ಹೆಣ್ಣು ಮಗು ಕೊಂದು ಬೆಂಕಿಹಚ್ಚಿ ಪೋಷಕರು ಪರಾರಿ
ಹೆತ್ತವರೇ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕೊಂದು ಬೆಂಕಿಹಚ್ಚಿ ಪರಾರಿಯಾಗಿರುವ ಅಮಾನುಶ..
ಚನ್ನಪಟ್ಟಣ: ಹೆತ್ತವರೇ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕೊಂದು ಬೆಂಕಿಹಚ್ಚಿ ಪರಾರಿಯಾಗಿರುವ ಅಮಾನುಶ ಘಟನೆ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೆಂ-ಮೈ ಹೆದ್ದಾರಿ ಬದಿಯಲ್ಲಿರುವ ಹಳೆಯ ಶಾಲೆಯ ಶೌಚಾಲಯದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಶಾಲೆಯ ಅಂಗಳದಲ್ಲಿ ಹೊಯಾಡುತ್ತಿರುವುದನ್ನು ಕಂಡು ಸ್ಥಳಕ್ಕೆ ಹೋಗಿ ನೋಡಿದಾಗ ಮಗುವಿಗೆ ಬೆಂಕಿ ಹಚ್ಚಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬೆಂಕಿ ನಂದಿಸಿ ಅರೆಬೆಂದ ಮಗುವಿನ ಶವವನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.
ಘಟನೆಯ ವಿವರ: ಕಳೆದ ಮೂರುದಿನಗಳ ಹಿಂದೆ ಗ್ರಾಮದಲ್ಲಿ ಹಕ್ಕಿಪಿಕ್ಕಿ ಜನಾಂಗದ ಗಂಡ-ಹೆಂಡತಿಯರು ಎಂಟು ವರ್ಷದ ಗಂಡು ಮಗು ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ಗ್ರಾಮದ ಹೊರ ವಲಯದಲ್ಲಿರುವ ಶಾಲೆಯ ಆವರಣದಲ್ಲಿ ಇದ್ದರು. ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಸಾಯಿಸಿ, ಶವವನ್ನು ಹೂಳಲು ಪಕ್ಕದ ಮನೆಯಲ್ಲಿ ಹಾರೆ ಗುದ್ದಲಿ ಕೊಡುವಂತೆ ಕೇಳಿದ್ದಾರೆ. ಅವರು ಕೊಡದ ಕಾರಣ ಹಳೆಯ ಶಾಲೆಯಲ್ಲಿದ್ದ ಶೌಚಾಲಯದಲ್ಲಿ ಟೈರುಗಳನ್ನು ಬಳಸಿ ಮಗುವಿಗೆ ಬೆಂಕಿ ಹಚ್ಚಿ ಆಟೋ ಹತ್ತಿ ಹೊರಟು ಹೋಗಿದ್ದಾರೆ. ಹಳೆ ಶಾಲೆಯಲ್ಲಿ ಹೊಗೆಯಾಡುತ್ತಿರುವುದನ್ನು ಕಂಡು ಸ್ಥಳೀಯರು ನೋಡಿದಾಗ ಈ ಹೃದಯ ವಿದ್ರಾಹಕ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಪಿಎಸೈ ವೆಂಕಟೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರು ದಾಖಲಿಸಿ ಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಎಳೆಯ ಕಂದಮ್ಮನಿಗೆ ಬೆಂಕಿ ಹಚ್ಚಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಮಮ್ಮಲ ಮರುಗಿದರು.
ಸೂಕ್ತ ಮಾಹಿತಿ ಇಲ್ಲ: ಒಂದೂವರೆ ವರ್ಷದ ಹೆಣ್ಣು ಕಂದಮ್ಮನನ್ನು ಕೊಂದು ಬೆಂಕಿ ಹಚ್ಚಿವ ಮೂಲಕ ಪೈಶಾಚಿಕತೆ ಮೆರೆದಿರುವ ದುರುಳ ತಂದೆ ತಾಯಿ ಸ್ಥಳೀಯರಲ್ಲ. ಇವರು ಅಲೆಮಾರಿಗಳಾಗಿರುವುದರಿಂದ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಪೊಲೀಸರಿಗೆ ದೊರಕಿಲ್ಲ. ಈ ಅಮಾನುಷ ಕೃತ್ಯ ವೆಸಗಿರುವ ಕ್ರೂರಿ ಪೋಷಕರ ಮಾಹಿತಿಗಾಗಿ ಗ್ರಾಮಾಂತರ ಪೊಲೀಸರು ಸಾಕಷ್ಟು ಶ್ರಮಿಸುತ್ತಿದ್ದಾರೆ.
ಇವರು ಕಳೆದ 3 ದಿನಗಳ ಹಿಂದಷ್ಟೇ ಇಲ್ಲಿ ಕಾಣಿಸಿ ಕೊಂಡಿದ್ದು, ಇವರ ಬಗ್ಗೆ ಸ್ಥಳೀಯರಲ್ಲಿ ಯಾವುದೇ ಮಾಹಿತಿ ಇಲ್ಲವಾಗಿರುವ ಕಾರಣ ದುರಳ ಪೋಷಕರ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.