ವೈಭವದ ಸ್ವರ್ಣಾಂಭ ಜಾತ್ರೆ
ನೆಲಮಂಗಲ: ತಾಲ್ಲೂಕಿನ ದಕ್ಷಿಣ ಕಾಶಿ ಶಿವಗಂಗೆಯ ಸ್ವರ್ಣಾಂಭ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ ಉತ್ಸವ ಮೆರವಣಿಗೆ ಸೇರಿದಂತೆ ಬಾರಿ ಪ್ರಮಾಣದ ಮದ್ದು ಗುಂಡುಗಳನ್ನು ಸಿಡಿಸಿ ಸ್ವರ್ಣಾಂಭದೇವಿಯ ಕೃಪೆಗೆ ಭಕ್ತರು ಪಾತ್ರರಾದರು.
ವಿಶೇಷ ತೆಪ್ಪೋತ್ಸವವನ್ನು ಶಿವಗಂಗೆಯ ಬೆಟ್ಟದ ಬುಡದಲ್ಲಿರುವ ದೊಡ್ಡ ಕಲ್ಯಾಣಿಯಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಿದ ತೆಪ್ಪೋತ್ಸವದಲ್ಲಿ ಹೊನ್ನೇನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಚಾಕುವಿನಿಂದ ತಿವಿದು ಕೊಲೆ ಯತ್ನ
ಚನ್ನಪಟ್ಟಣ: ಯುವಕನೊಬ್ಬನ ಕುತ್ತಿಗೆಗೆ ಚಾಕುವಿನಿಂದ ತಿವಿದು ಕೊಲೆ ಯತ್ನ ನಡೆಸಿರುವ ಘಟನೆ ಪಟ್ಟಣದ ಇಂದಿರಾ ಕಾಟೇಜ್ನಲ್ಲಿ ನಡೆದಿದೆ.
ರೂಹಿದ್ ಹಲ್ಲೆಗೊಳಗಾದ ವ್ಯಕ್ತಿ. ಈತನ ಮೇಲೆ ಸೈಪ್ ಮತ್ತು ವಜೀದ್ ಎಂಬುವರು ಹಲ್ಲೆ ನಡೆಸಿದ್ದಾರೆ. ರೂಹಿದ್ ಮತ್ತು ಸೈಪ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿ ತರಕಾರಿ ಕತ್ತರಿಸುತ್ತಿದ್ದ ಚಾಕುವಿನಿಂದ ಆರೋಪಿತ ಸಹೋದರರು ರೂಹಿದ್ ಕುತ್ತಿಗೆಗೆ ತಿವಿದಿದ್ದಾರೆ.
ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ರೂಹಿದ್ನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
24ಕ್ಕೆ ಸಂಪೂರ್ಣ ರಾಮಾಯಣ
ನೆಲಮಂಗಲ: ತಾಲ್ಲೂಕಿನ ತೊಣಚಿನಕುಪ್ಪೆ ಗ್ರಾಮದ ಶ್ರೀ ಅಂಜನೇಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ಇವರ ವತಿಯಿಂದ ಮಾರಮ್ಮದೇವಿ ಜಾತ್ರಾ ಮಹೋತ್ಸವದ ಸವಿ ನೆನಪಿಗಾಗಿ ನಾಟಕ ನಿರ್ದೇಶಕ ಎಂ.ಎನ್. ನಾರಾಯಣಪ್ಪ ಇವರ ನಿರ್ದೇಶನದಲ್ಲಿ ಏ. 24ರಂದು ಸಂಪೂರ್ಣ ರಾಮಾಯಣ ನಾಟಕವನ್ನು ಅಭಿನಯಿಸಲಿದ್ದಾರೆ. ಕಲಾವಿದರಾಗಿರುವ ಕ್ಷೇತ್ರದ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಭಾಗವಹಿಸಲಿದ್ದಾರೆಂದು ಸಂಚಾಲಕ ತೊಣಚಿನಕುಪ್ಪೆ ವೆಂಕಟೇಶ್ ತಿಳಿಸಿದ್ದಾರೆ.
ಫೋಟೋಗ್ರಫಿ ತರಬೇತಿ ಶಿಬಿರ
ಬೆಂಗಳೂರು: ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳಿಯಲ್ಲಿ, ಕುವೆಂಪು ಸಾಹಿತ್ಯದಲ್ಲಿ ಬರುವ ಪರಿಸರದ ಫೋಟೋಗ್ರಫಿ ಮತ್ತು ತರಬೇತಿ ಶಿಬಿರವನ್ನು ಮೇ 1 ರಿಂದ 4 ರವರೆಗೆ ಆಯೋಜಿಸಲಾಗಿದೆ. ಡಿಎಸ್ಎಲ್ಆರ್ ಕ್ಯಾಮರಾ ಉಳ್ಳವರು ಮಾತ್ರ ಶಿಬಿರದಲ್ಲಿ ನೋಂದಾಯಿಸಿಕೊಳ್ಳಬಹುದು. ಶಿಬಿರಾರ್ಥಿಗಳಿಗೆ ಊಟ, ವಸತಿ, ಜೊತೆಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ, ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತದೆ. ಮಾಹಿತಿಗಾಗಿ: ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿಸ್ತರಣಾ ಕೇಂದ್ರ, ಹಿರಿಕೊಡಿಗೆ ಅಂಚೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಮೊ. 94489 00999 ಸಂಪರ್ಕಿಸಿ.
ಸಂಸ್ಕೃತಿ ಬೆಳೆಸುವ ಕಾರ್ಯಕ್ಕೆ ಮುಂದಾಗಿ
ಚನ್ನಪಟ್ಟಣ: ಗ್ರಾಮೀಣ ಪ್ರದೇಶದ ಸಂಸ್ಕೃತಿ ಆಧುನೀಕತೆಯ ಭರದಲ್ಲಿ ನಶಿಸುತ್ತಿದ್ದು, ಜನಪದಕ್ಕೆ ಮೂಲ ಬೇರುಗಳೆನಿಸಿದ ಹಳ್ಳಿಗಳ ತಳ ಸಮುದಾಯಗಳು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವ ಜತೆಗೆ ಸಂಸ್ಕೃತಿಯನ್ನೂ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಕರೆ ನೀಡಿದರು.
ಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಬ್ಬ ಹಾಗೂ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯ ರಂಗಭೂಮಿ ಕಲಾವಿದ ಗೋಪಾಲ್ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಹೊಂಬಾಳೇಗೌಡ, ಟ್ರಸ್ಟ್ನ ಅಧ್ಯಕ್ಷೆ ಶಾಂತಮ್ಮ, ದಲಿತ ಮುಖಂಡ ನಾರಾಯಣಮೂರ್ತಿ, ರಂಗಭೂಮಿ ಕಲಾವಿದರಾದ ತಿಮ್ಮರಾಜು, ವೆಂಕಟೇಶ್, ಕೆಂಪೇಗೌಡ, ನಗರಸಭಾ ಸದಸ್ಯ ವಿಷಕಂಠಮೂರ್ತಿ, ಯುವ ಮುಖಂಡ ಅಪ್ಪಗೆರೆ ಶ್ರೀನಿವಾಸ್, ಕೋಟೆ ಶ್ರೀನಿವಾಸ್ ಹಾಗೂ ಹಲವಾರು ಮುಖಂಡರು ಹಾಜರಿದ್ದರು.