ಬೆಂಗಳೂರು: ಪರೋಟ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಸಹೋದ್ಯೋಗಿಗಳೇ ಕೊಲೆಗೈದು ಮೂಟೆಕಟ್ಟಿ ಬಿಸಾಡಿ ಪರಾರಿಯಾಗಿರುವ ಘಟನೆ ಕಮಲಾ ನಗರದಲ್ಲಿ ನಡೆದಿದೆ. ತಮಿಳುನಾಡಿನ ಜೋಲಾರಪೇಟೆ ಮೂಲದ ಅಜ್ಜು (26) ಕೊಲೆಯಾದ ದುರ್ದೈವಿ. ಇಲ್ಲಿನ ಶಂಕರ್ನಾಗ್ ಬಸ್ ನಿಲ್ದಾಣದ ಸಮೀಪ ಮನೆ ಬಾಡಿಗೆ ತೆಗೆದುಕೊಂಡಿದ್ದ ಕುಪ್ಪಣ್ಣ ಎಂಬುವರು, ಅಜ್ಜು, ಬಾಬು ಹಾಗೂ ಶ್ರೀನಿವಾಸ್ ಎಂಬುವರನ್ನು ಕೆಲಸಕ್ಕೆ ಇಟ್ಟುಕೊಂಡು ಪರೋಟ ತಯಾರಿಕೆಯಲ್ಲಿ ತೊಡಗಿದ್ದರು.
ತಯಾರಿಸಿದ ಪರೋಟಗಳನ್ನು ಪ್ಯಾಕ್ ಮಾಡಿ ವಿವಿಧ ಹೊಟೇಲ್ಗಳಿಗೆ ಸರಬರಾಜು ಮಾಡುತ್ತಿದ್ದರು.ಭಾನುವಾರ ಬೆಳಗ್ಗೆ ಮನೆಯಲ್ಲಿ ಅಜ್ಜು ಇರಲಿಲ್ಲ. ಬಾಬು ಹಾಗೂ ಶ್ರೀನಿವಾಸ್ ಮಾತ್ರ ಕೆಲಸ ಮಾಡುತ್ತಿದ್ದರು. ಅಜ್ಜು ಕಾಣಿಸದ ಕಾರಣ ಕುಪ್ಪಣ್ಣ, ಇಬ್ಬರನ್ನು ಪ್ರಶ್ನಿಸಿದ್ದಾರೆ. ಆಗ ಅಜ್ಜು ಹೊರಗೆ ಹೋಗಿರಬಹುದು ಎಂದು ತಿಳಿಸಿದ್ದಾರೆ. ಮತ್ತೆ ಮಧ್ಯಾಹ್ನ ಮೊಬೈಲ್ ಫೋನ್ಗೆ ಕರೆ ಮಾಡಿದಾಗ ಊರಿಗೆ ಹೋಗಿರಬಹುದು ಎಂದು ಹೇಳಿದ್ದಾರೆ.
ಹೀಗಾಗಿ ಕುಪ್ಪಣ್ಣ ಅವರು ಸೋಮವಾರ ಬೆಳಗ್ಗೆ ಕಮಲಾನಗರದ ಪರೋಟ ತಯಾರಿಸುತ್ತಿದ್ದ ಮನೆಗೆ ಬಂದಿದ್ದರು. ಆದರೆ, ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಹೀಗಾಗಿ ತಮ್ಮ ಬಳಿ ಇದ್ದ ಮತ್ತೊಂದು ಬೀಗದ ಕೈ ಬಳಸಿ ಒಳಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಕೆಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೂಟೆಯೊಂದರ ಮೇಲೆ ಮೈದಾ ಹಿಟ್ಟು ಚೆಲ್ಲಾಡಿದ್ದು ಅದರ ಮೇಲೆ ಪೇಪರ್ ಹೊದಿಸಲಾಗಿತ್ತು. ಮೂಟೆ ಬಳಿ ತೆರಳಿದಾಗ ಕೆಟ್ಟ ವಾಸನೆ ಬಂದ ಹಿನ್ನೆನೆಯಲ್ಲಿ ಪೇಪರ್ ಸರಿಸಿದ ಕುಪ್ಪಣ್ಣ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿಗದ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೂಟೆ ಬಿಚ್ಚಿದಾಗ ಅಜ್ಜು ಶವ ಪತ್ತೆಯಾಗಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಶ್ಚಿಮ ವಿಭಾಗ ಡಿಸಿಪಿ ಲಾಭೂರಾಮ್, ಎರಡು ದಿನಗಳ ಹಿಂದೆಯೇ ಕೊಲೆ ನಡೆದಿರುವ ಶಂಕೆ ಇದೆ. ಆದರೆ, ಹೇಗೆ ಕೊಲೆ ನಡೆದಿದೆ ಎನ್ನುವುದು ಗೊತ್ತಾಗಿಲ್ಲ. ಹೀಗಾಗಿ ಶವಪರೀಕ್ಷೆ ವರದಿ ಬಂದ ನಂತರ ವಿಷಯ ತಿಳಿದು ಬರಲಿದೆ. ಈತನೊಂದಿಗೆ ಕೆಲಸ ಮಾಡುತ್ತಿದ್ದ ಬಾಬು ಹಾಗೂ ಶ್ರೀನಿವಾಸ್ ಎಂಬುವರು ತಲೆಮರೆಸಿಕೊಂಡಿದ್ದಾರೆ. ಅವರು ಸಿಕ್ಕರೆ ಆರೋಪಿಗಳು ಹಾಗೂ ಕೊಲೆಗೆ ಕಾರಣ ತಿಳಿದು ಬರಲಿದೆ ಎಂದರು.