ಆನೆ ದಾಳಿ ತಡೆಗೆ ಹಳಿ ಅಂಕುಶ
- ಶಾಂತ ತಮ್ಮಯ್ಯ
ಬೆಂಗಳೂರು: ಕಾಡಾನೆಗಳ ಹಾವಳಿ ತಪ್ಪಿಸಲು ರೇಲ್ವೆ ಹಳಿಗೆ ಬಳಸುವ ಕಬ್ಬಿಣದ ಸರಳುಗಳನ್ನು ಬಳಸಿ ಕಾಡಿನ ಸುತ್ತ ತಡೆಗೋಡೆ ನಿರ್ಮಿಸಿ ಕೈಸುಟ್ಟುಕೊಂಡ ಆಫ್ರಿಕಾದ ಯೋಜನೆಯನ್ನು ಕರ್ನಾಟಕದ ಅರಣ್ಯ ಇಲಾಖೆ ಅಳವಡಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಅಪಸ್ವರ ಕೇಳಿಬಂದಿದೆ.
ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ರೇಲ್ವೆ ಹಳಿಗಳನ್ನು ಖರೀದಿಸಿ ಅಗತ್ಯ ಸ್ಥಳದಲ್ಲಿ ಫೆನ್ಸಿಂಗ್ (ತಡೆಗೋಡೆ) ಹಾಕಲು ಅರಣ್ಯ ಇಲಾಖೆ ಅಗತ್ಯ ಸಿದ್ಧತೆ ನಡೆಸಿದೆ.
ಆದರೆ, ಆನೆಗಳ ಕಾಟ ತಡೆಯಲು ಆಫ್ರಿಕಾದಲ್ಲಿನ ಅರಣ್ಯ ಸಿಬ್ಬಂದಿ ಅಧಿಕಾರಿಗಳು ಈ ಯೋಜನೆ ಜಾರಿಗೆ ತಂದಿದ್ದರು. ಆದರೆ ಇದು ವಿಫಲವಾಗಿದ್ದು, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಟನ್ಗಟ್ಟಲೆ ತೂಕ ಇರುವ ಕಂಬಿಗಳನ್ನು ಜೋಡಿಸಿ ಅದನ್ನು ತಡೆಗೋಡೆ (ಗ್ರಿಲ್ ಮಾದರಿ) ಹಾಕಲಾಗಿದ್ದರೂ ಆನೆಗಳ ಉಪಟಳ ತಪ್ಪಿಲ್ಲ.
ಈ ನಡುವೆಯೂ ಕರ್ನಾಟಕದ ಕೆಲವು ಹಿರಿಯ ಅಧಿಕಾರಿಗಳು ಆಫ್ರಿಕಾಗೆ ಭೇಟಿ ಮಾಡಿ ಈ ತಡೆಗೋಡೆ ಬಗ್ಗೆ ಮಾಹಿತಿ ಪಡೆದು ಬಂದಿದ್ದಾರೆ. ಅದನ್ನು ರಾಜ್ಯದಲ್ಲೂ ನಿರ್ಮಿಸಲು ಮುಂದಾಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಬಂಡೀಪುರ, ಆನೇಕಲ್, ಸಾವನದುರ್ಗ, ಹಾಸನದ ಆಲೂರು ಸಮೀಪ, ಬೆಂಗಳೂರು ಸುತ್ತಮುತ್ತ, ತುಮಕೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚು ಆನೆ ಹಾವಳಿ ಇರುವ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಕಬ್ಬಿಣದ ಸರಳುಗಳ ಫೆನ್ಸಿಂಗ್ ಹಾಕಲು ಅರಣ್ಯ ಇಲಾಖೆ ನಿರ್ಧರಿಸಿದೆ. ನಾಗರಹೊಳೆ, ಬಂಡೀಪುರದಂತಹ ಪ್ರಮುಖ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಬೇಕಿರುವ ಸಾಮಗ್ರಿಗಳನ್ನು ತಂದು ಹಾಕಲಾಗಿದ್ದು, ಕಾಮಗಾರಿ ಬಾಕಿ ಇದೆ.
ಹೊರಬರದಂತೆ ಗೋಡೆ: ಆನೆ ದಾಳಿ ತಡೆಯಲು ಈಗಾಗಲೇ ಅಗತ್ಯ ಸೂಕ್ಷ್ಮ ಸ್ಥಳಗಳಲ್ಲಿ ಕಂದಕ, ಸೋಲಾರ್ ಫೆನ್ಸಿಂಗ್, ಸಿಮೆಂಟ್ ತಡೆಗೋಡೆಗಳನ್ನು ನಿರ್ಮಿಸಿದ್ದರೂ ಆ ಎಲ್ಲವನ್ನೂ ದಾಟಿ ಕಾಡಾನೆಗಳು ನಾಡಿಗೆ ನುಗ್ಗುವುದಲ್ಲದೆ ರೈತರ ಬೆಳೆಗಳನ್ನು ಹಾಳುಮಾಡುತ್ತವೆ. ಅರಣ್ಯ ಇಲಾಖೆ ಎಷ್ಟೇ ಶತಪ್ರಯತ್ನ ಪಟ್ಟರೂ ಸಹ ಆನೆಗಳ ಹಾವಳಿ ತಪ್ಪಿಲ್ಲ. ಹಾಗಾಗಿ ಆ ಎಲ್ಲಾ ತಡೆಗೋಡೆಗಳನ್ನು ದಾಟಿ ಬಂದರೂ ಸಹ ಈ ಕಬ್ಬಿಣದ ತಡೆಗೋಡೆ ದಾಟಿ ಹೊರಬರಲು ಸಾಧ್ಯವಾಗಬಾರದು ಎಂಬ ಕಾರಣಕ್ಕೆ ಆ ಸ್ಥಳಗಳಲ್ಲಿ ಈ ಹೊಸ ಪದ್ಧತಿ ಅಳವಡಿಸಲು ಮುಂದಾಗಿದೆ.
ಆದರೆ ಇದಕ್ಕೆ ಇಲಾಖೆಯ ಕೆಲ ಅಧಿಕಾರಿಗಳಿಂದಲೇ ಅಪಸ್ವರ ಕೇಳಿಬಂದಿದ್ದು, ಆಫ್ರಿಕಾದಲ್ಲಿ ಈ ಯೋಜನೆ ನೆನೆಗುದಿಗೆ ಬಿದ್ದಿದ್ದು ಇದರಿಂದ ಪ್ರಯೋಜನವಾಗಿಲ್ಲ. ಆದರೂ ಸಹ ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಈ ತಡೆಗೋಡೆ ನಿರ್ಮಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುರಿಯಲು ಆಗದು: ಆನೆಗಳು ಸಲಭವಾಗಿ ಕಂದಕ ದಾಟುತ್ತವೆ. ಸೋಲಾರ್ ವಿದ್ಯುತ್ ಹಾಕಿ ಆನೆಗಳಿಗೆ ಕರೆಂಟ್ ಶಾಕ್ ಹೊಡೆಯುವಂತೆ ಮಾಡಿದರೂ ಅವುಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸುತ್ತವೆ. ತಮ್ಮ ದಂತದಲ್ಲಿ ತಂತಿಯನ್ನು ಕಿತ್ತು ಮುಂದೆ ದಾಟುತ್ತವೆ. ಇನ್ನು ಅಡ್ಡಗೋಡೆಯನ್ನು ಒಡೆಯುವ ಶಕ್ತಿಯೂ ಅವುಗಳಿಗಿದೆ. ಆದರೆ, ಈ ಕಂಬಿಗಳನ್ನು ನೆಲದಲ್ಲಿ 2ರಿಂದ 3 ಅಡಿ ನೆಡಲಾಗುತ್ತದೆ. ನಂತರ ಅವುಗಳಿಗೆ ಅಡ್ಡಲಾಗಿ ಮತ್ತಷ್ಟು ಕಂಬಿಗಳನ್ನು ಹಾಕಲಾಗುತ್ತದೆ. ಆ ಕಂಬಿಗಳು ಗಟ್ಟಿ ಇರುವುದರಿಂದ ಹಾಗೂ ಜಾಲರಿಯಂತೆ ಅವುಗಳನ್ನು ಜೋಡಿಸುವುದರಿಂದ ಸುಲಭವಾಗಿ ಕಂಬಿಗಳನ್ನು ಕೀಳಲು ಅವುಗಳಿಗೆ ಸಾಧ್ಯವಿಲ್ಲ. ಹಾಗೆ ಮಾಡಲು