ಜಿಲ್ಲಾ ಕೇಂದ್ರಕ್ಕಾಗಿ ಎಸಿ ಕಚೇರಿಗೆ ಮುತ್ತಿಗೆ ಇಂದು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಆ.4ರ ಸೋಮವಾರ ಬೆಳಗ್ಗೆ 10 ಗಂಟೆಗೆ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಮತ್ತು ಧರಣಿ ಕಾರ್ಯಕ್ರಮ ನಡೆಯಲಿದೆ. ಸತತ ಹೋರಾಟಗಳು ನಡೆದರೂ ಎಚ್ಚೆತ್ತುಕೊಳ್ಳದ ಸರ್ಕಾರದ ವಿರುದ್ಧ ಮತ್ತು ಎಲ್ಲ ಹಂತಗಳಲ್ಲೂ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳವಾಗಿರುವ ಮತ್ತು ಜಿಲ್ಲೆಯ ಏಕೈಕ ಉಪವಿಭಾಗ ಕೇಂದ್ರವೂ ಆಗಿರುವ ದೊಡ್ಡಬಳ್ಳಾಪುರದಲ್ಲಿ ಕೂಡಲೇ ಜಿಲ್ಲಾಧಿಕಾರಿಗಳ ಕಚೇರಿ ಕಾರ್ಯಾರಂಭ ಮಾಡಬೇಕು. ನಗರ ಕೇಂದ್ರ ಅಥವಾಸಮೀಪದ ಪ್ರದೇಶದಲ್ಲಿ ಜಿಲ್ಲಾಡಳಿತ ಸ್ಥಳಾಂತರವಾಗಬೇಕು. ಅವೈಜ್ಞಾನಿಕವಾಗಿ ರಾಜಕೀಯ ಉದ್ದೇಶಗಳ ಮೇಲಾಟಕ್ಕೆ ವೇದಿಕೆಯಾಗಬಾರದು ಎಂದು ಆಗ್ರಹಿಸಿಈ ಹೋರಾಟ ನಡೆಸಲಾಗುತ್ತಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಮಾರಕಾಸ್ತ್ರದಿಂದ ಹಲ್ಲೆ ನಡೆಸಿ 2.3 ಲಕ್ಷ ಲೂಟಿ
ಬೆಂಗಳೂರು: ಎಲ್‌ಪಿಜಿ ಗ್ಯಾಸ್ ಏಜೆನ್ಸಿ ಮಾಲೀಕನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ದುಷ್ಕರ್ಮಿಗಳು 2.3 ಲಕ್ಷ ಹಣ ದೋಚಿರುವ ಘಟನೆ ಕಾಮರಾಜ ರಸ್ತೆ ಜಂಕ್ಷನ್ ದೋಭಿಘಾಟ್ ಬಳಿ ಸಂಭವಿಸಿದೆ. ಅಖಿಲ್ ಗೌಡ ಹಲ್ಲೆಗೊಳಗಾದವರು. ಆರ್ಮ್‌ಸ್ಟ್ರಾಂಗ್ ರಸ್ತೆಯಲ್ಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿರುವ ಅಖಿಲ್ ಗೌಡ ಶನಿವಾರ ವಹಿವಾಟಿನಿಂದ ಸಂಗ್ರಹವಾದ ಹಣವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ರಾತ್ರಿ 11.30ರ ಸುಮಾರಿಗೆ ದ್ವಿಚಕ್ರವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಆರ್ಮ್‌ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಹಣದ ಬ್ಯಾಗ್ ನೀಡುವಂತೆ ಕೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ಇಂದು
