ಮತದಾನದಲ್ಲಿ ಭಾಗವಹಿಸಿ: ಎಚ್. ಎನ್. ಶಿವೇಗೌಡ
ಆನೇಕಲ್ಲು: ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿ 320 ಮತಗಟ್ಟೆಗಳಿದ್ದು 3,05,750 ಮತದಾರರಿದ್ದಾರೆ ಎಂದು ಉಪ ಚುನಾವಣಾಧಿಕಾರಿ ಎಚ್. ಎನ್. ಶಿವೇಗೌಡ ತಿಳಿಸಿದ್ದಾರೆ.
ಪುರುಷರು 1,63,045, ಮಹಿಳೆಯರು 1,42,654 ಹಾಗೂ 51 ಮಂಗಳ ಮುಖಿಯರು ಇರುತ್ತಾರೆ. ಒಟ್ಟು 320 ಮತಗಟ್ಟೆಗೆ 1300ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಮತಗಟ್ಟೆ ನಿರ್ವಹಣೆ ಬಗ್ಗೆ ಸೂಕ್ತ ತರಬೇತಿ ನೀಡಲಾಗಿದೆ. ಉಸ್ತುವಾರಿ ಸಿಬ್ಬಂದಿ, ಅಗತ್ಯ ಪೊಲೀಸ್ ಸಿಬ್ಬಂದಿ ಜೊತೆಗೆ ಹೋಂ ಗಾರ್ಡ್ಸ್ ಸೇವೆಯನ್ನೂ ಪಡೆಯಲಾಗುತ್ತಿದೆ.
ಕಳೆದ ಚುನಾವಣೆಯಲ್ಲಿ 2 ಮತಗಟ್ಟೆಯಲ್ಲಿ ಒಂದು ಪಕ್ಷದ ಅಭ್ಯರ್ಥಿಗೆ ಅತಿ ಹೆಚ್ಚು ಮತದಾನವಾಗಿದ್ದು ವಿಶೇಷ ನಿಗಾ ಮತಗಟ್ಟೆ ಎಂದು ಗುರ್ತಿಸಲಾಗಿದೆ. ಉಳಿದಂತೆ 49 ಅತಿ ಸೂಕ್ಷ್ಮ, 85 ಸೂಕ್ಷ್ಮ ಮತ್ತು 184 ಸಾಧಾರಣ ಮತಗಟ್ಟೆಗಳಿರುತ್ತವೆ.
ತಾಲೂಕಿನ ಕೂಡ್ಲು ಮತಗಟ್ಟೆಯಲ್ಲಿ ಅತಿ ಹೆಚ್ಚು 1574 ಮತದಾರರಿದ್ದರೇ, ಕಗ್ಗಲೀಪುರದಲ್ಲಿ ಅತಿ ಅಲ್ಪ 352 ಮತದಾರರಿರುತ್ತಾರೆ.
ಮನವಿ: ತಾಲೂಕಿನ ಎಲ್ಲ ಮತದಾರರು ಏ.17 ಗುರುವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆ ವರೆಗೆ ನಡೆಯುವ ಚುನಾವಣೆಯಲ್ಲಿ ಕಡ್ಡಾಯ ಮತದಾನದಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ. ಮತದಾನ ಜಾಗೃತಿ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜನ ಸಾಮಾನ್ಯರಿಗೆ ಅರಿವು ಮೂಡಿಸಲಾಗಿದೆ. ವಯಸ್ಸಾದವರು, ಗರ್ಭಿಣಿಯರು, ತಾಯಂದಿರು, ಅಂಗವಿಕಲರು ಮತದಾನಕ್ಕೆ ಬಂದಾಗ ಸರದಿ ಸಾಲಿನಲ್ಲಿ ನಿಂತಿರುವವರು ಆದ್ಯತೆ ಮೇರೆಗೆ ಹಿರಿಯರಿಗೆ ಅವಕಾಶ ಮಾಡಿಕೊಡಬೇಕು. ಮತದಾನ ಸಮಯದಲ್ಲಿ ಯಾರಾದರೂ ವ್ಯಕ್ತಿ ಅಥವಾ ಪಕ್ಷಕ್ಕೆ ಮತಹಾಕಲು ಒತ್ತಾಯ ಮಾಡಿದರೆ ಮತಗಟ್ಟೆಯ ಬಳಿಯ ಚುನಾವಣಾಧಿಕಾರಿಗಳ ಗಮನಕ್ಕೆ ತರಬಹುದು ಎಂದರು. ಅಧಿಕಾರಿಗಳಾದ ನಿಶ್ಚಲ್, ಪ್ರಸನ್ನ ಕುಮಾರ್, ಡಾ. ವೀರಭದ್ರಪ್ಪ, ಗವಿರಂಗಯ್ಯ, ಮಂಜುನಾಥ್, ಶೇಖರಪ್ಪ ಇದ್ದರು
ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಪ್ರಯತ್ನ ಸಲ್ಲದು
ದೊಡ್ಡಬಳ್ಳಾಪುರ: ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾದ ಕೆಲಸಗಳು ಇಂದಿನ ಸಂದರ್ಭದಲ್ಲಿ ನಡೆಯುತ್ತಿರುವುದು ಆತಂಕಕಾರಿ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.
ಇಲ್ಲಿನ ಶ್ರೀಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಸಿದ್ಧಾಂತ, ಸಂವಿಧಾನದ ವಿಚಾರಗಳನ್ನು ಇಂದು ಕೇವಲ ಭಾಷಣಗಳಿಗಷ್ಟೇ ಉಪಯೋಗಿಸಿಕೊಳ್ಳುತ್ತಿರುವುದು ಆತಂಕಕಾರಿ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಬಾಬಾ ಸಾಹೇಬರ ಚಿಂತನೆಗಳ ಅನುಷ್ಠಾನ ಬಹುಮುಖ್ಯ. ಕಾನೂನು ಕಟ್ಟಲೆಗಳನ್ನು ಬರೀ ಉಪದೇಶಕ್ಕೆ ಸೀಮಿತ ಮಾಡುವುದರಿಂದ ಪ್ರಯೋಜನವಿಲ್ಲ. ಕೃತಿ ರೂಪದಲ್ಲಿ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿಯ 123ನೇ ಜನ್ಮದಿನೋತ್ಸವ ಅಂಗವಾಗಿ ಬಾಬಾ ಸಾಹೇಬರ
ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ, ಪ್ರೊ.ರಂಗಸ್ವಾಮಿ ಬೆಳಕವಾಡಿ, ಉಪಪ್ರಾಂಶುಪಾಲ ಪ್ರೊ.ಆರ್.ಎನ್. ಪಂಚಾಕ್ಷರಯ್ಯ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಅಬ್ದುಲ್ ರವೂಫ್, ಡಾ.ಬಿ.ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.