ಮುಂದಾದರೆ ಅವುಗಳಿಗೆ ಹಾನಿಯಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ಹಾಗಾಗಿ ರೇಲ್ವೇ ಹಳಿಗಳಿಗೆ ಬಳಸುವ ಕಂಬಿ ಬಳಸಿ ತಡೆಗೋಡೆ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
212 ಕೋಟಿ ವೆಚ್ಚದಲ್ಲಿ ತಡೆಗೋಡೆ
ಆನೆಗಳು ಹೊರಬರುವ ಸೂಕ್ಷ್ಮ ಸ್ಥಳ ಗುರುತಿಸಿ ಅಲ್ಲಿ ರೇಲ್ವೆ ಕಂಬಿ ಹಾಕಿ 212 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಹಣ ಬಿಡುಗಡೆ ಆಗಿಲ್ಲ. ಆನೆಗಳು ಹೊರಬರುವ ಅಪಾಯಕಾರಿ ಸ್ಥಳ/ಪ್ರದೇಶಗಳನ್ನು ಗುರುತಿಸಿ ಸುಮಾರು 300 ರಿಂದ 350 ಕಿ.ಮೀ ಅರಣ್ಯ ಸುತ್ತಳತೆ ವ್ಯಾಪ್ತಿಯಲ್ಲಿ ಈ ಕಂಬಿಗಳನ್ನು. ನದಿ, ಹಳ್ಳ, ಕೊಳ್ಳ ಇರುವ ಕಡೆ, ಕಪ್ಪುಮಣ್ಣು ಇರುವ ಕಡೆ, ತಡೆಗೋಡೆ ಹಾಳಾಗಿರುವ ಪ್ರದೇಶಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಅಲ್ಲಿ ಬೇರೆ ತಡೆಗೋಡೆ ಸಾಧ್ಯವಿಲ್ಲ ಹಾಗಾಗಿ ಅಲ್ಲಿ ಕಡ್ಡಾಯವಾಗಿ ನಿರ್ಮಿಸಲಾಗುತ್ತದೆ. ಸದ್ಯ ನಾಗರಹೊಳೆ ಹಾಗೂ ಬಂಡೀಪುರ ಪ್ರದೇಶದಲ್ಲಿ 2 ಕಡೆ ಪ್ರಾಯೋಗಿಕವಾಗಿ ಈ ತಡೆಗೋಡೆ ಪ್ರಕ್ರಿಯೆ ಆರಂಭಕ್ಕೆ ಸಿದ್ಧತೆ ನಡೆದಿವೆ. ಉಳಿದಂತೆ ಅಂತಹ ಪ್ರದೇಶಗಳನ್ನು ಗುರುತಿಸುವಂತೆ ಸಂಬಂಧಪಟ್ಟ ಎಲ್ಲಾ ಆರ್ಎಫ್ಒಗಳಿಗೆ ಸೂಚಿಸಲಾಗಿದ್ದು, ಇನ್ನು 10ರಿಂದ 15 ದಿನಗಳಲ್ಲಿ ವರದಿ ಬರಲಿದೆ. ವರದಿ ಬಂದ ನಂತರ ಸರ್ಕಾರದ ಗಮನಕ್ಕೆ ತಂದು ಮುಂದಿನ ಕೆಲಸ ಆರಂಭಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾಡಾನೆಗಳ ಹಾವಳಿ ತಪ್ಪಿಸಲು ಇದೊಂದು ಪ್ರಯತ್ನ ಮಾಡಲಾಗುತ್ತಿದೆ. ತಡೆಗೋಡೆ ನಿರ್ಮಿಸಲು ಈಗಾಗಲೇ ಅಗತ್ಯ ಸಾಮಗ್ರಿಗಳನ್ನು ಖರೀದಿಸಲಾಗಿದ್ದು, ಕೆಲಸ ಆರಂಭವಾಗುವುದು ಬಾಕಿ ಇದೆ.
- ವಿನಯ್ ಲೂತ್ರ,
ಪಿಸಿಸಿಎಫ್, ವೈಲ್ಡ್ಲೈಫ್