ದೇವನಹಳ್ಳಿ: ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜನ್ನು ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 4 ತಾಲೂಕುಗಳ ಭಾರತೀಯ ಜನತಾ ಪಕ್ಷ ಕಾರ್ಯಕರ್ತರು ಮಾಜಿ ಶಾಸಕ ಜಿ. ಚಂದ್ರಣ್ಣ ಹಾಗೂ ಬಿ.ರಾಜಣ್ಣ ಅವರ ನೇತೃತ್ವದಲ್ಲಿ ಇಲ್ಲಿನ ಬೆಸ್ಕಾಂ ಕಚೇರಿ ಬಳಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದೇವನಹಳ್ಳಿ ನಗರ ಬಿಜೆಪಿ ಅಧ್ಯಕ್ಷ ಎಸ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಗಾಯಗೊಂಡ ಚಿರತೆ ಮೋರಿಯಲ್ಲಿ ಪತ್ತೆ
ಮಾಗಡಿ: ಗಾಯಗೊಂಡ ಚಿರತೆಯೊಂದು ತಾಲೂಕಿನ ಕತ್ರಿಘಟ್ಟ ಗ್ರಾಮದ ಮೋರಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡ ಚಿರತೆಯನ್ನು ಚಿಕಿತ್ಸೆಗಾಗಿ ಭನ್ನೇರುಘಟ್ಟ ಪಶು ಆಸ್ಪತ್ರೆಗೆ ಕೊಂಡೊಯ್ದರು. ಕಾಡಿನ ಚಿರತೆ ಬೇಟೆಗೆ ಬೇಟಿಗಾರರು ಒಡ್ಡಿದ್ದ ಬಲೆಗೆ ಸಿಲುಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಿರತೆಯ ಸೊಂಟದ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ. ಆ ವೇಳೆ ನೋವಿನಿಂದ ನರಳುತ್ತಾ ಕತ್ರಿಘಟ್ಟ ಗ್ರಾಮದ ಮೋರಿ ಬಳಿ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದರು. ಈ ಸಂಬಂಧ ಚಿರತೆಗೆ ತರ್ತು ಚಿಕಿತ್ಸೆ ಲಭಿಸಿದ್ದರಿಂದ ಚೇತರಿಕೊಳ್ಳುತ್ತಿದೆ ಎಂದು ತಿಳಿಸಿದರು.
ಲಾರಿ ಪಲ್ಟಿ 15 ಮಂದಿಗೆ ಗಾಯ
ಮಾಗಡಿ: ಲಾರಿ ಪಲ್ಟಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕಲ್ಯಾ ಬಳಿ ನಡೆದಿದೆ. ಗಾಯಾಳುಗಳು ಮಾಗಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ 3 ಮಂದಿ ಗಾಯಾಳುಗಳು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಜಲಗೇರದಮ್ಮ ದೇವಾಲಯಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.
ಮನ ರಂಜಿಸಿದ ಧನ್ಯ ಹಾಡುಗಾರಿಕೆ
ದೊಡ್ಡಬಳ್ಳಾಪುರ: ಇಲ್ಲಿನ ಸುಸ್ವರ ಟ್ರಸ್ಟ್ ವತಿಯಿಂದ ಸಂಗೀತ ಕಾರ್ಯಕ್ರಮ ಚೌಡೇಶ್ವರಿಗುಡಿ ಬೀದಿಯಲ್ಲಿರುವ ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿದುಷಿ ಧನ್ಯ ದಿನೇಶ್ ಅವರ ಹಾಡುಗಾರಿಕೆ ನಡೆಯಿತು. ಕರ್ನಾಟಕ ಸಂಗೀತದ ವಿವಿಧ ಮಟ್ಟುಗಳನ್ನು ಯಶಸ್ವಿಯಾಗಿ ಪ್ರಸ್ತುತ ಪಡಿಸಿದ ಅವರು ದಾಸಸಾಹಿತ್ಯದ ಹಲವು ಶ್ರೇಷ್ಟ ಕೀರ್ತನೆಗಳನ್ನು ಹಾಡುವ ಮೂಲಕ ಸಂಗೀತಾಸಕ್ತರನ್ನು ರಂಜಿಸಿದರು. ಪ್ರಬುದ್ಧ ಗಾಯನ ಮತ್ತು ಉತ್ತಮ ಅಭಿವ್ಯಕ್ತಿಯೊಂದಿಗೆ ಕಚೇರಿ ಯಶಸ್ವಿಯಾಗಿ ಮೂಡಿಬಂತು. ವಿದ್ವಾನ್ ಎ.