ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಫಲ

Srinivasa Murthy VN
Updated On : 17 Apr 2014, 1:49 am

ಕ.ಪ್ರ.ವಾರ್ತೆ  ರಾಮನಗರ ಏ.16
ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿಯು  ಒಂದು ತಂಡವಾಗಿ ಕಾರ್ಯನಿರ್ವಹಿಸಿದ್ದು, ಜಿಲ್ಲೆಯಾದ್ಯಂತ ಹಲವಾರು ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲು ಸಫಲವಾಗಿದೆ ಎಂದು ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಮಾ.13 ರಿಂದ ಪ್ರಾರಂಭಗೊಂಡ ಸರಣಿ ಜಾಗೃತಿ ಕಾರ್ಯಕ್ರಮಗಳು ಮತದಾನದ ದಿನವಾದ ಏ.17 ರವರೆಗೂ ಮುಂದುವರೆಸಿ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುವಂತೆ ಪ್ರೇರೇಪಿಸಿದೆ. ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಪ್ರೇರೇಪಿಸಿದೆ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ 33 ಮತಗಟ್ಟೆಗಳಲ್ಲಿ ಶೇಕಡಾ 50ಕ್ಕೂ ಕಡಿಮೆ ಮತದಾನವಾಗಿದೆ. ಈ ಪೈಕಿ ಶೇಕಡಾ 90ಕ್ಕೂ ಹೆಚ್ಚು ಮತಗಟ್ಟೆಗಳು ನಗರ, ಪಟ್ಟಣ ಪ್ರದೇಶಗಳಿಗೆ ಸೇರಿವೆ ಎಂಬುದು ಸೋಜಿಗವಾಗಿದೆ. ಸುಶಿಕ್ಷಿತ ನಾಗರೀಕರೆಂದು ಕರೆಸಿಕೊಳ್ಳುವ ನಗರ ಮತದಾರರೇ ಮತದಾನದ ಬಗ್ಗೆ ನಿರಾಸಕ್ತಿ ಹೊಂದಿರುವುದು ವಿಪರ್ಯಾಸವಾಗಿದೆ ಎಂದರು.
ಇಂತಹ ಮತಗಟ್ಟೆ ವ್ಯಾಪ್ತಿಯ ಮತದಾರರಿಗೆ ತಮ್ಮ ಮತದ ಮೌಲ್ಯವನ್ನು ತಿಳಿಸಿ, ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಸ್ವೀಪ್ ಸಮಿತಿಯಿಂದ 25ಕ್ಕೂ ಹೆಚ್ಚು ವಿಶಿಷ್ಟ ಕಾರ್ಯಕ್ರಮಗಳನ್ನು ನಗರ ಪ್ರದೇಶಗಳಲ್ಲಿ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.
ಅಕ್ಷರ ದೋಸೆ: ಮತದಾರರನ್ನು ಆಕರ್ಷಿಸುವ ಉದ್ದೇಶದಿಂದ ಅಕ್ಷರ ದೋಸೆ, ಅಕ್ಷರ ಇಡ್ಲಿ, ಅಕ್ಷರ ಆರೋಗ್ಯ, ಯುವ ಮತದಾರರ ಆಕರ್ಷಣೆಯ ರಂಗೋಲಿ ಸ್ಪರ್ಧೆ, ಪುಷ್ಪ ರಂಗೋಲಿ, ಆಯುಷ್ ಆರೋಗ್ಯ ಶಿಬಿರ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದೆ. ವಾರ್ತಾ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ನಾಟಕ ತಂಡಗಳ ಮೂಲಕ ಜಿಲ್ಲೆಯ 70ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮತ ಪ್ರಮಾಣ ಹೆಚ್ಚಿದೆ ಎಂದು ಗ್ರಾಮೀಣ ಪ್ರದೇಶಗಳನ್ನು ನಿರ್ಲಕ್ಷಿಸಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಓದುತ್ತಿರುವ ಶಾಲಾ ಮಕ್ಕಳ ಮೂಲಕ ಮತದಾನ ಮಾಡುವುದಾಗಿ ಪ್ರಮಾಣ ಪತ್ರವನ್ನು ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ವಿತರಿಸಿ ಒಂದು ಲಕ್ಷ ಪ್ರಮಾಣ ಪತ್ರಗಳು ವಾಪಸ್ಸು ಪಡೆಯುವ ಮೂಲಕ ಜಾಗೃತಿ ಮೂಡಿಸಲಾಗಿದೆ.
ಜಿಲ್ಲೆಯ ಕಟ್ಟ ಕಡೆಯ ಗ್ರಾಮಗಳು, ತಾಂಡಗಳು, ಶಿಕ್ಷಣ ವಂಚಿತ ಸಮುದಾಯಗಳು, ಅಲ್ಪಸಂಖ್ಯಾತರು, ಇಂತಹವರಿಗೂ ಮತ ಜಾಗೃತಿ ಮೂಡಿಸಲು ಫೈರ್ ಕ್ಯಾಂಪ್, ಕರಪತ್ರಗಳ ವಿತರಣೆ ಮೂಲಕ ಜಾಗೃತಿ ಮೂಡಿಸಿದೆ. ಮಹಿಳೆಯರಿಗಾಗಿ ವಿಶಿಷ್ಟ ಕಾರ್ಯಕ್ರಮಗಳನ್ನು ಅಂಗನವಾಡಿ ಆಶಾ ಕಾರ್ಯಕರ್ತೆಯರ ಮೂಲಕ ಆಯೋಜಿಸಿ ಅರಿವು ಮೂಡಿಸಲಾಗಿದೆ. ಜಾನಪದ ಲೋಕದಿಂದ ಕೆಂಗಲ್‌ವರೆಗೆ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಲಾಗಿದೆ ಎಂದರು.
ಪ್ರಶಂಸನಾಪತ್ರ: ಜಿಲ್ಲೆಯ ಯಾವುದೇ ಮತಗಟ್ಟೆಗಳಲ್ಲಿ ಶೇಕಡಾ 100ರಷ್ಟು ಮತದಾನವಾದಲ್ಲಿ ಆ ಮತಗಟ್ಟೆಯ ಎಲ್ಲಾ ಮತದಾರರಿಗೂ ಪ್ರಶಂಸನಾಪತ್ರವನ್ನು ನೀಡಲಾಗುವುದು. ಜಿಲ್ಲೆಯ ಯಾವುದೇ ಮತಗಟ್ಟೆಗಳಲ್ಲಿ ಅತಿ ಹೆಚ್ಚು ಮಹಿಳೆಯರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರು, ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಲ್ಲಿ ಅವರಿಗೂ ಪ್ರಶಂಸನಾ ಪತ್ರದ ಮೂಲಕ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಅತಿ ಹೆಚ್ಚು ಮತದಾನವಾಗುವ ಕೇಂದ್ರಗಳಿಗೂ ಹಾಗೂ ಅತಿ ಹೆಚ್ಚು ವಯಸ್ಸಿನ ಮತದಾರರನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದ ಅವರು ಮತದಾನ ದಿನಾಂಕದಂದು ಮತದಾನ ಸಮಯ ಮುಗಿಯುವವರೆಗೂ ನಗರ ಪ್ರದೇಶಗಳಲ್ಲಿ ಆಟೋ ರಿಕ್ಷಾಗಳ ಮೂಲಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು.
ಜಾಗೃತಿ ವೇದಿಕೆ ನಿರ್ಮಾಣ: ಮತದಾನ ಜಾಗೃತಿಗಾಗಿ ಜಿಲ್ಲೆಯ ಸೋಲೂರು, ಹಾರೋಹಳ್ಳಿ ಹಾಗೂ ರಾಮನಗರ ಬಸ್ ನಿಲ್ದಾಣದ ವೃತ್ತದಲ್ಲಿ ಜಾಗೃತಿ ವೇದಿಕೆಗಳನ್ನು ನಿರ್ಮಿಸಿ ಮತದಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿದೆ. ಸ್ವೀಪ್ ಸಮಿತಿಯ ಎಲ್ಲಾ ಸದಸ್ಯರು ತಮ್ಮ ಇಲಾಖೆಗಳ ಮೂಲಕ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರ ಜಾಗೃತಿಗಾಗಿ ಕೈಜೋಡಿಸಿದ್ದಾರೆ ಎಂದು ವೆಂಕಟೇಶ್ ಪ್ರಶಂಸಿದರು. ಗೋಷ್ಠಿಯಲ್ಲಿ ಜಿ.ಪಂ. ಸಿಪಿಒ ಎಸ್.ಧನುಷ್, ಯೋಜನಾ ನಿರ್ದೇಶಕ ಎಸ್.ವೈ.ಬಸವರಾಜಪ್ಪ, ಸ್ವೀಪ್ ನೋಡಲ್ ಅಧಿಕಾರಿ ಹಮೀದ್ ಖಾನ್ ಹಾಜರಿದ್ದರು.
ಮತದಾನ-ಆರೋಗ್ಯ ಜಾಗೃತಿ: ಏ.17ರಂದು ಮತದಾನ ಮಾಡುವ ಮತದಾರರು ಮತ ಚಲಾಯಿಸಿದ ನಂತರ ಕೈಬೆರಳಿಗೆ ಹಾಕಿಸಿಕೊಂಡಿರುವ ಶಾಯಿಯನ್ನು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತೋರಿಸಿದ್ದಲ್ಲಿ ರಕ್ತದೊತ್ತಡ, ಮಧುಮೇಹ ಹಾಗೂ ರಕ್ತ ಪರೀಕ್ಷೆಯನ್ನು ಉಚಿತವಾಗಿ ಮಾಡಿಕೊಡುವ ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement