ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಗರಸಭೆ ಅಧಿಕಾರಿಗಳೇ ಕಲಾಪ್ರಜ್ಞೆ ಮರೆತಿರಾ ?

Srinivasa Murthy VN
Updated On : 20 Apr 2014, 1:10 am

-ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ಇದು ಬೆಂ.ಗ್ರಾ. ಜಿಲ್ಲೆಯಲ್ಲೇ ಅತ್ಯಂತ ವ್ಯವಸ್ಥಿತ ಪುರಭವನ. ಕಲಾ ಮತ್ತು ರಂಗಚಟುವಟಿಕೆಗಳಿಗೆ ಆಶ್ರಯ ತಾಣವಾಗಿದ್ದ ಸ್ಥಳ. ಆದರೆ ಈಗ ನಗರಸಭೆಯ ನಿರ್ಲಕ್ಷ್ಯದಿಂದಾಗಿ ಕಸಪೊರಕೆಗಳ ಉಗ್ರಾಣವಾಗಿದೆ. ಸ್ವಚ್ಛ ಮತ್ತು ನಿರ್ವಹಣೆಯ ಸಮಸ್ಯೆಯಿಂದ ನರಳುತ್ತಿದೆ. ಈ ನರಳಾಟ ಕೊನೆಗಾಣಿಸುವ ಚಿಕಿತ್ಸಕ ಶಕ್ತಿ ಈಗ ಅನಿವಾರ್ಯವಾಗಿದೆ.
ದೊಡ್ಡಬಳ್ಳಾಪುರ ನಗರದಲ್ಲಿ ಒಂದು ಬಯಲುರಂಗಮಂದಿರ ನಿರ್ಮಿಸಬೇಕು ಎಂಬ ಬೇಡಿಕೆ ಗಟ್ಟಿಗೊಳ್ಳುತ್ತಿರುವ ಸಂದರ್ಭದಲ್ಲೇ ಇರುವ ರಂಗಮಂದಿರದ ಸ್ಥಿತಿಗತಿ ಹೇಗಿದೆ ಎಂಬ ವಿಶ್ಲೇಷಣೆ ಮುಖ್ಯವಾಗುತ್ತದೆ. ಎಲ್ಲವನ್ನು ಕೊಟ್ಟುಬಿಡುವ ದೊಡ್ಡ ಕಲಾಪೋಷಕರಂತೆ ಮಾತನಾಡುವ ನಮ್ಮ ಜನಪ್ರತಿನಿಧಿಗಳು, ಸದಾ ಕಾಲ ಜನಹಿತದ ಚಿಂತನೆಯಲ್ಲೇ ಮುಳುಗುವ ಅಧಿಕಾರಿಗಳು ಈ ವಿಚಾರದಲ್ಲಿ ಏನು ಮಾಡುತ್ತಿದ್ದಾರೆ ಎಂಬುದೇ ಯಕ್ಷಪ್ರಶ್ನೆ.
ಕಸದ ಉಗ್ರಾಣ: ಇದು ಸರಿಸುಮಾರು 4 ದಶಕಗಳ ಸುದೀರ್ಘ ಇತಿಹಾಸ ಹೊಂದಿರುವ ಪುರಭವನ. ಕೆಲವಾರು ವರ್ಷ ನಗರಸಭೆ ಕಚೇರಿಯಾಗಿಯೂ ಇದನ್ನು ಬಳಕೆ ಮಾಡಿಕೊಂಡಿದ್ದರು. ನಗರಸಭೆ ಹೊಸ ಕಚೇರಿ ಆರಂಭವಾದ ಮೇಲೆ ಈ ಸ್ಥಳ ಮತ್ತೆ ರಂಗಚಟುವಟಿಕೆಗಳಿಗೆ ವೇದಿಕೆಯಾಗಿತ್ತು. ಆದಾಗ್ಯೂ ನಗರಸಭೆಯ ಕೆಲ ಹಳೆಯ ವಸ್ತುಗಳನ್ನು ಭವನದ ಒಂದೆಡೆ ತುಂಬಿ ಭವನದ ಅಂದಗೆಡಿಸಲಾಗಿತ್ತು. ಇದನ್ನು ಹಲವು ಬಾರಿ ಕಲಾಸಕ್ತರು ವಿರೋಧಿಸಿದರೂ ನಗರಸಭೆ ಕಿವಿಗೊಡಲಿಲ್ಲ. ಇತ್ತೀಚಿನ ದಿನಗಳಲ್ಲಿ ಭವನ ಅಕ್ಷರಶಃ ಹಳೇ ವಸ್ತುಗಳನ್ನು ತುಂಬಿಡುವ ಉಗ್ರಾಣವಾಗಿ ಮಾರ್ಪಾಟಾಗುತ್ತಿದೆ. ಹಲವು ಕಲಾವಿದರ ಕಲಾ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದ್ದ ಈ ವೇದಿಕೆಯ ತುಂಬ ಈಗ ಕಸ ಸಂಗ್ರಹಣಾ ಗಾಡಿಗಳು ಸಾಲಾಗಿ ನಿಂತಿವೆ. ಅಲ್ಲಲ್ಲಿ ಕಸಪೊರಕೆಗಳು, ಧೂಳು, ಸ್ವಚ್ಛತೆಯ ನಿರ್ಲಕ್ಷ್ಯ, ಮುರಿದ ಕುರ್ಚಿ- ಟೇಬಲ್ಲುಗಳು, ನಿರ್ವಹಣೆ ಇಲ್ಲದೆ ಸೊರಗಿರುವ ಭವನಕ್ಕೆ ಸಾಕ್ಷಿಯಾಗಿ ಬಿದ್ದಿವೆ.
ಧೂಳಲ್ಲೇ ಕಾರ್ಯಕ್ರಮ: ಪುರಭವನದಲ್ಲಿ ಇತ್ತೀಚೆಗೆ ಜನ ಕಾರ್ಯಕ್ರಮಗಳನ್ನು ನಡೆಸಲು ಮುಂದೆ ಬರೋದಿಲ್ಲ. ಇದಕ್ಕೆ ಕಾರಣ ಅಸಮರ್ಪಕ ನಿರ್ವಹಣೆ. ಧೂಳಲ್ಲೇ ಕಾರ್ಯಕ್ರಮ ನಡೆಸಬೇಕು. ಕನಿಷ್ಠ ಒಂದು ಸಣ್ಣ ಗ್ರೀನ್‌ರೂಂ ಸೌಲಭ್ಯ ಕೂಡ ಇಲ್ಲ. ಇದು ಸಾಲದೆಂಬಂತೆ ಕೆಟ್ಟ ಶೌಚಾಲಯ ವ್ಯವಸ್ಥೆ. ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ.
ಅನುದಾನ ಏನಾಯ್ತು?: ಪುರಭವನ ನವೀಕರಣ ಕಳೆದ ಹಲವು ವರ್ಷಗಳಿಂದ ನಗರಸಭೆ ಬಜೆಟ್‌ನಲ್ಲಿ ಕಾಣಸಿಗುತ್ತಿರುವ ಅಂಶ. ಪ್ರತಿವರ್ಷ ಕನಿಷ್ಠ ರು. 2 ಲಕ್ಷ ಇದಕ್ಕಾಗಿ ತೆಗೆದಿಡಲಾಗುತ್ತಿದೆ. ಜೊತೆಗೆ ಇದರ ಸಂಪೂರ್ಣ ಆಧುನೀಕರಣಕ್ಕಾಗಿ ಯೋಜನೆ ಸಿದ್ಧವಾಗಿ ವರ್ಷಗಳೇ ಉರುಳಿವೆ. ಈವರೆಗೆ ಕೆಲ ತೇಪೆ ಕೆಲಸಗಳು ಬಿಟ್ಟರೆ ಮತ್ತೇನೂ ಕೆಲಸವಾಗಿಲ್ಲ.
ಅಂತೂ ಹೆಸರು ಗೊತ್ತಾಯ್ತು: ರಾಜ್‌ಕುಮಾರ್ ಕಲಾ ಭವನ ಎಂದು ನಾಮಕರಣ ಮಾಡಿರುವುದು ಇತ್ತೀಚೆಗೆ ನಾಮಫಲಕ ಅಳವಡಿಸಿದಾಗಲೇ ಜನಕ್ಕೆ ತಿಳಿಯಿತು! ನಗರಸಭೆಯ ದಿವ್ಯ ನಿರ್ಲಕ್ಷ್ಯಕ್ಕೆ ಇದೊಂದು ತಾಜಾ ಉದಾಹರಣೆ.