ಆರ್. ಕೃಷ್ಣಮೂರ್ತಿ(ಪಿಟೀಲು), ವಿದ್ವಾನ್ ಬಾಲಾಜಿ ಪ್ರವೀಣ್ (ಮೃದಂಗ) ವಾದ್ಯ ಸಹಕಾರ ನೀಡಿದರು. ಸುಸ್ವರ ಟ್ರಸ್ಟ್(ರಿ)ನ ಪದಾಧಿಕಾರಿಗಳು, ದೊಡ್ಡಬಳ್ಳಾಪುರದ ಹತ್ತಾರು ಸಂಗೀತಾಸಕ್ತರು ಭಾಗವಹಿಸಿದ್ದರು. ಸುಸ್ವರ ಟ್ರಸ್ಟ್‌ನ ಪದಾಧಿಕಾರಿಗಳು, ಸಂಗೀತಾಸಕ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿರತೆ ದಾಳಿ: ಗಾಯ
ತಾಲೂಕಿನ ಶಂಭುದೇವನಹಳ್ಳಿ ಗ್ರಾಮ ಬಳಿ ಮೇಕೆ ಮೇಯಿಸಲು ಹೋಗಿದ್ದ ರೈತ ಹನುಮಂತರಾಜು ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವ ಮತ್ತೊಂದು ಪ್ರಕರಣ ಸಹ ನಡೆದಿದೆ. ಗಾಯಳು ಮಾಗಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅರಣ್ಯಾಧಿಕಾರಿ ತಿಳಿಸಿದರು.
ಕಲಾವಿದರ ರಸಸಂಜೆ ಕಾರ್ಯಕ್ರಮ ಇಂದು
ದೊಡ್ಡಬಳ್ಳಾಪುರ: ಬೆಂಗಳೂರಿನ ಕುಂಬಳಗೋಡು ಬಳಿಯ ಕಲಾವಿದರ ಆಶ್ರಯದ ವಿಶ್ವ ಕಲಾಧಾಮ(ರಿ) ನೇತೃತ್ವದಲ್ಲಿ ಜೂ.ರಾಜ್‌ಕುಮಾರ್ ಮತ್ತು ಅನೇಕ ಕಲಾವಿದರಿಂದ ರಸಸಂಜೆ ಕಾರ್ಯಕ್ರಮ ಇಲ್ಲಿನ ಒಕ್ಕಲಿಗರ ಭವನದಲ್ಲಿ ಆ.4ರ ಸೋಮವಾರ ಸಂಜೆ 6 ಗಂಟೆಗೆ ನಡೆಯಲಿದೆ. ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಪಿಎಂಸಿ ಅಧ್ಯಕ್ಷ ತಿ.ರಂಗರಾಜು, ಜಿ.ಪಂ ಮಾಜಿ ಅಧ್ಯಕ್ಷ ಸಿ.ಡಿ. ಸತ್ಯನಾರಾಯಣಗೌಡ, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚುಂಚೇಗೌಡ, ನಗರಸಭೆ ಅಧ್ಯಕ್ಷೆ ಶಂಶುನ್ನೀಸಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
4 ಟನ್ ಶ್ರೀಗಂಧ ವಶ
ಬೆಂಗಳೂರು: ಲಾರಿಯಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದ್ದ 4 ಟನ್ ಶ್ರೀಗಂಧವನ್ನು ಸರ್ಜಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕ ಲಾರಿ ನಿಲ್ಲಿಸಿ ಕತ್ತಲೆಯಲ್ಲಿ ಪರಾರಿಯಾಗಿದ್ದಾನೆ. ಲಾರಿ ಕೋಲಾರದ ಮಾಲೂರಿನ ಕಡೆಯಿಂದ ತಮಿಳುನಾಡು ಕಡೆ ಹೋಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.