ಕನ್ನಡ ಚಿತ್ರರಂಗಕ್ಕೆ ಗ್ರಹಣ ಹಿಡಿದಿದೆ: ರಾಜೇಂದ್ರಸಿಂಗ್ ಬಾಬು
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಗ್ರಹಣ ಹಿಡಿದಿದೆ. ಮತ್ತೆ 70-80ರ ದಶಕದ ಕನ್ನಡ ಚಿತ್ರರಂಗ ಮರುಕಳಿಸಬೇಕಿದೆ ಎಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅಭಿಪ್ರಾಯಪಟ್ಟರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಗಾನಸುಧಾ ಸಂಗೀತ ಶಾಲೆ ಶನಿವಾರ ಸಂಜೆ ಸಂಸ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಿದ್ದ ಕಣ್ಣೇ ಕಾವ್ಯ ವಿ.ಕೆ. ಮೂರ್ತಿ ಸವಿನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಇವತ್ತು ಒಳ್ಳೆಯ ಚಿತ್ರ ಮಾಡಬೇಕೆಂದು ಸ್ಕ್ರಿಪ್ಟ್ ತೊಛರೀಸಿದರೆ, ಹೀರೋಗಳಿಗೆ ಅರ್ಥವೇ ಆಗಲ್ಲ. ಹೀರೋಗಳೇ ಚಿತ್ರಕಥೆ ಆಗಿಬಿಡುತ್ತಿದ್ದಾರೆ. ಇತ್ತ ಅವಸರಕ್ಕೆ ಏನೇನೋ ರೀಲು ಸುತ್ತಿ ಪ್ರೇಕ್ಷಕನಿಗೆ ಚಿತ್ರಹಿಂಸೆ ನೀಡುತ್ತಿದ್ದೇವೆ. ರಿಮೇಕ್ ಮಾಡಿ ಎಂಬ ಒತ್ತಡಗಳೇ ನನಗೆ ಬರುತ್ತಿವೆ ಎಂದು ಅವರು ವಿಷಾದಿಸಿದರು.ತಮ್ಮ ನಿರ್ದೇಶನದ ಹೂವು ಹಣ್ಣು ಚಿತ್ರದ ಛಾಯಾಗ್ರಾಹಕರಾಗಿ ವಿ.ಕೆ. ಮೂರ್ತಿ ತುಂಬಾ ಇಷ್ಟಪಟ್ಟು ಉತ್ತಮ ಕೆಲಸ ಮಾಡಿದ್ದರು. ಇದು ಇವರಿಗೆ ಕನ್ನಡದ ಏಕೈಕ ಚಿತ್ರವಾಗಿತ್ತು. ಆಗ ಅವರಿಗೆ 74 ಆದರೆ ನನಗೆ 54 ವರ್ಷವಾಗಿತ್ತು. ಅವರು ನಮ್ಮ ಮಟ್ಟಕ್ಕೆ ಇಳಿದುಬಿಡುತ್ತಿದ್ದರು. ಇವರಿಂದ ನಾನು ಸಾಕಷ್ಟು ಕಲಿತೆ. ಇದು ನನ್ನ ಪುಣ್ಯ. ಸದಾ ಅವರು ನಮ್ಮ ಮನದಲ್ಲೇ ಇದ್ದಾರೆ ಎಂದು ಬಾಬು ಸ್ಮರಣೆ ಮಾಡಿಕೊಂಡರು.