ಸೇತುವೆ ಕೆಳಗೆ ಚಿರತೆ ಶವ ಪತ್ತೆ
ಎಚ್.ಡಿ. ಕೋಟೆ: ತಾಲೂಕು ಮಳಲಿ ಗ್ರಾಮದ ಬಳಿಯ ಮೈಸೂರು ಮಾನಂದವಾಡಿ ಅಂತರ ರಾಜ್ಯ ರಸ್ತೆಯಲ್ಲಿ ಬರುವ ಸೇತುವೆ ಕೆಳಗೆ ಅನುಮಾನಸ್ಪದವಾಗಿ ಸುಮಾರು ಒಂದೂವರೇ ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟಿರುವುದು ಪತ್ತೆಯಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದ ಅಂಚಿನಲ್ಲಿ ಈ ಘಟನೆ ನಡೆದಿದೆ. ಚಿರತೆಯ ಮುಂದಿನ ಬಲಗಾಲಿನ ಅಂಗೈ ಬಳಿ ಗಾಯವಾಗಿದೆ. ಗಾಯ ಹಲವಾರು ದಿನಗಳ ಹಿಂದೆ ಆಗಿರಬಹುದು ಎಂದು ಮೇಲು ನೋಟಕ್ಕೆ ಕಂಡುಬಂದಿದೆ. ಚಿರತೆ ಬಾಯಿ ಮತ್ತು ಮೂಗಿನಲ್ಲಿ ರಕ್ತ ಸೋರಿದೆ. ಚಿರತೆ ದೇಹದ ಮೇಲೆ ಚಾಕು ಅಥವಾ ಇತರೆ ಯಾವುದೇ ಆಯುಧದಿಂದ ಕತ್ತರಿಸಿರುವ ಗುರುತು ಕಂಡು ಬಂದಿದೆ.
ಸ್ಥಳಕ್ಕೆ ಅಂತರಸಂತೆ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಪ್ರಾದೇಶಿಕ ಅರಣ್ಯ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಅರಣ್ಯ ವಲಯಾಧಿಕಾರಿ ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಚಿರತೆ ಸತ್ತು ಬಿದ್ದಿರುವ ಸ್ಥಳ, ವನ್ಯಜೀವಿ ವಲಯದ ಅಂಚಿನ ಗ್ರಾಮದಲ್ಲಿ ಈ ಘಟನೆ ನಡೆದಿರುವುದರಿಂದ ಅರಣ್ಯ ವಲಯ ಅರಣ್ಯಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.
ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಉಮಾಶಂಕರ್ ಮಾತನಾಡಿ, ಚಿರತೆ ಮರಿ ಶುಕ್ರವಾರ ಬೆಳಗ್ಗೆ ಸತ್ತಿದೆ. ಮುಖ್ಯರಸ್ತೆಯಲ್ಲಿರುವ ಸೇತುವೆ ಕೆಳಗೆ ಮೃತಪಟ್ಟಿರುವುದರಿಂದ ಯಾರ ಕಣ್ಣಿಗೂ ಕಂಡುಬಂದಿಲ್ಲ. ಶನಿವಾರ ವಾಸನೆ ಬಂದ ಹಿನ್ನೆಲೆ ಹತ್ತಿರದ ಗ್ರಾಮಸ್ಥರು ನೋಡಲಾಗಿ ಚಿರತೆ ಸತ್ತು ಬಿದ್ದಿರುವುದು ಕಂಡು ಬಂದಿದೆ. ಚಿರತೆಯ ಮುಂದಿನ ಬಲಗಾಲಲ್ಲಿ ಮೂಳೆ ಮುರಿದಿದೆ. ಅಲ್ಲಿ ತೀವ್ರ ಗಾಯವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ಚಿರತೆ ಹೊಟ್ಟೆಯಲ್ಲಿ ಯಾವುದೇ ಆಹಾರ ಸೇವಿಸಿದ ಕುರುಹುಗಳು ಕಂಡು ಬಂದಿಲ್ಲ. ಆದರೆ ಚಿರತೆ ದೇಹದ ಮೇಲೆ ಚಾಕು ಅಥವಾ ಇತರೆ ಆಯುಧದಿಂದ ಕತ್ತರಿಸಿರುವ ಗುರುತು, ಚಿರತೆ ಸತ್ತ ನಂತರ ಯಾರೋ ದುಷ್ಕರ್ಮಿಗಳು ಮಾಡಿರಬಹುದು ಎಂದು ಶಂಕಿಸಲಾಗಿದೆ.
ಅಂತರಸಂತೆ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಮಾತನಾಡಿ, ಚಿರತೆಯ ಕಾಲಿನಲ್ಲಿ ಆಗಿರುವ ತೀವ್ರ ಗಾಯದಿಂದ ಅದಕ್ಕೆ ಬೇಟೆ ಆಡಲು ಸಾಧ್ಯವಾಗಿಲ್ಲ. ಹಾಗಾಗಿ ಅದು ಮೃತಪಟ್ಟಿರಬಹುದು. ಆದರೆ ಚಿರತೆ ಬಾಯಿ ಮತ್ತು ಮೂಗಿನಲ್ಲಿ ರಕ್ತ ಸೋರಿರುವುದು. ದೇಹದ ಮೇಲೆ ಹರಿತವಾದ ಆಯುಧದಿಂದ ಆಗಿರುವ ಗಾಯ ನೋಡಿದರೆ, ಚಿರತೆಯನ್ನು ಮಾಂಸದ ಆಸೆಗೆ ಸಾಯಿಸಿ, ಕೊನೆಗೆ ಭಯದಿಂದ ಚಿರತೆ ದೇಹವನ್ನು ಸೇತುವೆ ಕೆಳಗೆ ತಂದು ಹಾಕಿ ಹೋಗಿರಬಹುದು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಶಂಕಿಸಿದ್ದಾರೆ.