ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಾನಾ ಗ್ರಾಪಂ ವ್ಯಾಪ್ತಿಯಲ್ಲಿ ಕೊರೆಯಿಸಿ ಹಾಗೇ ಬಿಟ್ಟಿರುವ ನಿರುಪಯುಕ್ತ ಕೊಳವೆ ಬಾವಿಗಳನ್ನು ತಾಪಂ ಅಧ್ಯಕ್ಷೆ ಮಂಜುಳಾ ಡಿ.ಟಿ ವೆಂಕಟೇಶ್ ದಿಢೀರ್ ಕಾರ್ಯಾಚರಣಿ ನಡೆಸಿ ಸಿಬ್ಬಂದಿಯಿಂದ ಮುಚ್ಚಿಸಿದರು.
ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದು ಸರ್ಕಾರದ ಆದೇಶದ
ಹಿನ್ನೆಲೆಯಲ್ಲಿ ಹೊಸಕೋಟೆ ತಾಲೂಕಿನ 26 ಗ್ರಾಪಂದವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಕೊಳವೆ ಬಾವಿಗಳಿವೆ ಎಂದು ಲೆಕ್ಕ ಹಾಕುತ್ತಿರುವಾಗಲೇ ತಾಪಂ ಅಧ್ಯಕ್ಷೆ ಕೆಲ ಗ್ರಾಪಂಗಳಿಗೆ ದಿಢೀರ್ ಭೇಟಿ ನೀಡಿ ಮುಚ್ಚದೇ ಹಾಗೇ ಬಿಟ್ಟಿದ್ದ ಕೊಳವೆ ಬಾವಿಗಳನ್ನು ಗ್ರಾಪಂ ಸಿಬ್ಬಂದಿಯಿಂದ ಮುಚ್ಚಿಸಿದರು. ಅಧಿಕಾರಿಗಳಲ್ಲದೇ ಸ್ಥಳೀಯ ಜನರು ನೀಡಿದ ಮಾಹಿತಿ ಆಧರಿಸಿ ಸುಮಾರು 10ಕ್ಕೂ ಹೆಚ್ಚು ಕಡೆ ಬಾಯಿ ತೆರೆದುಕೊಂಡಿದ್ದ ಕೊಳವೆಗಳನ್ನು ಮುಚ್ಚಿಸುವಲ್ಲಿ ಯಶ್ವಸಿಯಾದರು.
ದೊಡ್ಡ ಅರಳಿಗೆರೆ ಗ್ರಾಪಂದಲ್ಲಿ ಸರ್ಕಾರಿ ಆದೇಶ ಹೊರಬಿದ್ದ ದಿನವೇ ಪಿಡಿಒ ಚೈತ್ರಾ ತಮ್ಮ ಸಿಬ್ಬಂದಿಯೊಂದಿಗೆ ನಾನಾ ಹಳ್ಳಿಗಳಿಗೆ ಭೇಟಿ ನೀಡಿ ಕೊಳವೆ ಬಾವಿಗಳ ಮಾಹಿತಿ ಪಡೆದು ನಿರುಪಯುಕ್ತ ಬಾವಿಗಳನ್ನು ಬಂದ್ ಮಾಡಿಸಿದರು.
250 ಬಹುಮಾನ: ಈ ಮಧ್ಯೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಪಂ ವ್ಯಾಪ್ತಿಯಲ್ಲಿ ಆ.14 ರೊಳಗೆ ಮುಚ್ಚಬೇಕು.15 ನಂತರ ಮುಚ್ಚದೇ ಹಾಗೇ ಬಿಟ್ಟಿರುವ ಕೊಳವೆ ಬಾವಿಗಳ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ರು.250 ಬಹುಮಾನ ಘೋಷಣೆ ಮಾಡಿದೆ. ಸರ್ಕಾರಿ ಲೆಕ್ಕದಲ್ಲಿ ಕೊರೆಯಿಸಿದಷ್ಟು ಹೊಸಕೋಟೆ ತಾಲೂಕಿನ 26 ಗ್ರಾಪಂಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಯಿಸಿದ ಅಂಕಿ-ಅಂಶ ಇಂತಿದೆ.
2011-12 ಸಾಲಿನಲ್ಲಿ ಕೊರೆಯಿಸಿದ್ದು 137 ಕೊಳವೆ ಬಾವಿಗಳಲ್ಲಿ 81 ರಲ್ಲಿ ನೀರು ಸಿಕ್ಕಿದ್ದು, 51 ನಿರುಪಯುಕ್ತಗೊಂಡಿದೆ. 2012-13 ನೇ ಸಾಲಿನಲ್ಲಿ 117 ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಇದರಲ್ಲಿ 86ರಲ್ಲಿ ನೀರು ಸಿಕ್ಕಿತ್ತು.
36 ವಿಫಲ ಆಗಿವೆ. 2013-14 ರಲ್ಲಿ 154 ಕೊಳವೆ ಬಾವಿಗಳು ಕೊರೆಯಿಸಿದ್ದು ಕೇವಲ 5 ರಲ್ಲಿ ಮಾತ್ರ ನೀರು ಸಿಕ್ಕಿದೆ. 48 ಕಡೆ ವಿಫಲವಾಗಿದ್ದು ನಿರುಪಯುಕ್ತಗೊಂಡಿರುವ ಈ ಕೊಳುವೆ ಬಾವಿಗಳನ್ನು ಮುಚ್ಚಲಾಗುವುದು ಎಂದು ಇಓ ದ್ಯಾವಪ್ಪ ತಿಳಿಸಿದ್ದಾರೆ.