ಕೆಲ ಸಿಬ್ಬಂದಿ ಅನಾರೋಗ್ಯ: ತಹಸೀಲ್ದಾರ್ ಆತಂಕ
ಮಾಗಡಿ: ಲೋಕಸಭಾ ಚುನಾವಣೆಯ ಮತಗಟ್ಟೆ ಕೇಂದ್ರಗಳಿಗೆ ನಿಯೋಜನೆಗೊಂಡಿರುವ ಕೆಲ ಸಿಬ್ಬಂದಿಗಳು ಅನಾರೋಗ್ಯಪೀಡಿತರಾಗಿದ್ದಾರೆ ಎಂದು ತಹಸೀಲ್ದಾರ್ ಸಿ.ಎಚ್.ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ನಿಯೋಜನೆಗೊಂಡಿರುವ ಸಿಬ್ಬಂದಿಗಳನ್ನು ಮತಗಟ್ಟೆ ಕೇಂದ್ರಗಳಿಗೆ ಮತಯಂತ್ರ ಹಾಗೂ ಮತದಾನದ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ನಿಯೋಜನೆಗೊಂಡಿರುವ ಅನಾರೋಗ್ಯ ಪೀಡಿತ ಸಿಬ್ಬಂದಿಗಳಿಗೆ ತೊಂದರೆಯಿದೆ. ಮಧುಮೇಹದಿಂದ ನರಳುತ್ತಿದ್ದೇವೆ. ಹೀಗೆ ನಾನಾ ರೀತಿಯಲ್ಲಿ ತಮ್ಮ ನೋವನ್ನು ಈ ವೇಳೆ ತೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಾಯ್ದಿರಿಸಿರುವ ಸಿಬ್ಬಂದಿಗಳನ್ನು ಚುನಾವಣಾ ಕೆಲಸಕ್ಕೆ ಬದಲಾಯಿಸುವುದು ತುಂಬ ಕಷ್ಟದ ಕೆಲಸವಾಗಿದೆ ಎಂದರು. ಇದೇ ವೇಳೆ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಮದ್ಯ ಸೇವನೆ ಮಾಡಿ ಬಂದಿದ್ದ ಅಧಿಕಾರಿಗಳನ್ನು ಸಹಾಯಕ ಚುನಾವಣಾಧಿಕಾರಿ ಶೈಲಜಾ ತರಾಟೆಗೆ ತೆಗೆದುಕೊಂಡರು.
ಸಕಲ ಸಿದ್ದತೆ: ಶಾಂತಿಯುತ ಮತದಾನಕ್ಕೆ ಈಗಾಗಲೇ ಸಕಲ ಸಿದ್ಧತೆಯಿಂದ ಸಜ್ಜಾಗಿದ್ದೇವೆ. ಮತದಾನ ಬೆಳಗ್ಗೆ 7 ಗಂಟೆಯಿಂದಲೇ ಆರಂಭಗೊಳ್ಳಲಿದ್ದು, ಸಂಜೆ 6 ಗಂಟೆಯವರೆವಿಗೂ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶೈಲಜಾ ತಿಳಿಸಿದರು. ಚುನಾವಣಾ ಸಿಬ್ಬಂದಿಗಳಿಗೆ ಉತ್ತಮ ರೀತಿಯಲ್ಲಿ ಉಪಹಾರ, ಊಟ, ಕಾಫಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.
294 ಮತಗಟ್ಟೆ ಕೇಂದ್ರಗಳು: ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2,09848 ಮತದಾರರಿದ್ದಾರೆ. ಒಟ್ಟು 294 ಮತಗಟ್ಟೆ ಕೇಂದ್ರಗಳಿದ್ದು, 35 ಅತಿಸೂಕ್ಷ್ಮ, 54 ಸೂಕ್ಷ್ಮ ಉಳಿದಂತೆ 205 ಮತಗಟ್ಟೆ ಕೇಂದ್ರಗಳನ್ನು ಸಾಮಾನ್ಯ ಕೇಂದ್ರಗಳೆಂದು ಗುರುತಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸುಮಾರು 2,500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇದರಲ್ಲಿ 26 ಸೆಕ್ಟರ್ ಅಫೀಸರ್ಸ್ ಫ್ಲೈಯಿಂಗ್ ಸ್ಕ್ವಾಡ್ನ 6 ತಂಡಗಳು, ಇಬ್ಬರು ನೋಡಲ್ ಅಧಿಕಾರಿಗಳು, 6 ಚಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಮತಗಟ್ಟೆ ಕೇಂದ್ರಗಳಿಗೆ ಯಾವುದೇ ತೊಂದರೆಯಾಗದಂತೆ ಸುಸ್ಥಿತಿಯಲ್ಲಿಟ್ಟು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತದಾನದ ದಿನದಂದು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಯಾ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತಚಲಾಯಿಸುವಂತೆಯೂ ಅವರು ತಿಳಿಸಿದರು.