು ಗಾಯಗೊಂಡಿದ್ದಾರೆ. ಕೃಷ್ಣಮೂರ್ತಿ ಅವರ ಕಾರು ಚಾಲಕ ಮೋಹನ್ ಹಾಗೂ ಬೆಂಗಾವಲುಗಾರರಿಬ್ಬರೂ ಗಾಯಗೊಂಡಿದ್ದಾರೆ. ಇಂಡಿಕಾ ಕಾರು ಚಾಲಕ ಗಾಯಗೊಂಡಿದ್ದಾನೆ. ಇನೋವಾ ಕಾರಿನಲ್ಲಿದ್ದ ಗಾಯಳುಗಳು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ತೆರಳಿದ್ದಾರೆ. ಇಂಡಿಕಾ ಕಾರಿನ ಚಾಲಕ ಸಹ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
   ಕಾಂಗ್ರೆಸ್ ಮುಖಂಡ ಹಾಗೂ ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ತನ್ನ ಸಹಚರರೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕಾಂಗ್ರೆಸ್  ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಮನೆ ಮನೆಗೆ ತೆರಳಿ ಮತಯಾಚಿಸಲು ಇನೋವ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಕೆಪಿಸಿಸಿ ಸದಸ್ಯ ಎ.ಮಂಜು ಇತರೆ ಮುಖಂಡರು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೃಷ್ಣಮೂರ್ತಿ ಇತರೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ವಿದ್ಯುತ್ ಅವಘಡ, ರು. 50 ಸಾವಿರ ನಷ್ಟ
ದೇವನಹಳ್ಳಿ: ಇಲ್ಲಿನ ಕಾಳಿಕಾಂಬ ರಸ್ತೆಯಲ್ಲಿರುವ  ಮನೆಯೊಂದರಲ್ಲಿ ಯಾರೂ ಇಲ್ಲದ ಸಂದರ್ಭ   ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದಾಗಿ ಮೂರು ಮೀಟರ್‌ಗಳು ಅಲ್ಲದೆ ಸುಮಾರು 50 ಸಾವಿರ ರು. ಬೆಲೆ ಬಾಳುವ  ವಿದ್ಯುತ್ ಉಪಕರಣಗಳು, ಸಮವಸ್ತ್ರಗಳು ಸುಟ್ಟುಹೋಗಿರುವ ಕುರಿತು ವರದಿಯಾಗಿದೆ.
ಕೆನರಾ ಬ್ಯಾಂಕಿನಲ್ಲಿ ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿರುವ ಆವಲಪ್ಪ ಎಂಬುವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಪತಿ ಪತ್ನಿ ಇಬ್ಬರೂ ಮನೆಯಿಂದ ಹೊರಗೆ ಹೋಗಿ ಬರುವಷ್ಟರಲ್ಲಿ ಸಂಜೆ ಮನೆಯ ಕಿಟಕಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಕೂಡಲೇ ಮನೆಯ ಬಾಗಿಲನ್ನು ತೆರೆದಾಗ ಟಿವಿ ಮತ್ತು ಫ್ಯಾನ್ ಅಲ್ಲದೆ ಬಟ್ಟೆಗಳು ಬೆಂಕಿಯಿಂದ ಹೊತ್ತಿಕೊಂಡು ಉರಿಯುತ್ತಿರುವುದನ್ನು ಕಂಡರು. ಕೂಡಲೇ ವಿದ್ಯುತ್ ಇಲಾಖೆಯವರು ಆಗಮಿಸಿ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿದರು. ಪೊಲೀಸರು ಆಗಮಿಸಿ ಪರಿಶೀಲಿಸಿದರು. ತಹಸೀಲ್ದಾರ್ ಕಚೇರಿಯ ರೆವಿನ್ಯೂ ಅಧಿಕಾರಿ ಶ್ರೀನಿವಾಸ್ ಆಗಮಿಸಿ ಪರಿಶೀಲನೆ ನಡೆಸಿರು. ಈ ಬಡ ಕುಟುಂಬಕ್ಕೆ ಸುಮಾರು 50 ಸಾವಿರ ರು. ನಷ್ಟವಾಗಿದ್ದು ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಸಿ.ಬಿ.ರಾಜು, ನಾಗರಾಜು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement