ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮತಗಟ್ಟೆ ತಲುಪಿದ ಮತಯಂತ್ರ

Srinivasa Murthy VN
Updated On : 17 Apr 2014, 1:50 am

ಚನ್ನಪಟ್ಟಣ: ಲೋಕಸಭಾ ಮಹಾ ಸಮರಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇತ್ತ ಶಾಂತಿಯುತ ಮತದಾನ ನಡೆಸಲು ತಾಲೂಕು ಆಡಳಿತ ಸಜ್ಜುಗೊಂಡಿದೆ. ಮತಯಂತ್ರಗಳು ಅದಾಗಲೇ ಮತಗಟ್ಟೆ ತಲುಪಿದ್ದು ಶಿಸ್ತು ಬದ್ಧ ನ್ಯಾಯ ಸಮ್ಮತ ಮತದಾನಕ್ಕೆ ತಾಲೂಕು ಆಡಳಿತ ಎಲ್ಲಾ ಸಿದ್ಧತೆ ಮಾಡಿ ಕೊಂಡಿದೆ.
ತಾಲೂಕಿನಲ್ಲಿ 262 ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಪೊಲೀಸ್ ಇಲಾಖೆಯ ವರದಿಯ ಮೇರೆಗೆ ಈ  ಮತಗಟ್ಟೆಗಳಲ್ಲಿ 26 ಅತಿ ಸೂಕ್ಷ್ಮ, 52 ಸೂಕ್ಷ್ಮ, 148 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಿದ್ದು, ಶಾಂತಿಯುತ ಮತದಾನಕ್ಕಾಗಿ 500 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ 154 ಮಂದಿ ಮೀಸಲು ಪಡೆ ಪೊಲೀಸರು, ಹಾಗೂ ಸಂಚಾರಿ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು  ತಾಲೂಕಿನಾದ್ಯಂತ ಸಂಚರಿಸಿ ಬಿಗಿ ಬಂದೋಬಸ್ತ್ ವೀಕ್ಷಿಸಲಿದ್ದಾರೆ. ಪ್ರತಿ ಮತಗಟ್ಟೆಗೆ 5 ಮಂದಿಯಂತೆ ತಾಲೂಕಿನಾದ್ಯಂತ 1196ಮಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಿದ್ದು, 25 ಮಂದಿ ಸೆಕ್ಟರ್ ಅಧಿಕಾರಿಗಳನ್ನು, 9 ಮಂದಿ ತರಬೇತುದಾರರನ್ನು ನೇಮಿಸಲಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ನಿಗಾವಹಿಸಲು ತಾಲೂಕಿನ ನಾಲ್ಕು ಕಡೆ ಚಕ್‌ಪೋಸ್ಟ್ ಸ್ಥಾಪಿಸಿದ್ದು, ಇದರ ಜತೆಗೆ 5 ಮಂದಿ ಅಧಿಕಾರಿಗಳನ್ನೊಳಗೊಂಡ 5 ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಸಿಬ್ಬಂದಿಗೆ ಸೂಕ್ತ ಸವಲತ್ತು: ಇದೇ ಮೊದಲಾ ಬಾರಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಮತಗಟ್ಟೆಗೆ ಪ್ರವೇಶವಾದ ಮೊದಲ ದಿನದಿಂದ ಮತಯಂತ್ರವನ್ನು ತಾಲೂಕು ಚುನಾವಣಾಧಿಕಾರಿಗೆ ತಲುಪಿಸುವ ವರೆಗೆ ಊಟ, ತಿಂಡಿ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರತಿ ಮತದಾನ ಕೇಂದ್ರಕ್ಕೆ 20 ಲೀಟರ್‌ನ ಮೂರು ಶುದ್ಧ ಕುಡಿಯುವ ನೀರಿನ ಕ್ಯಾನ್‌ಗಳನ್ನು ಮತಯಂತ್ರದ ಜತೆಗೆ ನೀಡಲಾಗಿದ್ದು, ರಾತ್ರಿ ಊಟ, ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ತಾಲೂಕು ಆಡಳಿತದ ವತಿಯಿಂದ ಪೂರೈಸಲಾಗುವುದು. ಮಹಿಳಾ ಸಿಬ್ಬಂದಿಗಳಿಗೆ ಸೂಕ್ತ ಅನುಕೂಲ ಕಲ್ಪಿಸುವಂತೆ  ಮತಗಟ್ಟೆ ಅಧಿಕಾರಿಗಳಿಗೆ ತಹಸೀಲ್ದಾರ್ ನಿರ್ದೇಶನ ನೀಡಿದ್ದಾರೆ.
ಮಾದರಿ ಮತಗಟ್ಟೆ: ತಾಲೂಕಿನಲ್ಲಿ ಮೂರು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಮತಗಟ್ಟೆಗಳಲ್ಲಿ ಮತದಾರರಿಗೆ ಹಸಿರುಕಾರ್ಪೇಟ್ ಹಾಸಿ ಸ್ವಾಗತ ಕೋರಲಾಗುವುದು, ಮತಗಟ್ಟೆಯ ಅಂಗಳದಲ್ಲಿ  ಕುಳಿತು ಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ಮತದಾರರು ಮತ ಚಲಾಯಿಸಲು ಸರತಿಯ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಟೋಕನ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತಚಲಾಯಿಸುವ ದೃಶ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗಲಿದ್ದು, ತಾಲೂಕಿನ ಪುರಭವನ, ಕಲಾನಗರ ಮತ್ತು ಹೊಂಗನೂರಿನ ಮತಗಟ್ಟೆಗಳಲ್ಲಿ ಈವ್ಯವಸ್ಥೆ ಕಲ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement