ನಿಜಾಂ ಪಾಷ ವಿರುದ್ಧ ಕಡೆಗೂ ಕ್ರಿಮಿನಲ್ ಪ್ರಕರಣ ದಾಖಲು
ರಾಮನಗರ: ಮತಗಟ್ಟೆಯಲ್ಲಿ ಗೂಂಡಾಗಿರಿ ಹಾಗೂ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ನಗರಸಭೆಯ ಕಾಂಗ್ರೆಸ್ ಸದಸ್ಯ ನಿಜಾಂ ಪಾಷ ವಿರುದ್ಧ ಕಡೆಗೂ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಜಿಲ್ಲಾಸ್ಪತ್ರೆ ಕಟ್ಟಡ ಆವರಣದಲ್ಲಿರುವ 13ನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತದಾನ ವೇಳೆ ಪೇದೆ ಕಾರ್ಯಪ್ಪ ಮೇಲೆ ನಿಜಾಂ ಪಾಷ ಮತ್ತು ಸಹಚರರು ಹಲ್ಲೆ ನಡೆಸಿದ್ದರು. ಗಾಯಾಳುವಿನ ಕಿವಿಯಲ್ಲಿ ರಕ್ತ ಹರಿದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಲಘು ಲಾಠಿ ಪ್ರಹಾರ ನಡೆಸಿದ್ದರು.
ಈ ವಿರುದ್ಧ ಅದೇ ನಿಜಾಂ ಪಾಷ ಮತ್ತು ಸಹಚರರು ಪ್ರತಿಭಟನೆ ನಡೆಸಿದ್ದಲ್ಲದೆ, ಪೊಲೀಸರ ವಿರುದ್ಧ ಮತ್ತೆ ಹರಿಹಾಯ್ದಿದ್ದರು.
ಘರ್ಷಣೆ ವೇಳೆ ಮತಗಟ್ಟೆಯ ಕಿಟಕಿ ಗಾಜು ಪುಡಿಯಾಗಿತ್ತು. ಕೆಲ ಕಾಲ ಮತದಾನಕ್ಕೆ ಸಂಚಕಾರ ಒದಗಿತ್ತು. ಕೇಂದ್ರ ವಲಯ ಐಜಿ ಉಲ್ಫತ್ ಹುಸೇನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಕಡೆಗೂ ಪ್ರಕರಣ ದಾಖಲು: ನಿಜಾಂ ಪಾಷ ವಿರುದ್ಧ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಿವೆ. ಗೂಂಡಾ ಪಟ್ಟಿಯಲ್ಲೂ ಅವರ ಹೆಸರಿತ್ತು. ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾದವರಿಗೆಲ್ಲ ರೌಡಿ ಪಟ್ಟಿ ಕಟ್ಟಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮಾಡಿದ್ದ ಪೊಲೀಸರು ನಿಜಾಂ ಪಾಷಗೆ ರಿಯಾಯಿತಿ ತೋರಿದ್ದರು.
ಈಗ ಅದೇ ಪೊಲೀಸರಿಗೆ ಮುಳುವಾಗಿದೆ. ನಿಜಾಂ ಪಾಷ ವಿರುದ್ಧ ಪ್ರಕರಣ ದಾಖಲಾಗದಂತೆ ಸಾಕಷ್ಟು ಸರ್ಕಸ್ ನಡೆದಿತ್ತಾದರೂ ಪೊಲೀಸರು ಕಡೆಗೂ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ, ಸರ್ಕಾರಿ ಸ್ವತ್ತುಗಳ ನಾಶ, ಕರ್ತವ್ಯನಿರತ ನೌಕರರ ಮೇಲೆ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ಪರ ಸರ್ಕಾರದ ಪ್ರಭಾವಿ ಸಚಿವರನೇಕರು ನಿಂತಿದ್ದಾರೆ ಎನ್ನುವ ಮಾತು ಪೊಲೀಸ್ ವಲಯದಲ್ಲೇ ಕೇಳಿ ಬರುತ್ತಿವೆ. ಅಧೀನ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಪೊಲೀಸರ ಸ್ಥಿತಿಯೇ ಹೀಗಾದರೆ, ರಾಮನಗರದ ಜನತೆ ರಕ್ಷಣೆ ಇನ್ನೆಲ್ಲಿ ಎನ್ನುವ ಚಿಂತೆ ಕಾಡುತ್ತಿದೆ.
ಆಸ್ಪತ್ರೆಯಲ್ಲಿ ಆರೋಪಿ: ಪ್ರಮುಖ ಆರೋಪಿ ನಿಜಾಂ ಪಾಷ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತರೆ 30 ಮಂದಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಒಬ್ಬ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿ, ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ನಿಜಾಂ ಪಾಷ ವಿರುದ್ಧ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಿವೆ. ಗೂಂಡಾ ಪಟ್ಟಿಯಲ್ಲೂ ಅವರ ಹೆಸರಿತ್ತು. ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾದವರಿಗೆಲ್ಲ ರೌಡಿ ಪಟ್ಟಿ ಕಟ್ಟಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮಾಡಿದ್ದ ಪೊಲೀಸರು ನಿಜಾಂ ಪಾಷಗೆ ರಿಯಾಯಿತಿ ತೋರಿದ್ದರು.