ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 15 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ತಪಾಸಣೆ ನಡೆಸಿದ ನಂತರ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ, ಯಶವಂತಪುರ, ದಾಸರಹಳ್ಳಿ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಪೀಣ್ಯದಲ್ಲಿ 8 ಸಾವಿರ ಕೈಗಾರಿಕೆಗಳಿವೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕುಂಠಿತವಾಗಿದ್ದು, ಕೈಗಾರಿಕೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಕೈಗಾರಿಕಾ ಸಂಘ ದೂರಿದೆ.
ಹೆಚ್ಚಿನ ಕಡೆಗಳಲ್ಲಿ ಒಳಚರಂಡಿ ಕಾಮಗಾರಿ, ನೀರಿನ ಸಂಪರ್ಕಕ್ಕಾಗಿ ಜಲಮಂಡಳಿ ರಸ್ತೆ ಅಗೆದಿದ್ದು, ವಾಹನಗಳ ಓಡಾಟ ಕಷ್ಟವಾಗಿದೆ. ರಸ್ತೆ ಕಾಮಗಾರಿಗೆ ಶೀಘ್ರದಲ್ಲಿ 15 ಕೋಟಿ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಮೂರು ವಿಧಾನಸಭಾ ಕ್ಷೇತ್ರಗಳ ಶಾಸಕರು ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿದ್ದಾರೆ. ಈಗಾಗಲೇ 30 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆದಿವೆ.
ಆದರೆ ಜಲಮಂಡಳಿ ಕಾಮಗಾರಿಯಿಂದ ಹಾಳಾದ ರಸ್ತೆಗಳನ್ನು ಮತ್ತೆ ಸರಿಪಡಿಸಲಾಗುವುದು. ಎನ್ಟಿಟಿಎಫ್ ವೃತ್ತದಿಂದ ಪೀಣ್ಯ ಕೈಗಾರಿಕಾ ಪ್ರದೇಶದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದ್ದು, ಸಚಿವ ಸಂಪುಟದ ಅನುಮೋದನೆ ಪಡೆಯಲು ಮಾತ್ರ ಬಾಕಿಯಿದೆ ಎಂದರು.
ಬಿಎಂಟಿಸಿ ಬಸ್ಸುಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಡಿಪೋ ಹಿಂಭಾಗದಲ್ಲಿ ಬಸ್ಸು ನಿಲ್ದಾಣ ನಿರ್ಮಿಸಲಾಗುವುದು.
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ ನಿವೇಶನದಲ್ಲಿ ನಿಲ್ದಾಣ ನಿರ್ಮಿಸಲು ಪರಿಶೀಲಿಸಲಾಗುವುದು ಎಂದರು.
ರಾಜಾಕಾಲುವೆ ಒತ್ತುವರಿ: ಪೀಣ್ಯದ ರಾಜಕಾಲುವೆಗಳನ್ನು ಕೆಲವರು ಒತ್ತುವರಿ ಮಾಡುತ್ತಿದ್ದು, ಕಾಲುವೆಗೆ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಹರಿಬಿಡಲಾಗುತ್ತಿದೆ. ಕೆರೆಗಳಿಗೂ ತ್ಯಾಜ್ಯ ಬಿಡಲಾಗಿದೆ ಎಂದು ತಪಾಸಣೆ ವೇಳೆ ಸಾರ್ವಜನಿಕರು ದೂರಿದರು.
ಒತ್ತುವರಿ ಪ್ರಕರಣಗಳನ್ನು ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದ ರಾಮಲಿಂಗಾರೆಡ್ಡಿ, ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಅವರಿಗೆ ಸೂಚಿಸಿದರು.
ಕೆರೆಗಳಿಗೆ ವಿಷ ತ್ಯಾಜ್ಯ ಬಿಡುವ ಬಗ್ಗೆ ಪರಿಶೀಲನೆ ನಡೆಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಲಾಗುವುದು ಎಂದರು.
ಶಾಸಕರಾದ ಎಸ್. ಮುನಿರಾಜು, ಮುನಿರತ್ನನಾಯ್ಡು, ಮೇಯರ್ ಕಟ್ಟೆ ಸತ್ಯನಾರಾಯಣ, ಉಪ ಮೇಯರ್ ಇಂದಿರಾ ಸೇರಿದಂತೆ ಮತ್ತಿತರರು ಹಾಜರಿದ್ದರು.