ಮಾಗಡಿ: ನಿಷ್ಪಕ್ಷಪಾತವಾಗಿ ಮತ್ತು ದಕ್ಷತೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ಸಿ. ಬಾಲಕೃಷ್ಣ ತಾಕೀತು ಮಾಡಿದರು.
ಅವರು ಮಾಗಡಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ಕಚೇರಿಯಲ್ಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾಲೂಕಿನಲ್ಲಿ ಇರುವ ಸಮಸ್ಯೆಗಳ ಕುರಿತು ಲಿಖಿತವಾಗಿ ನನಗೆ ಮಾಹಿತಿ ನೀಡಬೇಕು. ಆಯಾ ಇಲಾಖೆಗಳ ಯೋಜನೆಗಳ ಕುರಿತು ಗ್ರಾಮಗಳಲ್ಲಿ ಜನಜಾಗೃತಿ ಮೂಡಿಸಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಪಲಾನುಭವಿಗಳಿಗೆ ತಲುಪಿಸಬೇಕು. ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ದೇವರಾಜು ಅರಸು ಭವನ: ಮಾಗಡಿ ತಾಲೂಕಿಗೆ ದೇವರಾಜು ಅರಸು ಭವನ ನಿರ್ಮಾಣಕ್ಕೆ 1 ಕೋಟಿ ಹಣ ಮಂಜೂರಾಗಿದ್ದು, ಇದಕ್ಕಾಗಿ ನಿವೇಶನ ಗುರುತಿಸಬೇಕಿದೆ ಎಂದು ಬಿಸಿಎಂ ಇಲಾಖಾಧಿಕಾರಿ ಶಾಸಕರ ಗಮನಕ್ಕೆ ತಂದರು. ಈ ಸಂಬಂಧ ಶಾಸಕರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಸುಂದರವಾದ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದರು. ಆಗಲಕೋಟೆ ಮತ್ತು ತಿಪ್ಪಸಂದ್ರದಲ್ಲಿ ಔಟ್ ಪೊಲೀಸ್ ಠಾಣೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇನೆ. ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳುವಂತೆ ತಹಸೀಲ್ದಾರ್ ಶಿವಕುಮಾರ್ ಅವರಿಗೆ ಶಾಸಕರು ಸೂಚಿಸಿದರು.
ತಾಲೂಕಿನಲ್ಲಿ ವಾಡಿಕೆ ಮಳೆಯಾಗದೆ ಕೇವಲ ಶೇ.22 ರಷ್ಟು ಮಾತ್ರ ಬಿತ್ತನೆ ಕಾರ್ಯವಾಗಿದ್ದು, ಉಳಿದಂತೆ ಬಿತ್ತನೆ ಕಾರ್ಯ ಆಗಬೇಕಿದೆ ಎಂದು ಸಭೆಯಲ್ಲಿ ಅಧಿಕಾರಿ ಕೃಷ್ಣಪ್ಪ ತಿಳಿಸಿದರು.
ಅಮಾನತುಗೊಳಿಸಲು ಸೂಚನೆ: ಇಲ್ಲಿನ ಕುದೂರು ಶಾಲೆಯಲ್ಲಿನ ಬಿಸಿಯೂಟದ ಲೆಕ್ಕಪತ್ರಗಳನ್ನು ನೀಡುವಂತೆ 2 ವರ್ಷಗಳಿಂದೂ ಹಲವಾರು ಬಾರಿ ಒತ್ತಾಯಿಸಿದರೂ ಶಿಕ್ಷಕಿಯೊಬ್ಬಳು ಸಂಬಂಧಪಟ್ಟ ದಾಖಲೆಗಳನ್ನು ನೀಡುತ್ತಿಲ್ಲ, ಉಪನಿರ್ದೇಶಕ, ಬಿಇಓ ಸಹ ದಾಖಲೆ ನೀಡುವಂತೆ ಎಚ್ಚರಿಕೆಯ ಆದೇಶ ನೀಡಿದರೂ ದಾಖಲೆಗಳನ್ನು ನೀಡುತ್ತಿಲ್ಲ ಎಂದು ಅಕ್ಷರ ದಾಸೋಹ ಅಧಿಕಾರಿ ರಂಗಸ್ವಾಮಿ ಶಾಸಕರ ಗಮನಕ್ಕೆ ತಂದಾಗ ಕೂಡಲೆ ಶಾಸಕರು ಆಕೆಯ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ಮೂಲಕ ಅಮಾನತಿಗೆ ಶಿಫಾರಸು ಮಾಡುವಂತೆ ಸೂಚಿಸಿದರು.
ಸಾಮಾಜಿಕ ಅರಣ್ಯ ಇಲಾಖೆಗೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ತಾಲೂಕಿನಲ್ಲಿ ಸುಮಾರು 25 ಕಿ.ಮೀ. ನಷ್ಟು ರಸ್ತೆ ಬದಿ ಸಸಿ ನೆಟ್ಟು ಬೆಳೆಸಿ ತೋರಿಸುವಂತೆ ಅರಣ್ಯಾಧಿಕಾರಿ ರಾಕೇಶ್ ಅವರಿಗೆ ಸೂಚಿಸಿದರು.
ತಾ.ಪಂ. ಅಧ್ಯಕ್ಷೆ ಅನುಸೂಯಮ್ಮ ಮರಿಗೌಡ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್. ಕಾಂತರಾಜು, ತಾ.ಪಂ. ಇಓ ಬಿ.ರಂಗೇಗೌಡ ಹಾಗೂ ತಾಲೂಕು ಮಟ್ಟದ ಅಧಿಕಾರಿಗಲು ಹಾಜರಿದ್ದರು.