ಆನೇಕಲ್: ಯೋಗ ಸರ್ವರಿಗೂ ಸಂಜೀವಿನಿಯಂತೆ. ಯೋಗ ವಿದ್ಯೆ ಕಲಿತವರು ರೋಗ ಮುಕ್ತರು. ಯೋಗ ಕಲಿತವರು ಮತ್ತೊಬ್ಬರಿಗೆ ಪ್ರೇರಣೆ ನೀಡಿ ತಾವು ಕಲಿತದ್ದನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಮಂಡ್ಯದ ಸ್ವಾಮಿ ವಿವೇಕಾನಂದ ಯೋಗಾ ಕೇಂದ್ರದ ಗುರೂಜಿ ಪುಟ್ಟಸ್ವಾಮಿ ತಿಳಿಸಿದ್ದಾರೆ. ಅವರು ತಾಲೂಕಿನ ಅತ್ತಿಬೆಲೆಯಲ್ಲಿ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರಾರ್ಥಿ ಸಿಡಿಹೊಸಕೋಟೆ ಮುನಿರಾಜು ಯೋಗದಿಂದಾಗುವ ಪರಿಣಾಮಗಳನ್ನು ತಿಳಿಸಿದರು. ಅತ್ತಿಬೆಲೆಯ ಮುಖಂಡರಾದ ಮೋಹನ್, ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮುನಿರಾಜು ಹಾಜರಿದ್ದರು. ಶಿಬಿರ: ಆನೇಕಲ್ಲಿನಲ್ಲಿ ಯೋಗ ಶಿಬಿರವು (ಉಚಿತ) ಆಗಸ್ಟ್ 11 ರಿಂದ ಪ್ರಾರಂಭವಾಗುವುದು. ಆಸಕ್ತರು ಮೊಬೈಲ್ ದೂರವಾಣಿ ಸಂಖ್ಯೆ 94 48482129 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ಅಂಗವಿಕಲರ ಶಾಲೆಗೆ ಪುರಸಭೆಯ
ನೆರವು: ಅಧ್ಯಕ್ಷ ಭದ್ರಾರೆಡ್ಡಿ ಅಭಯ
ಆನೇಕಲ್: ಪಟ್ಟಣದ ಚೈತನ್ಯ ಮಹಿಳಾ ಮಂಡಳಿ ವತಿಯಿಂದ ನಡೆಸಲಾಗುತ್ತಿರುವ ಅಂಗವಿಕಲರ ಶಾಲೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಪುರಸಭಾಧ್ಯಕ್ಷ ಭದ್ರಾರೆಡ್ಡಿ ತಿಳಿಸಿದರು.
ಅವರು ಚೈತನ್ಯ ಮಹಿಳಾ ಮಂಡಳಿ ವತಿಯಿಂದ ನಡೆಸುತ್ತಿರುವ ವಿಕಲ ಚೇತನ ಶಾಲೆಯಲ್ಲಿ ಆಯೋಜಿಸಿದ್ದ ಚಿಂತನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಶಾಲೆ ನಡೆಯುತ್ತಿರುವ ಸ್ಥಳವನ್ನು ಪುರಸಭೆಯು 30 ವರ್ಷಗಳಿಂದ ಗುತ್ತಿಗೆ ನೀಡಿದ್ದು, ಈ ಸ್ಥಳವನ್ನು ಸಂಸ್ಥೆಯ ಹೆಸರಿಗೆ ಮಂಜಬರಾತಿ ಮಾಡಿಸಿ ನೋಂದಣಿ ಮಾಡಿಸುವ ಸಂಬಂಧ ಜಿಲ್ಲಾಧಿಕಾರಿಗಲಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಲತಾಂಗಿ ಮಾತನಾಡಿ 26 ವಿಕಲಚೇತನ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದು ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ ಸಂಸ್ಥೆಯ ಸದಸ್ಯರೇ ಚಂದಾ ಹಾಕಿ 20 ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದೆ. ಇತೀಚೆಗೆ ಸಂಸ್ಥೆ ನಡೆಯುವುದು ಕಷ್ಟವಾಗಿದೆ. ಹಾಗಾಗಿ ದಾನಿಗಳು ನೆರವು ನೀಡಬೇಕು ಎಂದರು.
ಆನೇಕಲ್ಲಿನಲ್ಲಿ 60 ಕ್ಕೂ ಹೆಚ್ಚು ಅಂಗವಿಕಲರನ್ನು ಗುರುತಿಸಲಾಗಿದೆ. ಎಲ್ಲಾ ಮಕ್ಕಳಿಗೂ ಅವಕಾಶ ಕಲ್ಪಿಸಲು ಹಣದ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಪ್ರತಿ ಮಾಸಿಕ 25 ಸಾವಿರ ರು. ಖರ್ಚು ಬರುತ್ತದೆ. ಈ ಸಂಸ್ಥೆಯನ್ನು ಉಳಿಸಲು ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಟೌನ್ ಅಧ್ಯಕ್ಷ ಜಿ. ಗೋಪಾಲ್ ಮಾತನಾಡಿ ವೈಯಕ್ತಿಕವಾಗಿ ಪ್ರತಿ ತಿಂಗಳೂ ರು. 10 ಸಾವಿರ ನೀಡುವುದಾಗಿ ಘೋಷಿಸಿದರು.
ಇದೇ ವೇಳೆ ಕಟ್ಟಡದ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ ರು. 10 ಲಕ್ಷ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಆನೇಕಲ್ಲು ನಾಗರಿಕ ವೇದಿಕೆಯ ಮುರಳೀಧರ್ ಮಾತನಾಡಿ ವಾರ್ಷಿಕ ರು. 1 ಲಕ್ಷ ನೆರವು ನೀಡುವುದಾಗಿ ಪ್ರಕಟಿಸಿದರು. ಕನ್ನಡ ಜಾಗೃತಿ ವೇದಿಕೆಯ ಸುಬ್ರಮಣಿ ಮತ್ತು ಸ್ನೇಹಿತರು ವಾರ್ಷಿಕ ರು. 25 ಸಾವಿರ ನೀಡುವುದಾಗಿ ತಿಲಿಸಿದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷ ವಿ. ಮೋಹನ್, ಲಕ್ಷ್ಮೀಕಾಂತರಾಜು, ಸಂಸ್ಥೆಯ ಖಜಾಂಚಿ ಜಯಶ್ರೀ, ಆನೇಕಲ್ ನಾಗರಿಕ ವೇದಿಕೆಯ ಅಧ್ಯಕ್ಷ ಶೈಲೇಂದ್ರಕುಮಾರ್, ಮುಖಂಡರಾದ ಕನ್ನಡ ಸೋಮು, ಸಂಕ್ರಮಣ ಬಳಗದ ಗುರುನಾಗೇಶ್, ಸಂಸ್ಥೆಯ ಸದಸ್ಯರಾದ ಮಮತಾ, ಮೀರಾ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಆರ್. ಶ್ರೀನಿವಾಸ್ ಹಾಜರಿದ್ದರು.