ರಸ್ತೆ ಅಭಿವೃದ್ಧಿಗೆ ನಬಾರ್ಡ್ನಿಂದ 1 ಕೋಟಿ ಮಂಜೂರು
ಕೆ.ಆರ್. ನಗರ: ಹುಣಸೂರು ರಸ್ತೆಯಿಂದ ಚನ್ನಪ್ಪನಕೊಪ್ಪಲು- ಅಡಗನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ನಬಾರ್ಡ್ ವತಿಯಿಂದ ಒಂದು ಕೋಟಿ ರು. ಮಂಜೂರಾಗಿದ್ದು, ಮುಂದಿನ ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ತಾಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ ಚುನಾಯಿತನಾದ ನಂತರ ತಾಲೂಕಿನ ಬಹುತೇಕ ಗ್ರಾಮಾಂತರ ಪ್ರದೇಶಗಳ ಸಂಪರ್ಕ ರಸ್ತೆಗಳನ್ನು ಪೂರ್ಣಗೊಳಿಸಿದ್ದು, ವರ್ಷಾಂತ್ಯದೊಳಗೆ ಎಲ್ಲ ರಸ್ತೆಗಳ ಕಾಮಗಾರಿಗಳನ್ನು ಮಾಡಿಸುವುದಾಗಿ ತಿಳಿಸಿದರು.
ಜತೆಗೆ ಬ್ಯಾಡರಹಳ್ಳಿಯಿಂದ- ಕೆ.ಆರ್.ನಗರ ಸಂಪರ್ಕ ರಸ್ತೆಗೆ 2 ಕೋಟಿ ಮಂಜುರಾಗಿದ್ದು, ಆ ಕಾಮಗಾರಿಯನ್ನು ಆರಂಭಿಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ ಎಂದ ಶಾಸಕರು, ಕಾಮಗಾರಿಗಳು ನಡೆಯುವಾಗ ಸಾರ್ವಜನಿಕರು ಪರಿಶೀಲಿಸಿ ಗುಣಮಟ್ಟದ ಬಗ್ಗೆ ಅನುಮಾನ ಬಂದರೆ ತಮಗೆ ದೂರು ನೀಡಿ ಎಂದು ಹೇಳಿದರು. ತಾಪಂ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಗ್ರಾಪಂ ಅಧ್ಯಕ್ಷ ರಂಗೇಶ್ಕುಮಾರ್, ಸದಸ್ಯರಾದ ಮಹದೇವ್, ಶಿವಣ್ಣ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಲಿಂಗಮೂರ್ತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್, ಮುಖಂಡರಾದ ಎಚ್.ಕೆ. ಕೀರ್ತಿ, ಶ್ರೀನಿವಾಸ್, ಚನ್ನಪ್ಪ, ಲೋಕೇಶ್, ನಾಗಣ್ಣ, ಈರಣ್ಣನಾಯಕ ಇದ್ದರು.