ಕಲಾ ಚಟುವಟಿಕೆಗಳಿಗಷ್ಟೇ ಸೀಮಿತವಾಗಬೇಕಿದ್ದ ಪುರಭವನ ನಗರಸಭೆಯ ನೈರ್ಮಲ್ಯ ವಿಭಾಗದ ಉಗ್ರಾಣವಾಗಿರುವುದು ಸರಿಯಲ್ಲ. ಈಗ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಅಧ್ಯಕ್ಷ- ಉಪಾಧ್ಯಕ್ಷ, ಸದಸ್ಯರಾದಿ ಎಲ್ಲರೂ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.  
- ತ.ನ. ಪ್ರಭುದೇವ್, ನಗರಸಭಾ ಸದಸ್ಯರು, ದೊಡ್ಡಬಳ್ಳಾಪುರ

ಪುರಭವನದ ದುಸ್ಥಿತಿ ನೋಡಿದ್ರೆ ಬೇಸರವಾಗುತ್ತದೆ.ಕಲಾಪ್ರಜ್ಞೆ ಇರುವ ಎಲ್ಲರಿಗೂ ನಗರಸಭೆ ಮಾಡುತ್ತಿರುವ ಅವಮಾನವಿದು. ಕಸನಿರ್ವಹಣೆ, ಕಸ ಸಂಗ್ರಹಣೆ ಸಾಮಗ್ರಿಗಳನ್ನು ಶೇಖರಿಸಿಡಲು ಇದೇ ಜಾಗವಾಗಬೇಕಿಲ್ಲ. ಕಲಾವಂತಿಕೆಯ ಅನಾವರಣದ ವೇದಿಕೆ ಕಲಾವಿದರಿಗೆ, ಕಲಾ ಚಟುವಟಿಕೆಗಳಿಗಷ್ಟೇ ಬಳಕೆಯಾಗಬೇಕು.
-ರಾಜೇಂದ್ರಕುಮಾರ್, ಸಂಚಾಲಕರು,
ದೊಡ್ಡಬಳ್ಳಾಪುರ ಮಿತ್ರ ಬಳಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement