ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಈಗ ನಾನು ಯಾವುದೇ ಪಕ್ಷದಲ್ಲಿಲ್ಲ

Srinivasa Murthy VN
Updated On : 19 Apr 2014, 1:09 am

ಕ.ಪ್ರ.ವಾರ್ತೆ ಕನಕಪುರ ಮಾ. 17
ನಾನು ಈಗ ಯಾವುದೇ ಪಕ್ಷದಲ್ಲಿಲ್ಲ, ಕಾಂಗ್ರೆಸ್ ಪಕ್ಷದಲ್ಲಿರುವ ನನ್ನ ಸ್ನೇಹಿತರ ಪರವಾಗಿ ರಾಜ್ಯಾದ್ಯಂತ ಚುನಾವಣಾ ಪ್ರಚಾರ ನಡೆಸಿದ್ದೇನೆ. ಅಧಿಕೃತವಾಗಿ ಕಾಂಗ್ರೆಸ್ ಸೇರಲು ಇನ್ನೂ ಕಾಲ ಪಕ್ವವಾಗಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ.
ಅವರು ನಿನ್ನೆ ಮರಳವಾಡಿ ಗ್ರಾಮದಲ್ಲಿ ತಮ್ಮ ಮತಚಲಾವಣೆ ನಡೆಸಿ ತಮ್ಮ ನಿವಾಸದಲ್ಲಿ  ಪತ್ರಿಕೆಯೊಂದಿಗೆ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಇರುವುದು, ಬೀದರ್, ಬೆಳಗಾವಿ, ಉತ್ತರಕನ್ನಡ, ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿರುವುದು ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಸಿಂಧ್ಯಾ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿರುವುದು ಕುತೂಹಲ ಕೆರಳಿಸಿತ್ತು.
ಪ್ರಸಕ್ತ ಲೋಕಸಭಾ ಚುನಾವಣೆ ಅಚ್ಚರಿಯ ಫಲಿತಾಂಶ ಒದಗಿಸಲಿದ್ದು ಎಲ್ಲಾ ಮಾಧ್ಯಮಗಳ ಸಮೀಕ್ಷೆಗಳು ಸುಳ್ಳಾಗಲಿವೆ, ಕೇಂದ್ರದಲ್ಲಿಯೂ ಕೂಡಾ ಅಸ್ಥಿರತೆ ಕಾಣುತ್ತಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಾರದು. ಇಂತಹ ಪರ್ವಕಾಲದ ಪರಿಣಾಮ ರಾಜ್ಯದ ಮೇಲೂ ಆಗಲಿದ್ದು ನಾಯಕತ್ವದಲ್ಲಿ ತೀವ್ರತರವಾದ ಬದಲಾವಣೆ ಕಂಡುಬರಲಿವೆ ಎಂದು ಹೇಳಿದರು.
ತಾವು ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟಪಡಿಸಿದ ಸಿಂಧ್ಯಾ ಅವರು, ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ಮಾತುಕತೆ ನಡೆಸಿದ್ದೇನೆ. ಸಚಿವ ಶಿವಕುಮಾರ್ ನೇರವಾಗಿ ಭೇಟಿ ಮಾಡಿದ್ದಾರೆ. ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಸ್ಪಷ್ಟವಾದ ನಿಲುವನ್ನು ಪ್ರಕಟಿಸುತ್ತೇನೆ ಎಂದು ಸಿಂಧ್ಯಾ ನುಡಿದರು.  
ಜೆಡಿಎಸ್‌ನಲ್ಲಿ ತಮ್ಮೊಂದಿಗೇ ಇದ್ದ ಕೆಲವರು ರಾಜಕೀಯವಾಗಿ ತೊಂದರೆ ಕೊಟ್ಟಿದ್ದಾರೆ. ಸಿಂಧ್ಯಾ ಪಕ್ಷದ್ರೋಹ ಮಾಡಿದ್ದಾರೆ ಎನ್ನುವ ಜನರಿಗೆ ಸಧ್ಯದಲ್ಲಿಯೇ ಕನಕಪುರದಲ್ಲಿ ಬಹಿರಂಗ ಉತ್ತರ ನೀಡುತ್ತೇನೆ. ಜನತಾದಳ ಒಬ್ಬ ವ್ಯಕ್ತಿಯ ಸ್ವತ್ತಲ್ಲ, ಹೆಗಡೆ, ಸಿಂಧ್ಯಾ, ಪಟೇಲ್, ಸಿದ್ಧರಾಮಯ್ಯ, ಜಾಲಪ್ಪ, ಬೊಮ್ಮಾಯಿ ಮೊದಲಾದ ಹತ್ತಾರು ಮುಖಂಡರು ಕಟ್ಟಿ ಬೆಳೆಸಿದ ಪಕ್ಷವಾಗಿದ್ದು ಇಂದು ಒಬ್ಬರ ಆಸ್ತಿಯಾಗಿ ಪರಿವರ್ತನೆಯಾಗಿದೆ.  35 ವರ್ಷಗಳ ಕಾಲ ಕಟ್ಟಿ ಬೆಳೆಸಿದ ಪಕ್ಷವನ್ನು ಬಿಡುವಾಗ ನೋವಾಗುವುದು ಸಹಜ. ಬದಲಾವಣೆಗಾಗಿ ನೋವನ್ನು ಸಹಿಸಬೇಕಾಗಿದೆ. ಬಿಜೆಪಿಯ ಕೋಮುವಾದಿ ಸಿದ್ಧಾಂತಕ್ಕೆ ತಾವು ಪ್ರಾರಂಭದಿಂದಲೂ ವಿರೋಧಿಯಾಗಿದ್ದು ಜಾತ್ಯತೀತ ನಿಲುವಿನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಸಿಂಧ್ಯಾ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement