ಆನೇಕಲ್ ಶೇ. 56 ಮತದಾನ
ಆನೇಕಲ್ಲು: ಆನೇಕಲ್ ತಾಲೂಕಿನಾದ್ಯಂತ ಶೇ. 54 ಮತದಾನವಾಗಿದೆ ಎಂದು ಉಪಚುನಾವಣಾಧಿಕಾರಿ ಹೆಚ್. ಎನ್. ಶಿವೇಗೌಡ ತಿಳಿಸಿದ್ದಾರೆ. ಸರ್ಜಾಪುರ ಹೋಬಳಿಯ ಪಂಡಿತನ ಅಗ್ರಹಾರ, ನೆಕ್ಕುಂದಿ ದೊಮ್ಮಸಂದ್ರ ಮತ್ತು ಕೊಮ್ಮಸಂದ್ರ ಹೊರತು ಪಡಿಸಿ ಉಳಿದೆಡೆ ಯಾವುದೇ ಅಹಿತಕರ ಘಟನೆ ನಡೆದಿಲ್ಲವೆಂದು ವರದಿಯಾಗಿದೆ.
ಮತಯಂತ್ರ ಪುಡಿ ಪುಡಿ: ತಾಲೂಕಿನ ಪಂಡಿತನ ಅಗ್ರಹಾರದಲ್ಲಿ ಬೆಳಗ್ಗೆ ಶಾಂತಿಯುತವಾಗಿ ಮತದಾನ ಪ್ರಾರಂಭವಾಗಿ 7-30ಕ್ಕೆ 69 ಮತ ಚಲಾವಣೆಯಾಗಿತ್ತು. ನಂತರ ಒಂದು ಪಕ್ಷದ ವ್ಯಕ್ತಿಯೊಬ್ಬರು ಕಣ್ಣು ಮಂಜಾಗಿರುವ ಅಜ್ಜಿಯನ್ನು ಮತದಾನಕ್ಕೆ ಕರೆ ತಂದಾಗ ವಿರೋಧ ಪಕ್ಷದ ವ್ಯಕ್ತಿ ಆಕ್ಷೇಪಣೆ ವ್ಯಕ್ತಪಡಿಸಿದರು. ಆಗ ಮಾತಿನ ಚಕಮಕಿ ನಡೆಯಿತು. ಮತಗಟ್ಟೆಯಲ್ಲಿ ತಳ್ಳಾಟ ಪ್ರಾರಂಭವಾದಾಗ ಮತಯಂತ್ರ ನೆಲಕ್ಕೆ ಬಿದ್ದು ಒಡೆದು ಹೋಯಿತು. ಚುನಾವಣಾಧಿಕಾರಿಗಳು ಕೂಡಲೇ ಬದಲಿ ಮತದಾನ ಯಂತ್ರವನ್ನು ತಂದಿಟ್ಟರು. ಕಂಟ್ರೋಲಿಂಗ್ ಯೂನಿಟ್ ಯಂತ್ರ ಅಧಿಕಾರಿಯ ವಶದಲ್ಲಿದ್ದು ಮತದಾನವಾಗಿರುವುದನ್ನು ಪರಿಗಣಿಸಲಾಗುವುದು ಎಂದರು. ಮತಗಟ್ಟೆಯಲ್ಲಿ ಜಗಳ ಹಾಗೂ ನಷ್ಟಕ್ಕೆ ಕಾರಣರಾದ 4 ವ್ಯಕ್ತಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದು ಅಶೋಕ್, ಪ್ರದೀಪ್, ನಾಗರಾಜ ಮತ್ತು ಮುನಾವರ್ ಅವರ ಮೇಲೆ ದೂರು ದಾಖಲಿಸಿಕೊಂಡು ಕ್ರಮ ವಹಿಸಲಾಗಿದೆ ಎಂದು ಸರ್ಜಾಪುರ ಠಾಣಾಧಿಕಾರಿ ತಿಳಿಸಿದರು.
ಇದೇ ವ್ಯಾಪ್ತಿಯ ನೆಕ್ಕುಂದಿ ದೊಮ್ಮಸಂದ್ರದಲ್ಲಿ ವ್ಯಕ್ತಿಯೊಬ್ಬರು ಹಣ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತು. ಸೆಕ್ಟರ್ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಉದ್ವಿಗ್ನ ಪರಿಸ್ಥಿತಿ ಇದ್ದಿತು. ಕೊಮ್ಮಸಂದ್ರ ಗ್ರಾಮದಲ್ಲಿ ಊಟ ಹಂಚುವ ವಿಷಯಕ್ಕೆ ಜಗಳ ಬಂದು ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಎಂಬ ಕಾರಣಕ್ಕೆ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದರು. ಚುನಾವಣಾಧಿಕಾರಿಗಳು, ಮುಖಂಡರು ಹಾಗೂ ಪೊಲೀಸರು ಗ್ರಾಮಸ್ಥರ ಮನಮೊಲಿಸಿ ಮತದಾನಕ್ಕೆ ಪ್ರೇರಣೆ ನೀಡಿದರು.
ಹಣ ಹಂಚಿಕೆ ಮಾಡುವಾಗ ಬಿಂದಾಸ್ ಆಗಿ ವರ್ತಿಸಿದ ಬೊಮ್ಮಸಂದ್ರ ನಾರಾಯಣಸ್ವಾಮಿಯ ಮೇಲೆ ದೂರು ದಾಖಲಿಸಿ ಕ್ರಮ ವಹಿಸಲಾಗಿದೆ ಎಂದು ಹೆಬ್ಬಗೋಡಿ ಠಾಣಾಧಿಕಾರಿ ತಿಳಿಸಿದ್ದಾರೆ. ಹೀಲಲಿಗೆ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗವೇಣಿ ಮತ್ತು ಚುನಾವಣೆಗೆ ನಿಯುಕ್ತರಾದ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.